

ಅಹಮದಾಬಾದ್: ಸತತ 4 ಜಯ ದಾಖಲಿಸಿದ ಬಳಿಕ ಕಡೇ ಮೂರು ಹಣಾಹಣಿಯಲ್ಲಿ 2ರಲ್ಲಿ ಸೋತಿರುವ ಆರ್‌ಸಿಬಿ ತಂಡ ಪ್ರಸಕ್ತ ಲೀಗ್‌ನ ಎರಡನೇ ಸುತ್ತಿನ ಹೋರಾಟಕ್ಕೆ ಸಜ್ಜಾಗಿದೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸೋಮವಾರ ನಡೆಯಲಿರುವ ಐಪಿಎಲ್-14ರ ತನ್ನ 8ನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬಳಗ ಗೆಲುವಿಗಾಗಿ ಪರಿತಪಿಸುತ್ತಿರುವ ಕೆಕೆಆರ್ ತಂಡವನ್ನು ಎದುರಿಸಲಿದೆ. ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿದ್ದರೂ ಕಡೇ ಮೂರು ಪಂದ್ಯಗಳಲ್ಲಿ ಹಳಿತಪ್ಪಿರುವ ಆರ್‌ಸಿಬಿ ತಂಡ ಗೆಲುವಿನ ಲಯಕ್ಕೆ ಮರಳುವ ವಿಶ್ವಾಸದಲ್ಲಿದೆ. ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಗ್ಲೆನ್ ಮ್ಯಾಕ್ಸ್‌ವೆಲ್ ಒಳಗೊಂಡ ಬ್ಯಾಟಿಂಗ್ ಪಡೆ ಹೊಂದಿರುವ ಆರ್‌ಸಿಬಿ ಕೆಕೆಆರ್ ಎದುರು ಮತ್ತೊಂದು ಗೆಲುವಿನ ವಿಶ್ವಾಸದಲ್ಲಿದೆ. ಮತ್ತೊಂದೆಡೆ, ಮೊದಲ ಹಣಾಹಣಿಯಲ್ಲಿ ಆರ್‌ಸಿಬಿ ಎದುರು ಸೋಲನುಭವಿಸಿರುವ ಕೆಕೆಆರ್ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.
* ಆರ್‌ಸಿಬಿಗೆ ಕಾಡುತ್ತಿರುವ ಅಸ್ಥಿರ ನಿರ್ವಹಣೆ
ಸತತ ಗೆಲುವಿನ ನಾಗಾಲೋಟದ ಬಳಿಕ ಕಳೆದ ಮೂರು ಪಂದ್ಯಗಳಲ್ಲೂ ಆರ್‌ಸಿಬಿ ಏರಿಳಿತ ಕಂಡಿದೆ. ಅದರಲ್ಲೂ ಡೆಲ್ಲಿ ಕ್ಯಾಪಿಟಲ್ಸ್ ಎದುರು ಕೇವಲ 1 ರನ್‌ನಿಂದ ಜಯ ದಾಖಲಿಸಿದ್ದ ಆರ್‌ಸಿಬಿ, ಉಳಿದ ಎರಡು ಪಂದ್ಯಗಳಲ್ಲಿ ಎದುರಾಳಿ ತಂಡಕ್ಕೆ ಸುಲಭವಾಗಿ ಶರಣಾಗಿತ್ತು. ಆರಂಭಿಕ ಬ್ಯಾಟ್ಸ್‌ಮನ್ ದೇವದತ್ ಪಡಿಕಲ್ ರಾಜಸ್ಥಾನ ರಾಯಲ್ಸ್ ಎದುರು ಅಜೇಯ ಶತಕ ಸಿಡಿಸಿದ ಬಳಿಕ ಸತತ ಮೂರು ಪಂದ್ಯಗಳಲ್ಲೂ ವಿಫಲರಾಗಿದ್ದಾರೆ. ಹಿಂದಿನ ಪಂದ್ಯದಲ್ಲಿ ಪಂಜಾಬ್ ಎದುರು ಪ್ರಮುಖ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದಾಗಿ ಆರ್‌ಸಿಬಿ ಹೀನಾಯವಾಗಿ ಶರಣಾಗಿತ್ತು. ಪಡಿಕಲ್, ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಒಳಗೊಂಡ ಬ್ಯಾಟಿಂಗ್ ಸ್ಫೋಟಿಸಬೇಕಿದೆ. ಆದರೆ, ಬೌಲರ್‌ಗಳು ದುಬಾರಿಯಾಗುತ್ತಿರುವುದು ತಂಡದ ಪಾಲಿಗೆ ನುಂಗಲಾರದ ತುತ್ತಾಗಿದೆ. ಆರ್‌ಸಿಬಿ ಲೀಗ್‌ನಲ್ಲಿ ಇದುವರೆಗೂ ಆಡಿರುವ 7 ಪಂದ್ಯಗಳಲ್ಲಿ 5 ಗೆಲುವು, 2ರಲ್ಲಿ ಸೋಲನುಭವಿಸಿದೆ.
