ಸನ್‌ರೈಸರ್ಸ್‌ ಎದುರು ಆರ್‌ಸಿಬಿಗೆ ನಿರಾಸೆ; 4 ರನ್ ವೀರೋಚಿತ ಸೋಲು

rcb and srh match for web
Published on

ಅಬುಧಾಬಿ: ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ (40ರನ್, 25 ಎಸೆತ, 3 ಬೌಂಡರಿ, 2 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ನಡುವೆಯೂ ಸನ್‌ರೈಸರ್ಸ್‌ ಹೈದರಾಬಾದ್ ಬೌಲರ್‌ಗಳ ಸಂಘಟಿತ ದಾಳಿ ಎದುರು ಸಾಧಾರಣ ಮೊತ್ತ ಬೆನ್ನಟ್ಟಲು ವಿಲವಾದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ 4 ರನ್‌ಗಳಿಂದ ವೀರೋಚಿತ ಸೋಲು ಕಂಡಿತು. ಕಡೇ ಓವರ್‌ನಲ್ಲಿ ಆರ್‌ಸಿಬಿ ಜಯ ದಾಖಲಿಸಲು 13 ರನ್‌ಗಳ ಅವಶ್ಯಕತೆ ಇದ್ದರೂ ಎಬಿ ಡಿವಿಲಿಯರ್ಸ್‌ (19*ರನ್, 13ಎಸೆತ, 1 ಬೌಂಡರಿ, 1 ಸಿಕ್ಸರ್) ಎದುರಿಸಿದ 4 ಎಸೆತಗಳಲ್ಲಿ ಒಂದು ಸಿಕ್ಸರ್ ಸಹಿತ 7 ರನ್ ಗಳಿಸಲಷ್ಟೇ ಶಕ್ತರಾದರು. ಇದರಿಂದ ವಿರಾಟ್ ಕೊಹ್ಲಿ ಬಳಗ ಅರಬ್ ನಾಡಿನಲ್ಲಿ ಸತತ 4ನೇ ಗೆಲುವಿನಿಂದ ವಂಚಿತವಾಯಿತು. ಈಗಾಗಲೇ ಪ್ಲೇಆಫ್ ಖಾತ್ರಿಪಡಿಸಿಕೊಂಡಿರುವ ಆರ್‌ಸಿಬಿ ಅಗ್ರ 2 ರೊಳಗಿನ ಸ್ಥಾನಕ್ಕೇರುವ ಅವಕಾಶ ತಪ್ಪಿಸಿಕೊಂಡಿತು.

ಶೇಖ್ ಜಯೇದ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್‌, ಆರಂಭಿಕ ಜೇಸನ್ ರಾಯ್ (44 ರನ್, 38 ಎಸೆತ, 5 ಬೌಂಡರಿ) ಹಾಗೂ ನಾಯಕ ಕೇನ್ ವಿಲಿಯಮ್ಸನ್ (31 ರನ್, 29 ಎಸೆತ, 4 ಬೌಂಡರಿ) ಸಮಯೋಚಿತ ನಿರ್ವಹಣೆ ನೆರವಿನಿಂದ 7 ವಿಕೆಟ್‌ಗೆ 141 ರನ್‌ಗಳಿಸಿತು. ಆರ್‌ಸಿಬಿ ಪರ ವೇಗಿಗಳಾದ ಹರ್ಷಲ್ ಪಟೇಲ್ (33ಕ್ಕೆ 3) ಹಾಗೂ ಡೇನಿಯಲ್ ಕ್ರಿಶ್ಚಿಯನ್ (14ಕ್ಕೆ2) ಮಾರಕ ದಾಳಿ ಸಂಘಟಿಸಿದರು. ಪ್ರತಿಯಾಗಿ ಆರ್‌ಸಿಬಿ ತಂಡ 6 ವಿಕೆಟ್‌ಗೆ 137 ರನ್ ಕಲೆಹಾಕಲಷ್ಟೇ ಶಕ್ತವಾಯಿತು.

ಸನ್‌ರೈಸರ್ಸ್‌ ಹೈದರಾಬಾದ್: 7 ವಿಕೆಟ್‌ಗೆ 141 (ಜೇಸನ್ ರಾಯ್ 44, ವಿಲಿಯಮ್ಸನ್ 31, ಸಾಹ 10, ಹೋಲ್ಡರ್ 16, ಹರ್ಷಲ್ ಪಟೇಲ್ 33ಕ್ಕೆ 3, ಡೇನಿಯಲ್ ಕ್ರಿಶ್ಚಿಯನ್ 14ಕ್ಕೆ 2), ಆರ್‌ಸಿಬಿ: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 137 (ಕೊಹ್ಲಿ 5, ಪಡಿಕಲ್ 41, ಗ್ಲೆನ್ ಮ್ಯಾಕ್ಸ್‌ವೆಲ್ 40, ಎಬಿ ಡಿವಿಲಿಯರ್ಸ್‌ 19*, ಭುವನೇಶ್ವರ್ ಕುಮಾರ್ 25ಕ್ಕೆ 1, ಜೇಸನ್ ಹೋಲ್ಡರ್ 27ಕ್ಕೆ 1, ಸಿದ್ದಾರ್ಥ್ ಕೌಲ್ 24ಕ್ಕೆ 1, ಉಮ್ರಾನ್ ಮಲಿಕ್ 21ಕ್ಕೆ 1, ರಶೀದ್ ಖಾನ್ 39ಕ್ಕೆ 1).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net