ಇಂದು ಆರ್‌ಸಿಬಿಗೆ ರಾಜಸ್ಥಾನ ಸವಾಲು ; ಸತತ 4ನೇ ಗೆಲುವಿನತ್ತ ಕೊಹ್ಲಿ ಪಡೆ ಕಣ್ಣು

royals and rcb for web
Published on

ಮುಂಬೈ: ಚೆನ್ನೈನ ಚೆಪಾಕ್ ಅಂಗಳದಲ್ಲಿ ಹ್ಯಾಟ್ರಿಕ್ ಗೆಲುವಿನೊಂದಿಗೆ ಅಜೇಯವಾಗುಳಿದು ವಾಣಿಜ್ಯ ನಗರಿಗೆ ಬಂದಿಳಿದಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಐಪಿಎಲ್-14ರ ತನ್ನ 4ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಗುರುವಾರ ಎದುರಿಸಲಿದೆ. ಟೂರ್ನಿಯಲ್ಲಿ ಇದುವರೆಗೆ ಸರ್ವಾಂಗೀಣ ನಿರ್ವಹಣೆ ತೋರುವ ಮೂಲಕ ಗಮನಸೆಳೆದಿರುವ ವಿರಾಟ್ ಕೊಹ್ಲಿ ಬಳಗ ಆತ್ಮವಿಶ್ವಾಸದಲ್ಲಿದೆ. ಟೂರ್ನಿಯಲ್ಲಿ ಇದುವರೆಗೆ ಅಜೇಯವಾಗಿರುವ ಏಕೈಕ ತಂಡ ಎನಿಸಿಕೊಂಡಿರುವ ಆರ್‌ಸಿಬಿ ಜಯದ ನಾಗಾಲೋಟ ಮುಂದುವರಿಸುವ ಕನಸಿನಲ್ಲಿದೆ. ಲೀಗ್‌ನ ಉದ್ಘಾಟನಾ ಹಣಾಹಣಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿದ್ದ ಆರ್‌ಸಿಬಿ, ಬಳಿಕ ಸನ್‌ರೈಸರ್ಸ್‌ ಹಾಗೂ ಕೆಕೆಆರ್ ತಂಡಗಳನ್ನು ಸೋಲಿಸಿತ್ತು. ಮತ್ತೊಂದೆಡೆ, ಇದುವರೆಗೆ ಆಡಿರುವ 3 ಪಂದ್ಯಗಳಲ್ಲಿ ಏಕೈಕ ಗೆಲುವು ಕಂಡಿರುವ ಸಂಜು ಸ್ಯಾಮ್ಸನ್ ಬಳಗ, ಉಳಿದೆರಡು ಪಂದ್ಯಗಳ ಸೋಲಿನಿಂದ ಕಂಗೆಟ್ಟಿದೆ.

