ಕೋವಿಡ್ ವೈರಸ್‌ನಿಂದಾಗಿ ಅಂತಿಮ ಟೆಸ್ಟ್‌ಗೂ ಕೋಚ್ ರವಿ ಶಾಸ್ತ್ರಿ ಗೈರು

RAVI SHASTRI FOR WEB
Published on

ಲಂಡನ್: ಕರೊನಾ ವೈರಸ್‌ನಿಂದ ಬಳಲುತ್ತಿರುವ ಭಾರತ ತಂಡದ ಮುಖ್ಯಕೋಚ್ ರವಿ ಶಾಸ್ತ್ರಿ ಸೇರಿದಂತೆ ಇತರ ಮೂವರು ಸಹಾಯಕ ಸಿಬ್ಬಂದಿ, ಇದೇ ವಾರ ಮ್ಯಾಂಚೆಸ್ಟರ್‌ನಲ್ಲಿ ಆರಂಭವಾಗಲಿರುವ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಿಂದ ದೂರ ಉಳಿಯಲಿದ್ದಾರೆ. ಭಾನುವಾರ ಹಾಗೂ ಸೋಮವಾರ ನಡೆದ ರ‌್ಯಾಪಿಡ್ ಆಂಟಿಜೆನ್ ಟೆಸ್ಟ್‌ನಲ್ಲಿ 59 ವರ್ಷದ ರವಿ ಶಾಸ್ತ್ರಿಗೆ ಕೋವಿಡ್ ಇರುವುದು ದೃಢಪಟ್ಟಿತ್ತು. ಬೌಲಿಂಗ್ ಕೋಚ್ ಭರತ್ ಅರುಣ್, ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್ ಹಾಗೂ ಫಿಸಿಯೋಥೆರಪಿಸ್ಟ್ ನಿತೀನ್ ಪಟೇಲ್, ರವಿ ಶಾಸ್ತ್ರಿ ಜತೆ ಸಂಪರ್ಕದಲ್ಲಿದ್ದ ಹಿನ್ನೆಲೆಯಲ್ಲಿ ಐಸೋಲೇಷನ್‌ನಲ್ಲಿ ಇರಲು ಸೂಚಿಸಲಾಗಿದೆ. ಇದೀಗ ಭರತ್ ಅರುಣ್ ಹಾಗೂ ಶ್ರೀಧರ್‌ಗೂ ಕೋವಿಡ್ ದೃಢಪಟ್ಟಿದ್ದು, ಮುಂದಿನ 10 ದಿನಗಳ ಕಾಲ ಐಸೋಲೇಷನ್‌ನಲ್ಲಿ ಇರಬೇಕಿದೆ. ಸೆಪ್ಟೆಂಬರ್ 10 ರಿಂದ ಭಾರತ ಹಾಗೂ ಇಂಗ್ಲೆಂಡ್ ನಡುವಿನ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ನಡೆಯಲಿದೆ.

ಸ್ಥಳೀಯ ಆರೋಗ್ಯ ಇಲಾಖೆಯ ಮಾರ್ಗಸೂಚಿ ಅನ್ವಯ, ಕೋವಿಡ್ ಕಾಣಿಸಿಕೊಂಡರೆ 10 ದಿನಗಳ ಕಾಲ ಕಡ್ಡಾಯವಾಗಿ ಕ್ವಾರಂಟೈನ್‌ನಲ್ಲಿ ಇರಬೇಕಿದ್ದು, ಈ ವೇಳೆ 2 ಬಾರಿ ನೆಗೆಟಿವ್ ವರದಿ ಬರಬೇಕಿದೆ. ‘ಆರ್‌ಟಿ-ಪಿಸಿಆರ್ ಪರೀಕ್ಷೆಯಲ್ಲಿ ರವಿ ಶಾಸ್ತ್ರಿಗೆ ಕೋವಿಡ್ ದೃಢಪಟ್ಟಿದೆ. ಸಣ್ಣಪ್ರಮಾಣದಲ್ಲಿ ಗಂಟಲು ನೋವಿನಿಂದ ಬಳಲುತ್ತಿದ್ದಾರೆ. 10 ದಿನಗಳ ಕಾಲ ಐಸೋಲೇಷನ್‌ನಲ್ಲಿರಲಿದ್ದು, 5ನೇ ಟೆಸ್ಟ್ ಪಂದ್ಯಕ್ಕೆ ತಂಡದೊಂದಿಗೆ ಮ್ಯಾಂಚೆಸ್ಟರ್‌ಗೆ ತೆರಳುವುದಿಲ್ಲ’ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.

‘ಅರುಣ್, ಶ್ರೀಧರ್ ಹಾಗೂ ನಿತೀನ್ ಕನಿಷ್ಠ 5 ದಿನಗಳ ಕಾಲ ಐಸೋಲೇಷನ್‌ಗೆ ಒಳಗಾಗಲಿದ್ದಾರೆ. ಅವರೂ ಕೂಡ ಮ್ಯಾಂಚೆಸ್ಟರ್‌ಗೆ ತೆರಳುವುದಿಲ್ಲ’ ಎಂದು ತಿಳಿಸಿದೆ. ಐಪಿಎಲ್ ಹಿನ್ನೆಲೆಯಲ್ಲಿ ಮ್ಯಾಂಚೆಸ್ಟರ್‌ನಲ್ಲಿ ಕ್ರಿಕೆಟಿಗರಿಗಾಗಿ ಪ್ರತ್ಯೇಕ ಬಯೋಬಬಲ್ ಸಿದ್ಧಪಡಿಸಲಾಗಿದೆ. ಸೆಪ್ಟೆಂಬರ್ 15 ರಂದು ಆಟಗಾರರು ಮತ್ತೊಂದು ಬಯೋಬಬಲ್‌ಗೆ ವರ್ಗಾವಣೆಯಾಗಲಿದ್ದಾರೆ’ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೂವರು ಕೋಚ್‌ಗಳು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಹಾಗೂ ನಾಯಕ ವಿರಾಟ್ ಕೊಹ್ಲಿ ಜತೆ ನಿರಂತರ ಸಂಪರ್ಕದಲ್ಲಿ ಇರಲಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net