ಇಂದು ಆರ್‌ಸಿಬಿಗೆ ರಾಜಸ್ಥಾನ ರಾಯಲ್ಸ್ ಸವಾಲು

royals and rcb for web
Published on

ದುಬೈ: ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿದ ವಿಶ್ವಾಸದಲ್ಲಿರುವ ಆರ್‌ಸಿಬಿ ತಂಡ ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಬುಧವಾರ ನಡೆಯಲಿರುವ ಐಪಿಎಲ್-14ರ ಎರಡನೇ ಭಾಗದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ. ವಿರಾಟ್ ಕೊಹ್ಲಿ ಬಳಗ ರಾಯಲ್ಸ್ ಎದುರು ಜಯಿಸಿದರೆ ಪ್ಲೇಆಫ್ ಹಂತಕ್ಕೆ ಮತ್ತಷ್ಟು ಸನಿಹವಾಗಲಿದೆ. ಮತ್ತೊಂದೆಡೆ, ಹ್ಯಾಟ್ರಿಕ್ ಸೋಲಿನ ಭೀತಿಯಲ್ಲಿರುವ ಸಂಜು ಸ್ಯಾಮ್ಸನ್ ಬಳಗಕ್ಕೆ ಮಾಡು ಇಲ್ಲವೆ ಮಡಿ ಕದನ ಇದಾಗಿದೆ.

ಅರಬ್ ನಾಡಿನಲ್ಲಿ ಆರಂಭಿಕ ಎರಡೂ ಪಂದ್ಯಗಳಲ್ಲಿ ಸೋಲು ಕಂಡ ಬಳಿಕ ಗೆಲುವಿನ ಹಳಿ ಏರಿರುವ ಆರ್‌ಸಿಬಿ ಪ್ಲೇಆಫ್ ನತ್ತ ಚಿತ್ತ ನೆಟ್ಟಿದೆ. ಮೊದಲ ಪಂದ್ಯದಲ್ಲಿ ಕೆಕೆಆರ್ ಎದುರು 92 ರನ್‌ಗಳಿಗೆ ಸರ್ವಪತನ ಕಂಡಿದ್ದರೆ, ಎರಡನೇ ಹಣಾಹಣಿಯಲ್ಲಿ ಸಿಎಸ್‌ಕೆಗೆ ಸುಲಭ ತುತ್ತಾಗಿತ್ತು. ನಾಯಕ ಕೊಹ್ಲಿ ಸತತ ಎರಡು ಅರ್ಧಶತಕ ಸಿಡಿಸುವ ಮೂಲಕ ಉತ್ತಮ ಫಾರ್ಮ್‌ನಲ್ಲಿದ್ದರೆ, ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ಲಯಕ್ಕೆ ಮರಳಿರುವುದು ತಂಡದ ವಿಶ್ವಾಸ ಹೆಚ್ಚಿಸಿದೆ. ಆದರೆ, ಎಬಿ ಡಿವಿಲಿಯರ್ಸ್‌ ಮೂರು ಹಣಾಹಣಿಯಲ್ಲೂ ಸ್ಫೋಟಿಸಿಲ್ಲ. ಎಬಿಡಿ ಫಾರ್ಮ್‌ಗೆ ಮರಳಬೇಕಿದೆ. ಉಳಿದಂತೆ ಬ್ಯಾಟಿಂಗ್ ವಿಭಾಗದಲ್ಲಿ ಆರ್‌ಸಿಬಿ ಬಲಿಷ್ಠವಾಗಿದೆ.

ಟೀಮ್ ನ್ಯೂಸ್:

ಆರ್‌ಸಿಬಿ: ಹಿಂದಿನ ಪಂದ್ಯದಲ್ಲಿ ಆಡಿದ ತಂಡವೇ ಬಹುತೇಕ ಕಣಕ್ಕಿಳಿಯಲಿದೆ. ಮುಂಬೈ ಎದುರು ವಿಫಲರಾದ ಕೈಲ್ ಜೇಮಿಸನ್ ಬದಲಿಗೆ ವನಿಂದು ಹಸರಂಗ ವಾಪಸಾಗಬಹುದು.

ರಾಯಲ್ಸ್: ವಿದೇಶಿ ಆಟಗಾರರ ನಿರ್ವಹಣೆಯೇ ದೊಡ್ಡ ಚಿಂತೆಯಾಗಿದೆ. ಲಿಯಾಮ್ ಲಿವಿಂಗ್‌ಸ್ಟೋನ್ ಬದಲಿಗೆ ಡೇವಿಡ್ ಮಿಲ್ಲರ್ ವಾಪಸಾಗಬಹುದು. ಕಾರ್ತಿಕ್ ತ್ಯಾಗಿ ಫಿಟ್ ಆಗಿ ಮರಳಿದರೆ ಜೈದೇವ್ ಉನಾದ್ಕತ್ ಹೊರಗುಳಿಯಲಿದ್ದಾರೆ.

ಮುಖಾಮುಖಿ: 23

ಆರ್‌ಸಿಬಿ: 11

ರಾಜಸ್ಥಾನ: 10

ರದ್ದು:2

ಹಿಂದಿನ ಮುಖಾಮುಖಿ: ಮುಂಬೈನಲ್ಲಿ ಆರ್‌ಸಿಬಿಗೆ 10 ವಿಕೆಟ್ ಜಯ

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ಪಂದ್ಯ ಆರಂಭ: ರಾತ್ರಿ 7.30

* 18: ಮ್ಯಾಕ್ಸ್‌ವೆಲ್, ಇನ್ನು 18 ರನ್ ಬಾರಿಸಿದರೆ ಟಿ20 ಕ್ರಿಕೆಟ್‌ನಲ್ಲಿ 7 ಸಾವಿರ ರನ್ ಪೂರೈಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net