*ಆತ್ಮವಿಶ್ವಾಸದಲ್ಲಿ ಕೊಹ್ಲಿ ಬಳಗ

ಚೆಪಾಕ್‌ನ ಸ್ಪರ್ಧಾತ್ಮಕ ಪಿಚ್‌ನಲ್ಲಿ ಭರ್ಜರಿ ನಿರ್ವಹಣೆ ತೋರಿರುವ ಆರ್‌ಸಿಬಿ ಇದೀಗ ರನ್‌ಮಳೆಗೆ ಸಾಕ್ಷಿಯಾಗುತ್ತಿರುವ ವಾಂಖೆಡೆ ಅಂಗಳದ ಸತ್ವಪರೀಕ್ಷೆಗೆ ಸಜ್ಜಾಗಿದೆ. ಕೆಕೆಆರ್ ವಿರುದ್ಧದ ಕಳೆದ ಪಂದ್ಯದಲ್ಲಿ ಕೇವಲ ಮೂವರು ವಿದೇಶಿಗರೊಂದಿಗೆ ಕಣಕ್ಕಿಳಿದಿದ್ದ ಆರ್‌ಸಿಬಿ, ರಾಜಸ್ಥಾನ ರಾಯಲ್ಸ್ ವಿರುದ್ಧವೂ ಅದೇ ತಂಡವನ್ನು ಕಣಕ್ಕಿಳಿಸುವ ಸಾಧ್ಯತೆಗಳಿವೆ. ಆಡಂ ಜಂಪಾ, ಕೇನ್ ರಿಚರ್ಡ್‌ಸನ್, ಆಲ್ರೌಂಡರ್ ಡೇನಿಯಲ್ ಕ್ರಿಶ್ಚಿಯನ್, ಕೋವಿಡ್-19ರಿಂದ ಚೇತರಿಸಿಕೊಂಡಿರುವ ಡೇನಿಯಲ್ ಸ್ಯಾಮ್ಸ್ ಕೂಡ ವಿದೇಶಿ ಕೋಟಾದಡಿ ಲಭ್ಯರಿದ್ದಾರೆ. ಎಬಿ ಡಿವಿಲಿಯರ್ಸ್‌ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಉತ್ತಮ ಾರ್ಮ್‌ನಲ್ಲಿರುವುದು ತಂಡದ ಪ್ಲಸ್ ಪಾಯಿಂಟ್. ಮೊಹಮದ್ ಸಿರಾಜ್ ಹಾಗೂ ಹರ್ಷಲ್ ಪಟೇಲ್ ಡೆತ್ ಓವರ್‌ಗಳಲ್ಲಿ ತಂಡಕ್ಕೆ ಆಸರೆಯಾಗುತ್ತಿದ್ದಾರೆ. ಯಜುವೇಂದ್ರ ಚಾಹಲ್ ಹಾಗೂ ವಾಷಿಂಗ್ಟನ್ ಸುಂದರ್ ಜೋಡಿ ವಿಕೆಟ್ ಕಬಳಿಸುವ ಛಾತಿ ಹೊಂದಿದ್ದರೂ ಕೊಂಚ ದುಬಾರಿಯಾಗುತ್ತಿದೆ.

*ರಾಯಲ್ಸ್ ಕೈಕೊಡುತ್ತಿರುವ ಬ್ಯಾಟಿಂಗ್

ಸಂಜು ಸ್ಯಾಮ್ಸನ್, ಜೋಸ್ ಬಟ್ಲರ್, ಡೇವಿಡ್ ವಿಲ್ಲರ್, ಕ್ರಿಸ್ ಮಾರಿಸ್ ಒಳಗೊಂಡ ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿದ್ದರೂ ರಾಯಲ್ಸ್ ತಂಡಕ್ಕೆ ಅಸ್ಥಿರ ನಿರ್ವಹಣೆ ಕಾಡುತ್ತಿದೆ. ತಂಡದಿಂದ ಸಂಘಟಿತ ಹೋರಾಟ ಬರುತ್ತಿಲ್ಲ. ಈಗಾಗಲೇ ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್ ಹಾಗೂ ಜೋಫ್ರಾ ಆರ್ಚರ್ ಹೊರಬಿದ್ದರೆ, ಟೂರ್ನಿ ಮಧ್ಯದಲ್ಲಿಯೇ ಬಯೋ ಬಬಲ್ ಒತ್ತಡದಿಂದಾಗಿ ಲಿಯಾಮ್ ಲಿವಿಂಗ್‌ಸ್ಟೋನ್ ಕೂಡ ತವರಿಗೆ ವಾಪಸಾಗಿದ್ದಾರೆ. ಮೊದಲ ಪಂದ್ಯದಲ್ಲಿ ಪಂಜಾಬ್ ನೀಡಿದ 221 ರನ್ ಬೆನ್ನಟ್ಟಲು ಹೋಗಿ ಕೇವಲ 4 ರನ್‌ಗಳಿಂದ ವೀರೋಚಿತ ಸೋಲು ಕಂಡಿದ್ದ ರಾಜಸ್ಥಾನ, ಡೆಲ್ಲಿ ಕ್ಯಾಪಿಟಲ್ಸ್ ಎದುರು 3 ವಿಕೆಟ್ ಜಯ ದಾಖಲಿಸಿತ್ತು. ಆದರೆ, ಸಿಎಸ್‌ಕೆ ಎದುರು ನಿಸ್ತೇಜ ನಿರ್ವಹಣೆಯಿಂದ ಹೀನಾಯವಾಗಿ ಸೋಲು ಕಂಡಿತ್ತು. ಪ್ರಮುಖವಾಗಿ ತಂಡದ ಬ್ಯಾಟಿಂಗ್ ವಿಭಾಗವೇ ಹಿನ್ನಡೆಯುಂಟು ಮಾಡಿದೆ. ಜೋಫ್ರಾ ಆರ್ಚರ್ ಅನುಪಸ್ಥಿತಿಯಲ್ಲಿ ಕ್ರಿಸ್ ಮಾರಿಸ್, ಬಾಂಗ್ಲಾದೇಶದ ವೇಗಿ ಮುಸ್ತಾಫಿಜರ್ ರೆಹಮಾನ್ ಬೌಲಿಂಗ್‌ನಲ್ಲಿ ಗಮನಸೆಳೆಯುತ್ತಿದ್ದಾರೆ.

