ಹ್ಯಾಟ್ರಿಕ್ ಗೆಲುವಿನ ಹಂಬಲದಲ್ಲಿ ಆರ್‌ಸಿಬಿ; ಇಂದು ಕೋಲ್ಕತ ನೈಟ್‌ರೈಡರ್ಸ್‌ ಎದುರಾಳಿ

KKR AND RCB MATCH
Published on

ಚೆನ್ನೈ: ಐಪಿಎಲ್-14ರಲ್ಲಿ ಆಡಿದ ಮೊದಲೆರಡೂ ಪಂದ್ಯಗಳಲ್ಲಿ ಜಯಿಸಿದ ಏಕೈಕ ತಂಡವೆನಿಸಿರುವ ರಾಯಲ್ಸ್ ಚಾಲೆಂಜರ್ಸ್‌ ಬೆಂಗಳೂರು ಇದೀಗ ಹ್ಯಾಟ್ರಿಕ್ ಗೆಲುವಿನತ್ತ ದೃಷ್ಟಿ ನೆಟ್ಟಿದೆ. ಚೆಪಾಕ್ ಅಂಗಳದಲ್ಲಿ ಆಡಿದ ಮೊದಲ ಎರಡು ಪಂದ್ಯಗಳಲ್ಲಿ ರೋಚಕ ಗೆಲುವು ದಾಖಲಿಸಿದ ವಿಶ್ವಾಸದಲ್ಲಿರುವ ವಿರಾಟ್ ಕೊಹ್ಲಿ ಬಳಗ ಭಾನುವಾರದ ಮೊದಲ ಮುಖಾಮುಖಿಯಲ್ಲಿ ಕೋಲ್ಕತ ನೈಟ್‌ರೈಡರ್ಸ್‌ ತಂಡವನ್ನು ಎದುರಿಸಲಿದೆ. ಇದು ಹಾಲಿ ಆವೃತ್ತಿಯಲ್ಲಿ ಮಧ್ಯಾಹ್ನದ ವೇಳೆಗೆ ಆರಂಭಗೊಳ್ಳುತ್ತಿರುವ ಮೊದಲ ಪಂದ್ಯವಾಗಿರಲಿದೆ. ಮೇಲುನೋಟಕ್ಕೆ ಆರ್‌ಸಿಬಿ ತಂಡವೇ ಫೇವರಿಟ್ ಎನಿಸಿದೆ. ಕೆಕೆಆರ್ ತಂಡವೂ ಟೂರ್ನಿಯಲ್ಲಿ ಶುಭಾರಂಭ ಕಂಡಿದ್ದರೂ, 2ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲ್ಲಬಹುದಾಗಿದ್ದ ಪಂದ್ಯದಲ್ಲಿ ದಿಢೀರ್ ಕುಸಿತ ಕಂಡು ಸೋತಿತ್ತು. ಹೀಗಾಗಿ ಇವೊಯಿನ್ ಮಾರ್ಗನ್ ಬಳಗವೂ ಇದೀಗ ಗೆಲುವಿನ ಹಾದಿಗೆ ಮರಳುವ ತವಕದಲ್ಲಿದೆ.

