

ದುಬೈ: ಪ್ರಸ್ತುತ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಆಫ್ಘಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿ ಪಂದ್ಯ ಇದೀಗ ಒಂದಷ್ಟು ದಾಖಲೆಗಳಿಗೆ ಸಾಕ್ಷಿಯಾಗುತ್ತಿದೆ. ಕ್ಯಾಪ್ಟನ್ ಹಶ್ಮತುಲ್ಲಾ ಶಾಹಿದಿ ನೇತೃತ್ವದಲ್ಲಿ ಸೌತ್ ಆಫ್ರಿಕಾ ತಂಡಕ್ಕೆ ಬೆವರಿಳಿಸುತ್ತಿರುವ ಆಫ್ಘಾನ್ ಪಡೆ, ಮೂರು ಪಂದ್ಯಗಳ ಸರಣಿಯಲ್ಲಿ ಈಗಾಗಲೇ ಎರಡು ಪಂದ್ಯವನ್ನು ಗೆದ್ದು ಏಕದಿನ ಸರಣಿಯನ್ನು ವಶಪಡಿಸಿಕೊಂಡಿದೆ. ಇನ್ನು ಈ ಮಧ್ಯೆ ವಿಶಿಷ್ಟ ದಾಖಲೆಯೊಂದಕ್ಕೆ ಸಾಕ್ಷಿಯಾದ ಆಫ್ಘಾನಿಸ್ತಾನ ತಂಡದ ಸ್ಟಾರ್ ಬೌಲರ್ ರಶೀದ್ ಖಾನ್, ಈ ಹಿಂದೆ ಯಾರೊಬ್ಬರು ಮಾಡದ ದಾಖಲೆಯನ್ನು ತಮ್ಮ ಮುಡಿಗೇರಿಸಿಕೊಂಡಿರುವುದು ವಿಶೇಷ.
ಇಂದು ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ತಂಡದ ಪರ ರಶೀದ್ ಖಾನ್ ಅದ್ಭುತ ಫಾರ್ಮ್ ಪ್ರದರ್ಶಿಸಿದರು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆಫ್ಘಾನ್ 50 ಓವರ್ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 311 ರನ್ ಕಲೆಹಾಕುವಲ್ಲಿ ಶಕ್ತವಾಯಿತು. ಈ ಗುರಿಯನ್ನು ಬೆನ್ನಟ್ಟಿದ ಸೌತ್ ಆಫ್ರಿಕಾ ತಂಡ ಕೇವಲ 134ಕ್ಕೆ ಆಲ್ಔಟ್ ಆಗಿ ಹೀನಾಯ ಸೋಲನ್ನು ಅನುಭವಿಸಿತು. ಎದುರಾಳಿಗಳ ವಿಕೆಟ್ಗಾಗಿ ಅದ್ಭುತ ಬೌಲಿಂಗ್ ದಾಳಿ ನಡೆಸಿದ ರಶೀದ್, ತಮ್ಮ ಜನ್ಮದಿನದಂದೇ ಬರೋಬ್ಬರಿ ಐದು ವಿಕೆಟ್ ಪಡೆದು ಆಫ್ಘಾನಿಸ್ತಾನ ಗೆಲುವಿಗೆ ಕಾರಣವಾಗುವುದರ ಜತೆಗೆ ಐತಿಹಾಸಿಕ ದಾಖಲೆ ಬರೆದರು.
53 ವರ್ಷಗಳ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ತಮ್ಮ ಹುಟ್ಟುಹಬ್ಬದಂದೇ ಐದು ವಿಕೆಟ್ ಪಡೆದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ರಶೀದ್ ಖಾನ್, ಈ ವಿಶಿಷ್ಟ ದಾಖಲೆಗೆ ಭಾಜನರಾಗಿದ್ದಾರೆ. ಜನ್ಮದಿನದಂದೇ ಈ ಹೊಸ ರೆಕಾರ್ಡ್ ಮಾಡಿರುವ ಖಾನ್, ತಂಡದಿಂದ ಹಾಗೂ ಕ್ರಿಕೆಟ್ ಅಭಿಮಾನಿಗಳಿಂದ ವ್ಯಾಪಕ ಪ್ರಶಂಸೆ ಸ್ವೀಕರಿಸಿದ್ದಾರೆ.
ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 177 ರನ್ಗಳ ಭರ್ಜರಿ ಜಯ ದಾಖಲಿಸಿದ ಆಫ್ಘಾನಿಸ್ತಾನ, ಇಲ್ಲಿಯವರೆಗೂ ಆಡಿರುವ ಏಕದಿನ ಪಂದ್ಯಗಳಲ್ಲಿ ಇದೇ ಮೊದಲು ಇಷ್ಟು ದೊಡ್ಡ ಅಂತರದಲ್ಲಿ ಗೆಲುವನ್ನು ಸಾಧಿಸಿರುವುದು. ಮೊದಲ ಮ್ಯಾಚ್ನಲ್ಲಿ 6 ವಿಕೆಟ್ಗಳಿಂದ ಜಯ ಸಾಧಿಸಿದ ಆಫ್ಘಾನ್ ಪಡೆ, ಇದೀಗ ಎರಡನೇ ಪಂದ್ಯದಲ್ಲಿ ಬರೋಬ್ಬರಿ 177 ರನ್ಗಳಿಂದ ಸೌತ್ ಆಫ್ರಿಕಾ ತಂಡವನ್ನು ಬಗ್ಗುಬಡಿದಿದೆ. 2-0 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿರುವ ಆಫ್ಘಾನಿಸ್ತಾನಕ್ಕೆ ಇನ್ನೊಂದು ಪಂದ್ಯ ಮಾತ್ರ ಬಾಕಿ ಉಳಿದಿದೆ,(ಏಜೆನ್ಸೀಸ್).