

ನವದೆಹಲಿ: ಟಿ20 ಕ್ರಿಕೆಟ್ ಇತಿಹಾಸದಲ್ಲಿ ಐತಿಹಾಸಿಕ ದಾಖಲೆ ಬರೆದಿರುವ ಆಫ್ಘಾನಿಸ್ತಾನ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ರಶೀದ್ ಖಾನ್, ಟಿ20 ಫಾರ್ಮೆಟ್ನಲ್ಲಿ 600 ವಿಕೆಟ್ಗಳನ್ನು ಪಡೆದ ಎರಡನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜುಲೈ 29ರಂದು ಮ್ಯಾನ್ಚೆಸ್ಟರ್ ಓರಿಜಿನಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಎರಡು ವಿಕೆಟ್ ಕಬಳಿಸಿದ ರಶೀದ್, ತಮ್ಮ ಟ್ರೆಂಟ್ ರಾಕೆಟ್ಸ್ ತಂಡಕ್ಕೆ ಗೆಲುವು ತಂದುಕೊಡುವುದರ ಜತೆ ಈ ಮೈಲಿಗಲ್ಲು ಸಾಧಿಸಿದ್ದಾರೆ.
441 ಪಂದ್ಯಗಳನ್ನು ಆಡಿರುವ 25 ವರ್ಷದ ಆಫ್ಘನ್ ಲೆಗ್ ಸ್ಪಿನ್ನರ್, ಟಿ20 ಕ್ರಿಕೆಟ್ನಲ್ಲಿ 600 ವಿಕೆಟ್ಗಳನ್ನು ಪಡೆದ ಎರಡನೇ ಕ್ರಿಕೆಟಿಗನಾಗಿ ಹೊರಹೊಮ್ಮಿದ್ದಾರೆ. ವೆಸ್ಟ್ ಇಂಡೀಸ್ನ ಆಲ್ರೌಂಡರ್ ದ್ವೈನೆ ಬ್ರಾವೋ ಅವರು 578 ಪಂದ್ಯಗಳಲ್ಲಿ 630 ವಿಕೆಟ್ಗಳನ್ನು ಪಡೆಯುವ ಮೂಲಕ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಬ್ರಾವೋ ನಂತರದಲ್ಲಿ ರಶೀದ್ ಇದ್ದಾರೆ. ಇನ್ನು 519 ಮ್ಯಾಚ್ಗಳಲ್ಲಿ 557 ವಿಕೆಟ್ಗಳನ್ನು ಕಬಳಿಸಿರುವ ಸುನಿಲ್ ನರೈನ್ ಮೂರನೇ ಸ್ಥಾನದಲ್ಲಿದ್ದಾರೆ. ಸೌತ್ ಆಫ್ರಿಕಾದ ಇಮ್ರಾನ್ ತಹೀರ್ (502 ವಿಕೆಟ್) ಮತ್ತು ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ (492) ನಾಲ್ಕು ಮತ್ತು ಐದು ಸ್ಥಾನಗಳನ್ನು ಅಲಂಕರಿಸಿದ್ದಾರೆ.
ಐಪಿಎಲ್ ಸೇರಿದಂತೆ ಹಲವಾರು ಟಿ20 ಫ್ರಾಂಚೈಸಿಗೆ ಆಡುವ ರಶೀದ್ ಖಾನ್, ಗುಜರಾತ್ ಟೈಟನ್ಸ್ ತಂಡದಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಹಾಗೂ ಬೌಲಿಂಗ್ ಜಾದುವಿನಿಂದ ಅಪಾರ ಸಂಖ್ಯೆಯಲ್ಲಿ ಭಾರತೀಯ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇನ್ನು ತಮ್ಮ ಸಾಧನೆ ಕುರಿತು ಸಂತೋಷದಿಂದ ಮಾತನಾಡಿದ ರಶೀದ್, "ಇದೆಕ್ಕೆಲ್ಲಾ ನೀವೇ (ಕ್ರೀಡಾಭಿಮಾನಿಗಳು) ಕಾರಣ. ನಿಮ್ಮಿಂದ ಇದು ಸಾಧ್ಯವಾಗಿದ್ದು, ನಿಮ್ಮ ಪ್ರೀತಿ ಹೀಗೆ ಸದಾ ನನ್ನ ಮೇಲಿರಲಿ, ಧನ್ಯವಾದ" ಎಂದು ಮನದಾಳದಿಂದ ತಿಳಿಸಿದರು,(ಏಜೆನ್ಸೀಸ್).