

ಬೆಂಗಳೂರು: ಕರ್ನಾಟಕ ತಂಡ ರಣಜಿ ಟ್ರೋಫಿ 2ನೇ ಚರಣದ ಮೊದಲ ಪಂದ್ಯ ಮತ್ತು ತನ್ನ 6ನೇ ಲೀಗ್ ಪಂದ್ಯದಲ್ಲಿ ಪಂಜಾಬ್ ಎದುರು ಬೋನಸ್ ಅಂಕ (ಒಟ್ಟು 7) ಕಲೆಹಾಕಿದ್ದರೂ, ನಾಕೌಟ್ ಹಂತಕ್ಕೇರಲು ಕೊನೇ ಪಂದ್ಯದಲ್ಲಿ ಹರಿಯಾಣ ವಿರುದ್ಧವೂ ಬೋನಸ್ ಅಂಕ ಗಳಿಸಬೇಕಾದ ಅಂದರೆ ಇನಿಂಗ್ಸ್ ಅಥವಾ 10 ವಿಕೆಟ್ ಗೆಲುವು ಕಾಣಬೇಕಾದ ಒತ್ತಡಕ್ಕೆ ಸಿಲುಕಿದೆ.
ಭಾನುವಾರ ಮುಕ್ತಾಯಗೊಂಡ ಮಧ್ಯಪ್ರದೇಶ ವಿರುದ್ಧದ ಪಂದ್ಯದಲ್ಲಿ ಕೇರಳ ಡ್ರಾ ಸಾಧಿಸಿ 3 ಅಂಕ ಕಲೆಹಾಕಿರುವುದು ಇದಕ್ಕೆ ಕಾರಣವಾಗಿದೆ. ಇದರಿಂದ ಕೇರಳ ಸಿ ಗುಂಪಿನಲ್ಲಿ ಒಟ್ಟು 21 ಅಂಕಗಳೊಂದಿಗೆ 2ನೇ ಸ್ಥಾನಕ್ಕೇರಿದ್ದರೆ, ಕರ್ನಾಟಕ 19 ಅಂಕಗಳೊಂದಿಗೆ 3ನೇ ಸ್ಥಾನಕ್ಕಿಳಿದಿದೆ. ಹರಿಯಾಣ 26 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರಿದಿದೆ.
ಜ. 30ರಿಂದ ಕರ್ನಾಟಕ ತನ್ನ 7ನೇ ಹಾಗೂ ಅಂತಿಮ ಲೀಗ್ ಪಂದ್ಯವನ್ನು ಬೆಂಗಳೂರಿನಲ್ಲೇ ಹರಿಯಾಣ ಎದುರು ಆಡಲಿದ್ದರೆ, ಕೇರಳ ತಂಡ ತನ್ನ ತವರೂರು ತಿರುವನಂತಪುರದಲ್ಲಿ ದುರ್ಬಲ ಬಿಹಾರ ವಿರುದ್ಧ ಆಡಲಿದೆ. ಬಿಹಾರ ಇದುವರೆಗೆ ಆಡಿರುವ 6 ಪಂದ್ಯಗಳಲ್ಲಿ 5ರಲ್ಲಿ ಸೋತು, 1 ಅಂಕವನ್ನಷ್ಟೇ ಗಳಿಸಿದೆ. ಹೀಗಾಗಿ ಕೇರಳ ತಂಡ ತನ್ನ ಕೊನೇ ಪಂದ್ಯದಲ್ಲಿ ಸೋತರೆ ಅಥವಾ ಡ್ರಾಕ್ಕೆ ತೃಪ್ತಿಪಟ್ಟರಷ್ಟೇ ಕರ್ನಾಟಕ, ಹರಿಯಾಣ ಎದುರು ಸಾಮಾನ್ಯ ಗೆಲುವು ಕಂಡು ನಾಕೌಟ್ಗೇರಬಹುದಾಗಿದೆ. ಕೇರಳ ಗೆದ್ದರೆ ಕರ್ನಾಟಕ, ಹರಿಯಾಣ ಎದುರು 7 ಅಂಕ ಗಳಿಸಿದರಷ್ಟೇ ನಾಕೌಟ್ ಪ್ರವೇಶಿಸಲಿದೆ. ಟೂರ್ನಿ ಸ್ವರೂಪದ ಅನ್ವಯ ಪ್ರತಿ ಗುಂಪಿನ ಅಗ್ರ 2 ತಂಡಗಳಷ್ಟೇ ಕ್ವಾರ್ಟರ್ಫೈನಲ್ಗೇರಲಿವೆ.