ಆರ್‌ಸಿಬಿ: ಕಳೆದ ಪಂದ್ಯದಲ್ಲಿ ಕೇವಲ 3 ವಿದೇಶಿಗರಿಗಷ್ಟೇ ಅವಕಾಶ ನೀಡಲಾಗಿತ್ತು. ಈ ಪಂದ್ಯದಲ್ಲಿ ನಾಲ್ಕು ಮಂದಿಗೆ ಅವಕಾಶ ನೀಡಿದರೆ ರಜತ್ ಪಟಿದಾರ್ ಅವರನ್ನು ಮತ್ತೊಮ್ಮೆ ತಂಡದಿಂದ ಕೈಬಿಟ್ಟು ಡೇನಿಯಲ್ ಸ್ಯಾಮ್ಸ್ ಅಥವಾ ಕೇನ್ ರಿಚರ್ಡ್‌ಸನ್ ಕಣಕ್ಕಿಳಿಯಬಹುದು. ಉತ್ತಮ ಫಾರ್ಮ್‌ನಲ್ಲಿರುವ ತಂಡದಲ್ಲಿ ಹೆಚ್ಚಿನ ಬದಲಾವಣೆ ನಿರೀಕ್ಷೆ ಇಲ್ಲ.

ಕಳೆದ ಪಂದ್ಯ: ಕೆಕೆಆರ್ ಎದುರು 38 ರನ್ ಜಯ.

ರಾಜಸ್ಥಾನ ರಾಯಲ್ಸ್: ಡೆಲ್ಲಿ ಕ್ಯಾಪಿಟಲ್ಸ್ ಎದುರು ಉತ್ತಮ ನಿರ್ವಹಣೆ ತೋರಿದ್ದ ಜೈದೇವ್ ಉನಾದ್ಕತ್, ಸಿಎಸ್‌ಕೆ ಎದುರು ದುಬಾರಿಯಾಗಿದ್ದರು. ಸ್ಪಿನ್ನರ್‌ಗೆ ಮಣೆ ಹಾಕಿದರೆ ಉನಾದ್ಕತ್ ಬದಲಿಗೆ ಶ್ರೇಯಸ್ ಗೋಪಾಲ್ ಕಣಕ್ಕಿಳಿಯುವ ಸಾಧ್ಯತೆಗಳಿವೆ.

ಕಳೆದ ಪಂದ್ಯ: ಸಿಎಸ್‌ಕೆ ಎದುರು 45 ರನ್‌ಗಳಿಂದ ಸೋಲು.

ಮುಖಾಮುಖಿ: 22, ಆರ್‌ಸಿಬಿ: 10, ರಾಯಲ್ಸ್: 10, ರದ್ದು: 2

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ಆರಂಭ: ರಾತ್ರಿ 7.30ಕ್ಕೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net