*ವಿಶ್ವಾಸದಲ್ಲಿ ವಿರಾಟ್ ಕೊಹ್ಲಿ ಪಡೆ
ಕಳೆದ ಆವೃತ್ತಿಯ ಬಳಿಕ ಆರ್‌ಸಿಬಿ ತಂಡದಲ್ಲಿ ಮಾಡಲಾಗಿರುವ ಕೆಲ ಬದಲಾವಣೆಗಳು ಮೊದಲೆರಡೂ ಪಂದ್ಯಗಳಲ್ಲಿ ಲಪ್ರದವೆನಿಸಿದೆ. ಡೆಲ್ಲಿಯಿಂದ ವರ್ಗಾವಣೆಗೊಂಡ ವೇಗಿ ಹರ್ಷಲ್ ಪಟೇಲ್ ಮತ್ತು ಹರಾಜಿನಲ್ಲಿ 14.25 ಕೋಟಿ ರೂಪಾಯಿಗೆ ಖರೀದಿಸಲಾದ ಗ್ಲೆನ್ ಮ್ಯಾಕ್ಸ್‌ವೆಲ್ ಮೊದಲೆರಡೂ ಪಂದ್ಯಗಳಲ್ಲಿ ಗೆಲುವಿನ ರೂವಾರಿಗಳೆನಿಸಿದ್ದಾರೆ. ಹರ್ಷಲ್ ಪಟೇಲ್ ಡೆತ್ ಓವರ್‌ಗಳಲ್ಲಿ ಆರ್‌ಸಿಬಿ ತಂಡಕ್ಕೆ ವಿಶೇಷವಾದ ಬಲ ತುಂಬಿದ್ದರೆ, ಗ್ಲೆನ್ ಮ್ಯಾಕ್ಸ್‌ವೆಲ್ ಕಳೆದ ಆವೃತ್ತಿಯಲ್ಲಿ ಪಂಜಾಬ್ ತಂಡದ ಪರ ಮಾಡಲಾಗದ ಸಾಧನೆಯನ್ನೂ ಈ ಬಾರಿ ಸಾಧಿಸಿ ತೋರಿಸಿದ್ದಾರೆ. ಜತೆಗೆ ನಾಯಕ ವಿರಾಟ್ ಕೊಹ್ಲಿ ಅವರ ಕೆಲ ಕಾರ್ಯತಂತ್ರಗಳೂ ಈ ಬಾರಿ ಹೆಚ್ಚಿನ ಯಶಸ್ಸು ಕಾಣುತ್ತಿದೆ. ಕಳೆದ ಪಂದ್ಯದಲ್ಲಿ ಎಡಗೈ ಸ್ಪಿನ್ನರ್ ಶಾಬಾಜ್ ಅಹ್ಮದ್‌ಗೆ ಇನಿಂಗ್ಸ್‌ನ 17ನೇ ಓವರ್ ನೀಡಿ ಪಂದ್ಯದ ಚಿತ್ರಣವನ್ನೇ ಬದಲಾಯಿಸಿದ್ದು ಇದರಲ್ಲಿ ಪ್ರಮುಖವಾದುದು. ಎಬಿ ಡಿವಿಲಿಯರ್ಸ್‌ರನ್ನು ಮ್ಯಾಕ್ಸ್‌ವೆಲ್ ನಂತರದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಆಡಿಸುತ್ತಿರುವ ಆರ್‌ಸಿಬಿ ನಡೆಯೂ ಉತ್ತಮವೆನಿಸಿದೆ. ಇದರಿಂದ ತಮಗೆ ಒತ್ತಡರಹಿತವಾಗಿ ಆಡಲು ಸಾಧ್ಯವಾಗುತ್ತಿದೆ ಎಂದು ಮ್ಯಾಕ್ಸ್‌ವೆಲ್ ಕೂಡ ತಮ್ಮ ಯಶಸ್ಸಿಗೆ ಇದನ್ನೇ ಕಾರಣ ನೀಡಿದ್ದಾರೆ.

