

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಯುವ ಎಡಗೈ ಬ್ಯಾಟರ್ ಆರ್. ಸ್ಮರಣ್ (203 ರನ್, 277 ಎಸೆತ, 25 ಬೌಂಡರಿ, 3 ಸಿಕ್ಸರ್) ದ್ವಿಶತಕದಾಟದಿಂದ ಕರ್ನಾಟಕ ತಂಡ ರಣಜಿ ಟ್ರೋಫಿ 2ನೇ ಚರಣದಲ್ಲಿ ಪ್ರವಾಸಿ ಪಂಜಾಬ್ ಎದುರು ಬೃಹತ್ ಮುನ್ನಡೆ ಸಾಧಿಸಿದ್ದು, ಇನಿಂಗ್ಸ್ ಗೆಲುವಿನತ್ತ ಕಣ್ಣಿಟ್ಟಿದೆ. ಬೋನಸ್ ಅಂಕ ಸಂಪಾದಿಸುವಲ್ಲಿ ಯಶಸ್ವಿಯಾದರೆ ಮಯಾಂಕ್ ಅಗರ್ವಾಲ್ ಪಡೆ ಸಿ ಗುಂಪಿನಿಂದ ನಾಕೌಟ್ ಹಂತಕ್ಕೇರುವ ಅವಕಾಶ ವೃದ್ಧಿಸಿಕೊಳ್ಳಲಿದೆ.
ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ತನ್ನ 6ನೇ ಲೀಗ್ ಪಂದ್ಯದಲ್ಲಿ ಶುಕ್ರವಾರ 4 ವಿಕೆಟ್ಗೆ 199 ರನ್ಗಳಿಂದ ಆಟ ಮುಂದುವರಿಸಿದ ಕರ್ನಾಟಕ 122.1 ಓವರ್ಗಳಲ್ಲಿ 475 ರನ್ಗಳಿಗೆ ಆಲೌಟ್ ಆಯಿತು. 420 ರನ್ ಹಿನ್ನಡೆಯೊಂದಿಗೆ 2ನೇ ಇನಿಂಗ್ಸ್ ಆರಂಭಿಸಿದ ಪಂಜಾಬ್ ದಿನದಂತ್ಯಕ್ಕೆ 13 ಓವರ್ಗಳಲ್ಲಿ 2 ವಿಕೆಟ್ಗೆ 24 ರನ್ ಗಳಿಸಿ ಸಂಕಷ್ಟದಲ್ಲಿದೆ. ನಾಯಕ ಶುಭಮಾನ್ ಗಿಲ್ (7*) ಜತೆಗೆ ಖಾತೆ ತೆರೆಯದ ನೈಟ್ ವಾಚ್ಮನ್ ಜಸ್ಸಿಂದರ್ ಸಿಂಗ್ ಕ್ರೀಸ್ನಲ್ಲಿದ್ದಾರೆ. ಪಂಜಾಬ್ ಇನಿಂಗ್ಸ್ ಸೋಲು ತಪ್ಪಿಸಿಕೊಳ್ಳಲು ಇನ್ನೂ 396 ರನ್ ಗಳಿಸಬೇಕಾಗಿದೆ. ಕರ್ನಾಟಕ 3ನೇ ದಿನ ಬೇಗನೆ 8 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರೆ, ಬೋನಸ್ ಸಹಿತ 7 ಅಂಕಗಳನ್ನು ಸಂಪಾದಿಸಿ ಅಂಕಪಟ್ಟಿಯಲ್ಲಿ ಮೇಲಕ್ಕೇರುವ ಅವಕಾಶ ಹೊಂದಿದೆ.
*3: ಆರ್. ಸ್ಮರಣ್ (21 ವರ್ಷ 263 ದಿನ) ಕರ್ನಾಟಕದ 3ನೇ ಅತಿಕಿರಿಯ ದ್ವಿಶತಕ ವೀರ ಎನಿಸಿದರು. ಜಿಆರ್ ವಿಶ್ವನಾಥ್ (18 ವರ್ಷ, 272 ದಿನ, 1967) ಮತ್ತು ರಾಹುಲ್ ದ್ರಾವಿಡ್ (19 ವರ್ಷ, 321 ದಿನ, 1992) ಮೊದಲಿಬ್ಬರು ಸಾಧಕರು.
