

ದುಬೈ: ಮೊದಲ ಪಂದ್ಯದಲ್ಲೇ ಗೆಲುವು ದಾಖಲಿಸಿ ಶುಭಾರಂಭ ಕಂಡಿರುವ ಆರ್‌ಸಿಬಿ ತಂಡ ಐಪಿಎಲ್-13ರ ತನ್ನ 2ನೇ ಪಂದ್ಯದಲ್ಲಿ ಪಂಚ ಕನ್ನಡಿಗರಿಂದ ಕೂಡಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಎದುರಿಸಲಿದೆ. ಗುರುವಾರ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯವನ್ನು ಆರ್‌ಸಿಬಿ ಮತ್ತು ಕನ್ನಡಿಗರ ನಡುವಿನ ಕಾದಾಟ ಎಂದೇ ವಿಶ್ಲೇಷಿಸಲಾಗುತ್ತಿದೆ. ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್ ತಂಡವನ್ನು 10 ರನ್‌ಗಳಿಂದ ಮಣಿಸಿರುವ ಆತ್ಮವಿಶ್ವಾಸ ಆರ್‌ಸಿಬಿ ತಂಡದಲ್ಲಿದ್ದರೆ, ಕನ್ನಡಿಗ ಕೆಎಲ್ ರಾಹುಲ್ ಸಾರಥ್ಯದ ಪಂಜಾಬ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲುವಿನ ಹಂತದಲ್ಲಿ ಎಡವಿ ಸೂಪರ್ ಓವರ್‌ನಲ್ಲಿ ಶರಣಾಗಿರುವ ನಿರಾಸೆಯಲ್ಲಿದೆ. ಅಂಪೈರ್‌ರ ಶಾರ್ಟ್ ರನ್ ತೀರ್ಪು ಕೂಡ ಪಂಜಾಬ್‌ಗೆ ಮುಳುವಾಗಿತ್ತು. ಇದೀಗ ಪಂಜಾಬ್ ಗೆಲುವಿನ ಹಳಿಗೇರುವ ಪ್ರಯತ್ನದಲ್ಲಿದೆ. 2016ರ ಬಳಿಕ ಲೀಗ್‌ನ ಮೊದಲ ಪಂದ್ಯದಲ್ಲೇ ಗೆಲುವು ದಾಖಲಿಸಿದ ವಿಶ್ವಾಸದಲ್ಲಿರುವ ವಿರಾಟ್ ಕೊಹ್ಲಿ ಬಳಗ ಗೆಲುವಿನ ನಾಗಾಲೋಟ ಮುಂದುವರಿಸುವ ಹಂಬಲದಲ್ಲಿದೆ.
ಪದಾರ್ಪಣೆ ಪಂದ್ಯದಲ್ಲೇ ಅರ್ಧಶತಕ ದಾಖಲಿಸಿದ ದೇವದತ್ ಪಡಿಕಲ್, ಫಿಂಚ್ ಜತೆಗೂಡಿ ಮತ್ತೊಮ್ಮೆ ಇನಿಂಗ್ಸ್ ಆರಂಭಿಸಲಿದೆ. ಮೊದಲ ಪಂದ್ಯದಲ್ಲಿ ಕೊಹ್ಲಿ ನಿರಾಸೆ ಅನುಭವಿಸಿದರೆ, ಉಳಿದಂತೆ ಬಿರುಸಿನ ಅರ್ಧಶತಕ ಸಿಡಿಸುವ ಮೂಲಕ ಎಬಿ ಡಿವಿಲಿಯರ್ಸ್ ಅಭಿಮಾನಿಗಳಿಗೆ ರಂಜಿಸಿದ್ದರು. ಬೌಲಿಂಗ್ ವಿಭಾಗದಲ್ಲಿ ಉಮೇಶ್ ಯಾದವ್ ಸುಧಾರಿಸಬೇಕಿದೆ. ಮತ್ತೊಂದೆಡೆ, ಪ್ರಮುಖ ವೈಫಲ್ಯದ ನಡುವೆಯೂ ಏಕಾಂಗಿ ನಿರ್ವಹಣೆ ಮೂಲಕ ತಂಡವನ್ನು ಗೆಲುವಿನ ಹಂತದವರೆಗೂ ಕೊಂಡೊಯ್ದಿದ್ದ ಮಯಾಂಕ್ ಅಗರ್ವಾಲ್ ಮತ್ತೊಂದು ಸ್ಫೋಟಕ ಬ್ಯಾಟಿಂಗ್ ನಿರೀಕ್ಷೆಯಲ್ಲಿದ್ದಾರೆ. ತವರು ರಾಜ್ಯದ ತಂಡದ ಎದುರು ಪಂಚ ಕನ್ನಡಿಗರ ಪೈಕಿ ಕನಿಷ್ಠ 3 ಮಂದಿ ಕಣಕ್ಕಿಳಿಯಲಿದ್ದಾರೆ.