*ಪುಟಿದೇಳುವ ತವಕದಲ್ಲಿ ಕೆಕೆಆರ್ 
ಮುಂಬೈ ವಿರುದ್ಧ ಬೌಲಿಂಗ್ ವಿಭಾಗ ಮಿಂಚಿದ್ದರೂ, ಬ್ಯಾಟಿಂಗ್‌ನಲ್ಲಿ ಮಧ್ಯಮ ಕ್ರಮಾಂಕ ಕೈಕೊಟ್ಟಿತ್ತು. ಹೀಗಾಗಿ ಕೆಕೆಆರ್ ತಂಡ ಮಧ್ಯಮ ಕ್ರಮಾಂಕ ಬಲಪಡಿಸಲು ಆದ್ಯತೆ ನೀಡಬೇಕಿದೆ. ಶುಭಮಾನ್ ಗಿಲ್, ನಿತೀಶ್ ರಾಣಾ ಮತ್ತು ರಾಹುಲ್ ತ್ರಿಪಾಠಿ ಅವರಂಥ ಭಾರತೀಯ ಬ್ಯಾಟ್ಸ್‌ಮನ್‌ಗಳು ರನ್ ಗಳಿಸುತ್ತಿದ್ದಾರೆ. ಆದರೆ ನಾಯಕ ಇವೊಯಿನ್ ಮಾರ್ಗನ್, ಮಾಜಿ ನಾಯಕ ದಿನೇಶ್ ಕಾರ್ತಿಕ್, ಶಕೀಬ್ ಅಲ್ ಹಸನ್ ಕೈಕೊಡುತ್ತಿದ್ದಾರೆ. ಆಲ್ರೌಂಡರ್ ಆಂಡ್ರೆ ರಸೆಲ್ ಬೌಲಿಂಗ್‌ನಲ್ಲಿ ಮಿಂಚಿತ್ತಿದ್ದರೂ, ಬ್ಯಾಟಿಂಗ್‌ನಲ್ಲಿ ಸ್ಫೋಟಕ ಶಕ್ತಿಯ ಕೊರತೆ ಕಾಡುತ್ತಿದೆ.

ಟೀಮ್ ನ್ಯೂಸ್
*ಆರ್‌ಸಿಬಿ: ಟೀಮ್ ಕಾಂಬಿನೇಷನ್ ಮೊದಲೆರಡೂ ಪಂದ್ಯಗಳಲ್ಲಿ ಬಲಿಷ್ಠವಾಗಿ ಕಾಣಿಸಿದೆ. ಹೀಗಾಗಿ ಗೆಲುವಿನ ಕಾಂಬಿನೇಷನ್ ಬದಲಾಗುವ ಸಾಧ್ಯತೆ ಕಡಿಮೆ ಇದೆ. ಆದರೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಸ್ವಲ್ಪ ಬದಲಾವಣೆಯ ನಿರೀಕ್ಷೆ ಇದೆ. ಶಾಬಾಜ್ ಅಹ್ಮದ್ ಈ ಸಲವೂ ವನ್‌ಡೌನ್‌ನಲ್ಲಿ ಆಡುವುದು ಅನುಮಾನ.
ಕಳೆದ ಪಂದ್ಯ: ಸನ್‌ರೈಸರ್ಸ್‌ ವಿರುದ್ಧ 6 ರನ್ ಜಯ.

*ಕೆಕೆಆರ್: ಅನುಭವಿ ಸ್ಪಿನ್ನರ್ ಹರ್ಭಜನ್ ಸಿಂಗ್ ಮೊದಲೆರಡೂ ಪಂದ್ಯಗಳಲ್ಲಿ ಹೊಸ ಚೆಂಡಿನೊಂದಿಗೆ ದಾಳಿಗಿಳಿದರೂ ಹೆಚ್ಚು ಪರಿಣಾಮಕಾರಿ ಆಗಿರಲಿಲ್ಲ. ಹೀಗಾಗಿ ಚೈನಾಮನ್ ಸ್ಪಿನ್ನರ್ ಕುಲದೀಪ್ ಯಾದವ್ ಹಾಲಿ ಆವೃತ್ತಿಯಲ್ಲಿ ಮೊದಲ ಬಾರಿ ಅವಕಾಶ ಪಡೆಯುವ ನಿರೀಕ್ಷೆ ಇದೆ.
ಕಳೆದ ಪಂದ್ಯ: ಮುಂಬೈ ವಿರುದ್ಧ 10 ರನ್ ಸೋಲು.

ಪಂದ್ಯ ಆರಂಭ: ಮಧ್ಯಾಹ್ನ 3.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ಮುಖಾಮುಖಿ: 26
ಆರ್‌ಸಿಬಿ: 12
ಕೆಕೆಆರ್: 14

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net