* ಪುಟಿದೇಳುವ ವಿಶ್ವಾಸದಲ್ಲಿ ಕೆಕೆಆರ್
ಇದುವೆರಗೂ ಆಡಿರುವ 7 ಪಂದ್ಯಗಳಲ್ಲಿ 5 ಸೋಲು, 2 ಗೆಲುವು ಕಂಡಿರುವ ಕೆಕೆಆರ್ ತಂಡ ಗೆಲುವಿನ ಒತ್ತಡದಲ್ಲಿ ಸಿಲುಕಿದೆ. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಶುಭಮಾನ್ ಗಿಲ್, ನಿತೀಶ್ ರಾಣಾ ಜೋಡಿಯಿಂದ ನಿರೀಕ್ಷಿತ ನಿರ್ವಹಣೆ ಬರುತ್ತಿಲ್ಲ. ನಾಯಕ ಇವೊಯಿನ್ ಮಾರ್ಗನ್, ದಿನೇಶ್ ಕಾರ್ತಿಕ್, ರಾಹುಲ್ ತ್ರಿಪಾಠಿ ದೊಡ್ಡ ಮೊತ್ತ ಪೇರಿಸಲು ವಿಫಲರಾಗುತ್ತಿದ್ದರೆ, ಆಂಡ್ರೆ ರಸೆಲ್ ಏಕಾಂಗಿ ನಿರ್ವಹಣೆ ಮೂಲಕ ಮಧ್ಯಮ ಕ್ರಮಾಂಕದಲ್ಲಿ ಆಸರೆಯಾಗುತ್ತಿದ್ದಾರೆ. ಲೀಗ್‌ನ ಮೊದಲಾರ್ಧ ಹೀನಾಯ ಪ್ರದರ್ಶನ ತೋರಿರುವ ಕೆಕೆಆರ್ ತಂಡಕ್ಕೆ ಕೆಲವೊಂದು ಬದಲಾವಣೆ ಅನಿವಾರ್ಯವಾಗಿದೆ.
ಟೀಮ್ ನ್ಯೂಸ್:
ಆರ್‌ಸಿಬಿ: ಸತತವಾಗಿ ವಿಫಲರಾಗುತ್ತಿರುವ ರಜತ್ ಪಾಟಿದಾರ್ ಬದಲಿಗೆ ವಾಷಿಂಗ್ಟನ್ ಸುಂದರ್ ಹನ್ನೊಂದರ ಬಳಗಕ್ಕೆ ವಾಪಸಾಗಬಹುದು. ಉಳಿದಂತೆ ತಂಡದಲ್ಲಿ ಹೆಚ್ಚಿನ ಬದಲಾವಣೆ ನಿರೀಕ್ಷಿಸುವಂತಿಲ್ಲ.
ಕಳೆದ ಪಂದ್ಯ: ಪಂಜಾಬ್ ಕಿಂಗ್ಸ್ ಎದುರು 34 ರನ್ ಸೋಲು
ಕೆಕೆಆರ್: ತಂಡಕ್ಕೆ ಕೆಲವೊಂದು ಬದಲಾವಣೆ ಅನಿವಾರ್ಯವಾಗಿದೆ. ಸತತವಾಗಿ ವಿಫಲವಾಗುತ್ತಿರುವ ಶುಭಮಾನ್ ಗಿಲ್‌ರನ್ನು ಹೊರಗಿಟ್ಟು, ನಿತೀಶ್ ರಾಣಾ ಜತೆಗೂಡಿ ಸುನೀಲ್ ನಾರಾಯಣ್ ಇನಿಂಗ್ಸ್ ಆರಂಭಿಸಬಹುದು. ಗಿಲ್ ಹೊರಗಿಟ್ಟರೆ, ಮಧ್ಯಮ ಕ್ರಮಾಂಕದಲ್ಲಿ ಶೆಲ್ಡನ್ ಜಾಕ್ಸನ್ ಅಥವಾ ಗುರ್‌ಕೀರತ್ ಮಾನ್ ಸಿಂಗ್ ಸ್ಥಾನ ಪಡೆಯಬಹುದು. ಶಿವಂ ಮಾವಿ ಅಥವಾ ಕಮಲೇಶ್ ನಾಗರಕೋಟಿ ಇಬ್ಬರಲ್ಲಿ ಒಬ್ಬರು ಕಣಕ್ಕಿಳಿಯಲಿದ್ದಾರೆ.
ಕಳೆದ ಪಂದ್ಯ: ಡೆಲ್ಲಿ ಎದುರು 7 ವಿಕೆಟ್ ಸೋಲು
ಮುಖಾಮುಖಿ: 27, ಆರ್‌ಸಿಬಿ: 13, ಕೆಕೆಆರ್: 14
ಮೊದಲ ಹಣಾಹಣಿ: ಆರ್‌ಸಿಬಿಗೆ 38 ರನ್ ಜಯ
ಆರಂಭ: ರಾತ್ರಿ 7.30ಕ್ಕೆ
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್