ಟೀಮ್ ನ್ಯೂಸ್:
ಆರ್‌ಸಿಬಿ: ಸನ್‌ರೈಸರ್ಸ್ ವಿರುದ್ಧ ಆಡಿದ ತಂಡವೇ ಬಹುತೇಕ ಕಣಕ್ಕಿಳಿಯಲಿದೆ. ದಕ್ಷಿಣ ಆಫ್ರಿಕಾ ಆಲ್ರೌಂಡರ್ ಕ್ರಿಸ್ ಮಾರಿಸ್ ಈ ಪಂದ್ಯಕ್ಕೂ ಅಲಭ್ಯರಾಗಿದ್ದಾರೆ. ಹರಾಜಿನಲ್ಲಿ 10 ಕೋಟಿ ರೂಪಾಯಿಗೆ ತಂಡ ಸೇರ್ಪಡೆಗೊಂಡಿರುವ ಮಾರಿಸ್ ಗಾಯದ ಸಮಸ್ಯೆಯಿಂದ ಪೂರ್ಣ ಪ್ರಮಾಣದಲ್ಲಿ ಚೇತರಿಕೆ ಕಂಡಿಲ್ಲ. ಮೊದಲ ಪಂದ್ಯದಲ್ಲಿ ದುಬಾರಿಯಾಗಿದ್ದ ವೇಗಿ ಉಮೇಶ್ ಯಾದವ್ ಬದಲಿಗೆ ಮೊಹಮದ್ ಸಿರಾಜ್‌ಗೆ ಅವಕಾಶ ನೀಡಬಹುದು. ಮಧ್ಯಮ ಕ್ರಮಾಂಕ ಬಲಿಷ್ಠಗೊಳಿಸುವ ದೃಷ್ಟಿಯಿಂದ ಇಂಗ್ಲೆಂಡ್ ಆಲ್ರೌಂಡರ್ ಮೊಯಿನ್ ಅಲಿಗೆ ಮಣೆ ಹಾಕಿದರೆ, ಡೇಲ್ ಸ್ಟೈನ್ ಹೊರಗುಳಿಯಲಿದ್ದಾರೆ. ಉಳಿದಂತೆ ತಂಡದಲ್ಲಿ ಹೆಚ್ಚಿನ ಬದಲಾವಣೆ ನಿರೀಕ್ಷಿಸುವಂತಿಲ್ಲ
ಸಂಭಾವ್ಯ ತಂಡ: ದೇವದತ್ ಪಡಿಕಲ್, ಆರನ್ ಫಿಂಚ್, ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್, ಜೋಶ್ ಫಿಲಿಪ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಉಮೇಶ್ ಯಾದವ್/ಮೊಹಮದ್ ಸಿರಾಜ್, ಡೇಲ್ ಸ್ಟೈನ್/ಮೊಯಿನ್ ಅಲಿ, ಯಜುವೇಂದ್ರ ಚಾಹಲ್.
ಕಿಂಗ್ಸ್ ಇಲೆವೆನ್ ಪಂಜಾಬ್: ಡೆಲ್ಲಿ ವಿರುದ್ಧ ಭರ್ಜರಿ ನಿರ್ವಹಣೆ ತೋರಿದ್ದ ಮಯಾಂಕ್ ಅಗರ್ವಾಲ್ ಮತ್ತೊಮ್ಮೆ ಕೇಂದ್ರಬಿಂದುವಾಗಲಿದ್ದಾರೆ. ಕೆಲ ಬದಲಾವಣೆಗಳೊಂದಿಗೆ ಕಿಂಗ್ಸ್ ಇಲೆವೆನ್ ಕಣಕ್ಕಿಳಿಯುವ ಸಾಧ್ಯತೆಗಳಿವೆ. ನಿಕೋಲಸ್ ಪೂರನ್, ಗ್ಲೆನ್ ಮ್ಯಾಕ್ಸ್‌ವೆಲ್ ಬದಲಿಗೆ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಹಾಗೂ ಆಲ್ರೌಂಡರ್ ಜಿಮ್ಮಿ ನೀಶಾಮ್ ಅವರನ್ನು ಪರಿಗಣಿಸಬಹುದು. ಮ್ಯಾಕ್ಸ್‌ವೆಲ್ ಮೊದಲ ಪಂದ್ಯದಲ್ಲಿ ವಿಲರಾಗಿರಬಹುದು, ಆದರೆ, ಫಾರ್ಮ್‌ನಲ್ಲಿರುವ ಬ್ಯಾಟ್ಸ್‌ಮನ್. ಹೀಗಾಗಿ ಮ್ಯಾಕ್ಸ್‌ವೆಲ್ ಹಾಗೂ ನೀಶಾಮ್ ನಡುವೆ ಪೈಪೋಟಿ ಏರ್ಪಟ್ಟಿದೆ. ಮೊದಲ ಪಂದ್ಯದಲ್ಲಿ ವಿಫಲರಾದ ಕರ್ನಾಟಕದ ಕರುಣ್ ನಾಯರ್ ಅಥವಾ ಸರ್ಫಾಜ್ ಖಾನ್ ಬದಲಿಗೆ ಮಂದೀಪ್ ಸಿಂಗ್‌ರನ್ನು ಪರಿಗಣಿಸಬಹುದು.
ಸಂಭಾವ್ಯ ತಂಡ: ಮಯಾಂಕ್ ಅಗರ್ವಾಲ್, ಕೆಎಲ್ ರಾಹುಲ್ (ನಾಯಕ, ವಿಕೀ), ಕರುಣ್ ನಾಯರ್/ಮಂದೀಪ್ ಸಿಂಗ್, ನಿಕೋಲಸ್ ಪೂರನ್/ಕ್ರಿಸ್ ಗೇಲ್, ಮ್ಯಾಕ್ಸ್‌ವೆಲ್/ಜೇಮ್ಸ್ ನೀಶಾಮ್, ಸರ್ಫಾಜ್ ಖಾನ್, ಕೆ.ಗೌತಮ್, ಕ್ರಿಸ್ ಜೋರ್ಡಾನ್, ಮೊಹಮದ್ ಶಮಿ, ಶೆಲ್ಡನ್ ಕಾಟ್ರೆಲ್, ರವಿ ಬಿಷ್ಣೋಯಿ.
ಪಂದ್ಯ ಆರಂಭ: ರಾತ್ರಿ : 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್
ಮುಖಾಮುಖಿ: 24, ಪಂಜಾಬ್: 12, ಆರ್‌ಸಿಬಿ: 12