

ನವದೆಹಲಿ: ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ ತಂಡದ ಪರ ಆಡಲು ಸಜ್ಜಾಗುತ್ತಿರುವ ಟೀಮ್ ಇಂಡಿಯಾ ಆಲ್ರೌಂಡರ್ ರವೀಂದ್ರ ಜಡೇಜಾ ಶುಕ್ರವಾರ ಪತ್ನಿ ರಿವಾಬಾ ಸೋಲಂಕಿ ಜನ್ಮದಿನದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವಿಶೇಷ ಸಂದೇಶವನ್ನು ಬರೆದು ಗಮನಸೆಳೆದಿದ್ದಾರೆ. ಇದೇ ವೇಳೆ ರಿವಾಬಾ ಸೋಲಂಕಿ ಅವರು ನೇತ್ರದಾನದ ಸಂಕಲ್ಪ ಮಾಡಿರುವ ವಿಷಯವನ್ನೂ ಇನ್‌ಸ್ಟಾಗ್ರಾಂನಲ್ಲಿ ರವೀಂದ್ರ ಜಡೇಜಾ ಹಂಚಿಕೊಂಡಿದ್ದಾರೆ.
‘ನನ್ನ ರಾಣಿಗೆ ಜನುಮದಿನದ ಶುಭಾಶಯಗಳು. ನನ್ನ ಸಾಮರ್ಥ್ಯ, ಸಂತೋಷದ ಮೂಲ ಮತ್ತು ಜೀವನದ ಸ್ಫೂರ್ತಿಯಾಗಿದ್ದಕ್ಕೆ ಧನ್ಯವಾದಗಳು. ಹ್ಯಾಪಿ ಬರ್ತ್‌ಡೇ’ ಎಂದು ರವೀಂದ್ರ ಜಡೇಜಾ ಟ್ವಿಟರ್‌ನಲ್ಲಿ ಮತ್ತು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ಇದೇ ವೇಳೆ ಇನ್‌ಸ್ಟಾಗ್ರಾಂನಲ್ಲಿ ರಿವಾಬಾ ಅವರ ವಿಡಿಯೋ ಒಂದನ್ನು ರವೀಂದ್ರ ಜಡೇಜಾ ಹಂಚಿಕೊಂಡಿದ್ದಾರೆ. ಅದರಲ್ಲಿ ರಿವಾಬಾ ಅವರು ಜನ್ಮದಿನದ ಹಿನ್ನೆಲೆಯಲ್ಲಿ ತಾನು ನೇತ್ರದಾನದ ಸಂಕಲ್ಪ ಮಾಡುತ್ತಿರುವೆ. ಬೇರೊಬ್ಬರ ಜೀವನದಲ್ಲಿ ಬೆಳಕು ತರುವ ಅವಕಾಶ ದೊರೆತರೆ ಅದಕ್ಕಿಂತ ದೊಡ್ಡದು ಏನಿದೆ ಎಂದು ಹೇಳಿದ್ದಾರೆ.
ರವೀಂದ್ರ ಜಡೇಜಾ ಮತ್ತು ರಿವಾಬಾ 2016ರ ಏಪ್ರಿಲ್‌ನಲ್ಲಿ ರಾಜ್‌ಕೋಟ್‌ನಲ್ಲಿ ವಿವಾಹವಾಗಿದ್ದರು. ಗುಜರಾತ್‌ನಲ್ಲಿ ಬಿಜೆಪಿ ನಾಯಕಿಯೂ ಆಗಿ ಸಕ್ರಿಯರಾಗಿರುವ ರಿವಾಬಾ, ಇತ್ತೀಚೆಗೆ ರಾಜ್‌ಕೋಟ್‌ನಲ್ಲಿ ಮಾಸ್ಕ್ ಧರಿಸದೆ ಕಾರಿನಲ್ಲಿ ಓಡಾಡಿ ಮಹಿಳಾ ಪೊಲೀಸ್ ಪೇದೆಯೊಂದಿಗೆ ವಾಗ್ವಾದವನ್ನೂ ನಡೆಸಿ ಸುದ್ದಿಯಾಗಿದ್ದರು. ಇದೀಗ ಪತಿ ಐಪಿಎಲ್‌ಗಾಗಿ ಯುಎಇಗೆ ತೆರಳಿರುವ ನಡುವೆ ತವರಿನಲ್ಲೇ ಉಳಿದುಕೊಂಡಿರುವ ರಿವಾಬಾ, ಉತ್ತಮ ಸಾಮಾಜಿಕ ಕಾರ್ಯವೊಂದರ ಮೂಲಕ ಎಲ್ಲರ ಹೃದಯ ಗೆದ್ದಿದ್ದಾರೆ.