ಸ್ಮರಣೀಯ ದ್ವಿಶತಕ
ಬೆಳಗ್ಗೆ 83 ರನ್ಗಳಿಂದ ಬ್ಯಾಟಿಂಗ್ ಮುಂದುವರಿಸಿದ 21 ವರ್ಷದ ರವಿಚಂದ್ರನ್ ಸ್ಮರಣ್ 119 ಎಸೆತಗಳಲ್ಲೇ ಶತಕ ಪೂರೈಸಿದರು. ನಂತರ ತನ್ನ ಚೊಚ್ಚಲ ಪ್ರಥಮ ದರ್ಜೆ ಶತಕವನ್ನು ದ್ವಿಶತಕವಾಗಿ ಪರಿವರ್ತಿಸುವಲ್ಲೂ ಯಶಸ್ವಿಯಾದರು. 205 ಎಸೆತಗಳಲ್ಲಿ 150 ರನ್ ಗಳಿಸಿದ ಸ್ಮರಣ್, 270 ಎಸೆತಗಳಲ್ಲಿ ದ್ವಿಶತಕ ಪೂರೈಸಿದರು. ಕಳೆದ ಶನಿವಾರವಷ್ಟೇ ಅವರು ವಿಜಯ್ ಹಜಾರೆ ಟ್ರೋಫಿ ಫೈನಲ್ನಲ್ಲೂ ಶತಕ ಸಿಡಿಸಿದ್ದರು. 5ನೇ ವಿಕೆಟ್ಗೆ ಅಭಿನವ್ ಮನೋಹರ್ (34) ಜತೆಗೆ 86 ರನ್, 6ನೇ ವಿಕೆಟ್ಗೆ ಶ್ರೇಯಸ್ ಗೋಪಾಲ್ (31) ಜತೆಗೆ 75 ರನ್, 7ನೇ ವಿಕೆಟ್ಗೆ ಯಶೋವರ್ಧನ್ ಪರಂತಾಪ್ (26) ಜತೆಗೆ 67 ರನ್ ಸ್ಮರಣ್ ರಾಜ್ಯಕ್ಕೆ ಭಾರಿ ಮುನ್ನಡೆ ತಂದುಕೊಟ್ಟರು. ಅಂತಿಮವಾಗಿ ಆ್ಸ್ಪಿನ್ನರ್ ಜಸ್ಸಿಂದರ್ ಸಿಂಗ್ ಎಸೆತದಲ್ಲಿ ಸ್ಮರಣ್ ಬೌಲ್ಡ್ ಆದರು. ಕೊನೆಯಲ್ಲಿ ಪ್ರಸಿದ್ಧ ಕೃಷ್ಣ (30) ಬಿರುಸಿನ ಆಟವಾಡಿ ಮುನ್ನಡೆಯನ್ನು 400ರ ಗಡಿ ದಾಟಿಸಿದರು.
ಪಂಜಾಬ್ 2ನೇ ಸರದಿಗೂ ಶಾಕ್
ಭಾರಿ ಹಿನ್ನಡೆಯೊಂದಿಗೆ ದಿನದಂತ್ಯದಲ್ಲಿ 2ನೇ ಇನಿಂಗ್ಸ್ ಆರಂಭಿಸಿದ ಪಂಜಾಬ್ಗೆ ಆರಂಭಿಕ ಆಘಾತ ನೀಡುವಲ್ಲಿ ಕರ್ನಾಟಕ ಯಶಸ್ವಿಯಾಯಿತು. ಎಡಗೈ ವೇಗಿ ಅಭಿಲಾಷ್ ಶೆಟ್ಟಿ, ಆರಂಭಿಕ ಪ್ರಭ್ಸಿಮ್ರನ್ ಸಿಂಗ್ರನ್ನು (1) ಇನಿಂಗ್ಸ್ನ 2ನೇ ಓವರ್ನಲ್ಲೇ ಔಟ್ ಮಾಡಿದರು. ನಂತರ ದಿನದ ಕೊನೇ ಓವರ್ಗೆ ಮುನ್ನ ವನ್ಡೌನ್ ಬ್ಯಾಟರ್ ಅನ್ಮೋಲ್ಪ್ರೀತ್ ಸಿಂಗ್ (14) ಪ್ರಸಿದ್ಧ ಕೃಷ್ಣಗೆ ವಿಕೆಟ್ ಒಪ್ಪಿಸಿದರು.
ಪಂಜಾಬ್: 55 ಮತ್ತು13 ಓವರ್ಗಳಲ್ಲಿ 2 ವಿಕೆಟ್ಗೆ 24 (ಪ್ರಭ್ಸಿಮ್ರನ್ 1, ಗಿಲ್ 7*, ಅನ್ಮೋಲ್ಪ್ರೀತ್ 14, ಅಭಿಲಾಷ್ 11ಕ್ಕೆ 1, ಪ್ರಸಿದ್ಧ ಕೃಷ್ಣ 4ಕ್ಕೆ 1). ಕರ್ನಾಟಕ: 122.1 ಓವರ್ಗಳಲ್ಲಿ 475 (ಸ್ಮರಣ್ 203, ಮನೋಹರ್ 34, ಶ್ರೇಯಸ್ 31, ಪರಂತಾಪ್ 26, ಪ್ರಸಿದ್ಧ 30, ಕೌಶಿಕ್ 10*, ಅಭಿಲಾಷ್ 12, ಗುರ್ನೂರ್ 125ಕ್ಕೆ 2, ಜಸ್ಸಿಂದರ್ 66ಕ್ಕೆ 3, ಮಾರ್ಕಂಡೆ 53ಕ್ಕೆ 3).