ಇಂದು ಆರ್‌ಸಿಬಿ-ಡೆಲ್ಲಿ ಹಣಾಹಣಿ; ಕೊಹ್ಲಿ ಪಡೆಗೆ ಗೆಲುವಿನ ಹಳಿಗೇರುವ ತವಕ

DC AND PUNJAB FOR WEB
Published on

ಅಹಮದಾಬಾದ್: ಸತತ ನಾಲ್ಕು ಗೆಲುವಿನ ಬಳಿಕ ಕಳೆದ ಪಂದ್ಯದಲ್ಲಿ ಸಿಎಸ್‌ಕೆ ಎದುರು ಹೀನಾಯ ಸೋಲು ಕಂಡಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಐಪಿಎಲ್-14ರ ತನ್ನ 6ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಎನಿಸಿರುವ ನರೇಂದ್ರ ಮೋದಿ ಮೈದಾನದಲ್ಲಿ ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ಆರ್‌ಸಿಬಿ ತಂಡ ಗೆಲುವಿನ ಹಳಿಗೆ ಮರಳುವ ತವಕದಲ್ಲಿದೆ. ಬ್ಯಾಟಿಂಗ್ ವೈಲ್ಯದಿಂದ ಕಳೆದ ಪಂದ್ಯದಲ್ಲಿ ಮುಗ್ಗರಿಸಿರುವ ಆರ್‌ಸಿಬಿ ಸೋಲಿನಿಂದ ಪಾಠ ಕಲಿತಿದೆ. ಮತ್ತೊಂದೆಡೆ, ಭಾನುವಾರ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಎದುರು ಸೂಪರ್ ಓವರ್ ಮೂಲಕ ಜಯ ದಾಖಲಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮತ್ತೊಂದು ಗೆಲುವಿನ ವಿಶ್ವಾಸದಲ್ಲಿದೆ.

ಆರ್‌ಸಿಬಿಗೆ ಗೆಲುವಿನ ತವಕ

ಸತತ ಗೆಲುವಿನಿಂದ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿದ್ದ ಆರ್‌ಸಿಬಿ ತಂಡ ಸಿಎಸ್‌ಕೆ ಎದುರು ದೊಡ್ಡ ಪೆಟ್ಟು ತಿಂದಿದೆ. ಸಿಎಸ್‌ಕೆ ಎದುರು ಉತ್ತಮ ಆರಂಭದ ನಡುವೆಯೂ 69 ರನ್‌ಗಳಿಂದ ಸೋತು ಮುಖಭಂಗಕ್ಕೀಡಾಗಿತ್ತು. ಇದುವರೆಗೆ ಟೂರ್ನಿಯಲ್ಲಿ ಆಧಾರಸ್ತಂಭವಾಗಿದ್ದ ಎಬಿ ಡಿವಿಲಿಯರ್ಸ್‌, ಮ್ಯಾಕ್ಸ್‌ವೆಲ್ ಮಧ್ಯಮ ಕ್ರಮಾಂಕದಲ್ಲಿ ಕೈಕೊಟ್ಟಿದ್ದೇ ಸೋಲಿಗೆ ಪ್ರಮುಖ ಕಾರಣ. ಸತತ ನಾಲ್ಕು ಪಂದ್ಯಗಳಲ್ಲಿ ಡೆತ್ ಓವರ್ ಹಂತದಲ್ಲಿ ಮಿಂಚಿದ್ದ ಮಧ್ಯಮ ವೇಗಿ ಹರ್ಷಲ್ ಪಟೇಲ್ ಕಡೇ ಓವರ್‌ನಲ್ಲಿ ದುಬಾರಿಯಾಗಿದ್ದು ತಂಡವನ್ನು ಒತ್ತಡಕ್ಕೆ ಸಿಲುಕಿಸಿತು. ಹಿಂದಿನ ಪಂದ್ಯದಲ್ಲಿ ಹೊರತುಪಡಿಸಿದರೆ ಲೀಗ್‌ನಲ್ಲಿ ಇದುವರೆಗೆ ಉತ್ತಮ ನಿರ್ವಹಣೆ ತೋರುತ್ತಾ ಬಂದಿರುವ ಆರ್‌ಸಿಬಿ ಗೆಲುವಿನ ಹಳಿಗೇರುವ ವಿಶ್ವಾಸದಲ್ಲಿದೆ. ವೇಗಿಗಳಾದ ಮೊಹಮದ್ ಸಿರಾಜ್, ಕೈಲ್ ಜೇಮಿಸನ್, ಯಜುವೇಂದ್ರ ಚಾಹಲ್, ವಾಷಿಂಗ್ಟನ್ ಸುಂದರ್ ಒಳಗೊಂಡ ಬೌಲಿಂಗ್ ಪಡೆ ಸ್ಥಿರ ನಿರ್ವಹಣೆ ನೀಡುತ್ತಾ ಬಂದಿದೆ.

