

ಬೆಂಗಳೂರು: ಈ ಬಾರಿ ನಡೆದ ಎರಡು ದಿನಗಳ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಸ್ಟಾರ್ ಹಾಗೂ ಯುವ ಆಟಗಾರರನ್ನೇ ಖರೀದಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ, ಆಯ್ದುಕೊಂಡ ಆಟಗಾರರ ಪಟ್ಟಿ ಫ್ಯಾನ್ಸ್ಗಳ ಲೆಕ್ಕಾಚಾರವನ್ನು ಮೊದಲಿಗೆ ದಿಕ್ಕರಿಸಿದ್ದೇ ಆದರೂ ಅಂತಿಮ ಹಂತದಲ್ಲಿ ಖುಷಿ ನೀಡಿತು. ಏಕೆಂದೆರೆ, ಆಕ್ಷನ್ನ ಎರಡನೇ ದಿನದ ಅಂತ್ಯದಲ್ಲಿ ಮ್ಯಾನೇಜ್ಮೆಂಟ್ ಬಹುನಿರೀಕ್ಷಿತ ಕ್ರಿಕೆಟಿಗರನ್ನೇ ತಮ್ಮ ತೆಕ್ಕೆಗೆ ಖರೀದಿ ಮಾಡಿಕೊಂಡಿತು. ಸದ್ಯ 2025ರ ಏಪ್ರಿಲ್ನಲ್ಲಿ ನಡೆಯಲಿರುವ ಐಪಿಎಲ್ ಪಂದ್ಯಗಳಿಗಾಗಿ ಕಾತರ ಹೊರಹಾಕಿರುವ ಫ್ಯಾನ್ಸ್, ಈ ಬಾರಿ ಉತ್ತಮ ತಂಡವನ್ನು ಕಟ್ಟಿರುವ ಫ್ರಾಂಚೈಸಿ ಬಗ್ಗೆ ಅಪಾರ ನಿರೀಕ್ಷೆಗಳನ್ನು ಹೊಂದಿದ್ದಾರೆ.
ಲಿಯಾಮ್ ಲಿವಿಂಗ್‌ಸ್ಟೋನ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಜೋಶ್ ಹ್ಯಾಜಲ್‌ವುಡ್, ರಾಸಿಖ್ ದಾರ್, ಸುಯಶ್ ಶರ್ಮಾ, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ನುವಾನ್ ತುಷಾರ, ಜಾಕೋಬ್ ಬೆಥೆಲ್, ದೇವದತ್ ಪಡಿಕ್ಕಲ್, ಸ್ವಸ್ತಿಕ್ ಚಿಕಾರ.
1. ಫಿಲ್ ಸಾಲ್ಟ್: ಇಂಗ್ಲೆಂಡ್ನ ಸ್ಟಾರ್ ಬ್ಯಾಟರ್ ಹಾಗೂ ವಿಕೆಟ್ ಕೀಪರ್ ಆಗಿರುವ ಫಿಲ್ರನ್ನು ಆರ್ಸಿಬಿ 11.50 ಕೋಟಿ ರೂ.ಗೆ ಹರಾಜಿನಲ್ಲಿ ಭರ್ಜರಿ ಬಿಡ್ಡಿಂಗ್ ನಡೆಸಿ, ಖರೀದಿಸಿತು. ಓಪನಿಂಗ್ ಬ್ಯಾಟ್ಸ್ಮನ್ ಆಗಿ ಕಣಕ್ಕಿಳಿಯಲಿರುವ ಫಿಲ್, ವಿರಾಟ್ ಕೊಹ್ಲಿಗೆ ಒಳ್ಳೆಯ ಸಾಥ್ ನೀಡಲಿದ್ದಾರೆ ಎಂದೇ ನಿರೀಕ್ಷಿಸಲಾಗಿದೆ. ಚೇಸಿಂಗ್ ವೇಳೆ ಬ್ಯಾಟ್ನಲ್ಲಿ ತಂಡಕ್ಕೆ ಬಲ ಕೊಟ್ಟರೆ, ಫೀಲ್ಡಿಂಗ್ನಲ್ಲಿ ಕೀಪರ್ ಆಗಿ ಆಸರೆಯಾಗುವ ನಿರೀಕ್ಷೆ ಹೆಚ್ಚಿದೆ.
