

ಧರ್ಮಶಾಲಾ: ರವೀಂದ್ರ ಜಡೇಜಾ (43 ರನ್, 26 ಎಸೆತ, 3 ಬೌಂಡರಿ, 2 ಸಿಕ್ಸರ್, 20ಕ್ಕೆ 3 ವಿಕೆಟ್) ಆಲ್ರೌಂಡ್ ನಿರ್ವಹಣೆಯ ಬಲದಿಂದ ಹಾಲಿ ಚಾಂಪಿಯನ್ ಚೆನ್ನೈ ಸೂಪರ್‌ಕಿಂಗ್ಸ್ ತಂಡ ಐಪಿಎಲ್-17ರಲ್ಲಿ ಪಂಜಾಬ್ ಕಿಂಗ್ಸ್ ಎದುರು 28 ರನ್‌ಗಳ ಗೆಲುವು ದಾಖಲಿಸಿದೆ. ಇದರೊಂದಿಗೆ ಋತುರಾಜ್ ಗಾಯಕ್ವಾಡ್ ಬಳಗ ಪ್ಲೇಆ್ ಅವಕಾಶ ವೃದ್ಧಿಸಿಕೊಂಡಿದೆ. ಜತೆಗೆ 2021ರ ನಂತರ ಪಂಜಾಬ್ ಕಿಂಗ್ಸ್ ಎದುರು ಮೊದಲ ಗೆಲುವಿನ ಸಂಭ್ರಮ ಕಂಡಿದೆ. ಸೋಲಿನೊಂದಿಗೆ ಸ್ಯಾಮ್ ಕರ‌್ರನ್ ಪಡೆ ಪ್ಲೇಆ್ ಕನಸು ಬಹುತೇಕ ಭಗ್ನಗೊಂಡಿದೆ.
ಎಚ್‌ಪಿಸಿಎ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಟೂರ್ನಿಯ 53ನೇ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಸಿಎಸ್‌ಕೆ, ಸಂಘಟಿತ ಬ್ಯಾಟಿಂಗ್‌ನಿಂದ 9 ವಿಕೆಟ್‌ಗೆ 167 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. ಪ್ರತಿಯಾಗಿ ವೇಗಿ ತುಷಾರ್ ದೇಶಪಾಂಡೆ (35ಕ್ಕೆ 2) ನೀಡಿದ ಆರಂಭಿಕ ಆಘಾತ ಹಾಗೂ ಜಡೇಜಾ ದಾಳಿಗೆ ನಲುಗಿದ ಪಂಜಾಬ್ 9 ವಿಕೆಟ್‌ಗೆ 139 ರನ್ ಗಳಿಸಲಷ್ಟೇ ಶಕ್ತವಾಯಿತು. ಟೂರ್ನಿಯ ಮೊದಲ ಮುಖಾಮುಖಿಯಲ್ಲಿ ಗೆದ್ದಿದ್ದ ಪಂಜಾಬ್ ವಿರುದ್ಧ ಸಿಎಸ್‌ಕೆ ಸೇಡು ತೀರಿಸಿಕೊಂಡಿತು.
ಸಿಎಸ್‌ಕೆ ಬೌಲರ್ಸ್ ತಿರುಗೇಟು
ಸ್ಪರ್ಧಾತ್ಮಕ ಮೊತ್ತದ ಚೇಸಿಂಗ್‌ಗೆ ಇಳಿದ ಪಂಜಾಬ್‌ಗೆ ತುಷಾರ್ ದೇಶಪಾಂಡೆ ಆಘಾತ ನೀಡಿದರು. ಇನಿಂಗ್ಸ್‌ನ 2ನೇ ಓವರ್‌ನಲ್ಲಿ ಜಾನಿ ಬೇರ್‌ಸ್ಟೋ (7) ಹಾಗೂ ರಿಲೀ ರೋಸೌರನ್ನು (0) ಬೌಲ್ಡ್ ಮಾಡಿದರು. ನಂತರ ಇಂಪ್ಯಾಕ್ಟ್ ಪ್ಲೇಯರ್ ಪ್ರಭ್‌ಸಿಮ್ರಾನ್ ಸಿಂಗ್ (30) ಮತ್ತು ಶಶಾಂಕ್ ಸಿಂಗ್ (27) 3ನೇ ವಿಕೆಟ್‌ಗೆ 36 ಎಸೆತಗಳಲ್ಲಿ 53 ರನ್ ಕಸಿದು ಚೇಸಿಂಗ್‌ಗೆ ಬಲ ತುಂಬಿದರು. 2 ವಿಕೆಟ್‌ಗೆ 62 ರನ್‌ಗಳಿಸಿ ಸುಸ್ಥಿತಿಯಲ್ಲಿದ್ದ ಪಂಜಾಬ್ ನಂತರ 90 ರನ್‌ಗಳಿಗೆ 8 ವಿಕೆಟ್ ಕೈಚೆಲ್ಲಿ ಸೋಲಿನತ್ತ ಮುಖ ಮಾಡಿತು. ಹಂಗಾಮಿ ನಾಯಕ ಸ್ಯಾಮ್ ಕರ‌್ರನ್ (7), ಆಶುತೋಷ್ ಶರ್ಮ (3) ವಿಕೆಟ್ ಪಡೆದ ಜಡೇಜಾ ಲಯಕ್ಕೆ ಮರಳಿದರು. ಜಿತೇಶ್ ಶರ್ಮ (0) ನಿರಾಸೆ ಮೂಡಿಸಿದರು. ನಂತರ ಹರ್‌ಪ್ರೀತ್ ಬ್ರಾರ್ (17*), ಹರ್ಷಲ್ ಪಟೇಲ್ (12), ರಾಹುಲ್ ಚಹರ್ (16) ಹೋರಾಟ ಸೋಲಿನ ಅಂತರ ತಗ್ಗಿಸಲಷ್ಟೇ ಸಾಧ್ಯವಾಯಿತು.