ಆತ್ಮವಿಶ್ವಾಸದಲ್ಲಿ ಡೆಲ್ಲಿ

ಶಿಖರ್ ಧವನ್, ಪೃಥ್ವಿ ಷಾ ಆರಂಭಿಕ ಜೋಡಿ ಟೂರ್ನಿಯಲ್ಲಿ ಇದುವರೆಗೆ ಉತ್ತಮ ಆರಂಭ ನೀಡಲು ಯಶಸ್ವಿಯಾಗಿದೆ. ಆದರೆ, ಸ್ಟೀವನ್ ಸ್ಮಿತ್, ಮಾರ್ಕಸ್ ಸ್ಟೋಯಿನಿಸ್, ಶಿಮ್ರೋನ್ ಹೆಟ್ಮೆಯರ್ ಒಳಗೊಂಡ ಮಧ್ಯಮ ಕ್ರಮಾಂಕವೇ ಇದುವರೆಗೆ ಸ್ಫೋಟಿಸಿಲ್ಲ. ಈ ವಿಭಾಗದಲ್ಲಿ ರಿಷಭ್ ಪಂತ್ ಹೆಚ್ಚು ಒತ್ತಡದಲ್ಲಿದ್ದಾರೆ. ಕೌಟುಂಬಿಕ ಕಾರಣದಿಂದಾಗಿ ಆರ್.ಅಶ್ವಿನ್ ತಂಡದ ತೊರೆದಿದ್ದ, ಇವರ ಅನುಪಸ್ಥಿತಿಯಲ್ಲಿ ಅಕ್ಷರ್ ಪಟೇಲ್, ಅನುಭವಿ ಅಮಿತ್ ಮಿಶ್ರಾ ಹೆಚ್ಚಿನ ಜವಾಬ್ದಾರಿ ನಿಭಾಯಿಸಬೇಕಿದೆ. ಯುವ ವೇಗಿ ಆವೇಶ್ ಖಾನ್, ಇದುವರೆಗೆ ಆಡಿರುವ 5 ಪಂದ್ಯಗಳಿಂದ 11 ವಿಕೆಟ್ ಕಬಳಿಸಿದರೆ, ಕಗಿಸೊ ರಬಾಡ ಡೆತ್ ಓವರ್‌ಗಳಲ್ಲಿ ತಂಡಕ್ಕೆ ಆಸರೆಯಾಗುತ್ತಿದ್ದಾರೆ. ಅಶ್ವಿನ್ ಬದಲಿಗೆ ಕನ್ನಡಿಗ ಪ್ರವೀಣ್ ದುಬೆ ಅಥವಾ ಲಲಿತ್ ಯಾದವ್ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.

ಟೀಮ್ ನ್ಯೂಸ್ 

ಆರ್‌ಸಿಬಿ: ಡೇನಿಯಲ್ ಕ್ರಿಶ್ಚಿಯನ್ ಬದಲಿಗೆ ಡೇನಿಯಲ್ ಸ್ಯಾಮ್ಸ್ ಅಥವಾ ಫಿನ್ ಅಲೆನ್, ನವದೀಪ್ ಸೈನಿ ಬದಲಿಗೆ ಶಾಬಾಜ್ ಅಹ್ಮದ್‌ಗೆ ಅವಕಾಶ ನೀಡಬಹುದು. ಆರ್‌ಸಿಬಿ ತಂಡ ಕನಿಷ್ಠ ಒಂದೆರಡು ಬದಲಾವಣೆಯೊಂದಿಗೆ ಕಣಕ್ಕಿಳಿಯುವುದು ಖಚಿತವಾಗಿದೆ.

ಕಳೆದ ಪಂದ್ಯ: ಸಿಎಸ್‌ಕೆ ಎದುರು 69 ರನ್ ಸೋಲು

ಡೆಲ್ಲಿ ಕ್ಯಾಪಿಟಲ್ಸ್: ಆರ್.ಅಶ್ವಿನ್ ಬದಲಿಗೆ ಲಲಿತ್ ಯಾದವ್ ತಂಡಕ್ಕೆ ವಾಪಸಾಗಬಹುದು. ಇಲ್ಲವಾದರೆ, ಕರ್ನಾಟಕದ ಪ್ರವೀಣ್ ದುಬೆ ಅಥವಾ ಲುಕ್ಮನ್ ಮೆರಿವಾಲಾಗೆ ಮಣೆ ಹಾಕಬಹುದು. ಉಳಿದಂತೆ ತಂಡದಲ್ಲಿ ಹೆಚ್ಚಿನ ಬದಲಾವಣೆ ನಿರೀಕ್ಷಿಸುವಂತಿಲ್ಲ.

ಕಳೆದ ಪಂದ್ಯ: ಸನ್‌ರೈಸರ್ಸ್‌ ಎದುರು ಸೂಪರ್ ಓವರ್‌ನಲ್ಲಿ ಜಯ.

ಮುಖಾಮುಖಿ: 25, ಆರ್‌ಸಿಬಿ: 14, ಡೆಲ್ಲಿ : 10, ರದ್ದು : 1

ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್

ಆರಂಭ: ರಾತ್ರಿ 7.30ಕ್ಕೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net