2. ಲಿಯಾಮ್ ಲಿವಿಂಗ್‌ಸ್ಟೋನ್: ಇಂಗ್ಲೆಂಡ್ನ ಸ್ಟಾರ್ ಆಲ್ರೌಂಡರ್ ಲಿವಿಂಗ್‌ಸ್ಟೋನ್, ಐದು ಅಥವಾ ಆರನೇ ಕ್ರಮಾಂಕದಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ಗೆ ಹೆಸರುವಾಸಿ. ಬಿಡ್ಡಿಂಗ್ನಲ್ಲಿ 8.75 ಕೋಟಿ ರೂ.ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲಾದ ಸ್ಟಾರ್ ಕ್ರಿಕೆಟಿಗ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಬ್ಬರಿಸುವುದಕ್ಕೆ ಹೇಳಿ ಮಾಡಿಸಿದ ಆಲ್ರೌಂಡರ್ ಆರ್ಸಿಬಿಯನ್ ಎಂದೇ ನಿರೀಕ್ಷಿಸಲಾಗಿದೆ. ಇವರು ಮುಂದಿನ ದಿನಗಳಲ್ಲಿ ಹೇಗೆ ತಂಡದ ಪರ ಕಮಾಲ್ ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
3. ಭುವನೇಶ್ವರ್ ಕುಮಾರ್: ಕಳೆದ ವರ್ಷಗಳಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲಿ ಮಿಂಚಿದ್ದ ಟೀಮ್ ಇಂಡಿಯಾದ ಸ್ವಿಂಗ್ ಸ್ಪೆಷಲಿಸ್ಟ್ ಭುವನೇಶ್ವರ್ ಕುಮಾರ್, ಈ ಬಾರಿಯ ಹರಾಜು ಪ್ರಕ್ರಿಯೆಯಲ್ಲಿ ಬರೋಬ್ಬರಿ 10.75 ಕೋಟಿ ರೂ. ಆರ್ಸಿಬಿ ಪಾಲಾದರು. ಭುವಿ ತಂಡಕ್ಕೆ ತಮ್ಮ ಬೌಲಿಂಗ್ನಿಂದ ಅಪಾರ ಕೊಡುಗೆ ನೀಡಲಿದ್ದಾರೆ ಎಂಬ ಭರವಸೆ ಅಭಿಮಾನಿಗಳಲ್ಲಿ ಮೂಡಿದೆ. ಆರ್ಸಿಬಿಗೆ ಇಂತಹ ವೇಗಿಯ ಅವಶ್ಯಕತೆ ಈ ಹಿಂದಿನಿಂದಲೂ ಹೆಚ್ಚಿತ್ತು. ಆದರೆ. ಅದು 2025ರಲ್ಲಿ ಸಂಭವಿಸಲಿದೆ ಎಂಬುದು ಸದ್ಯ ಅಭಿಮಾನಿಗಳ ಸಂತಸ. ಪವರ್ಪ್ಲೇ ಮತ್ತು ಡೆತ್ ಓವರ್ಗಳಲ್ಲಿ ಭುವಿ ಬೌಲಿಂಗ್ ದಾಳಿಯು ಆರ್ಸಿಬಿ ಗೆಲುವಿಗೆ ದೊಡ್ಡ ಕೊಡುಗೆ ನೀಡಲಿದೆಯೇ ಎಂಬುದನ್ನು ಐಪಿಎಲ್ 2025ರ ಪಂದ್ಯಗಳಲ್ಲಿ ಕಾದು ನೋಡಬೇಕಿದೆ,(ಏಜೆನ್ಸೀಸ್).