ರಾಜ್ಯಕ್ಕೆ ಮೊದಲ ದಿನದ ಗೌರವ: ಬಂಗಾಳ ತಂಡಕ್ಕೆ ಅನುಷ್ಟಪ್ ಆಸರೆ, ಮಿಥುನ್ ಮಿಂಚಿನ ದಾಳಿ

SP 3
Published on

ಕೋಲ್ಕತ: ವೇಗಿಗಳ ಲಯಬದ್ದ ದಾಳಿಯಿಂದಾಗಿ ದಿನದ ಆರಂಭದಲ್ಲೇ ಇಮ್ಮಡಿಗೊಂಡ ವಿಶ್ವಾಸ. ಆದರೆ, ಮೊದಲ ದಿನದಾಟದಲ್ಲೇ ಆತಿಥೇಯ ತಂಡವನ್ನು ಆಲೌಟ್ ಬಲೆಗೆ ಬೀಳಿಸುವ ಕರ್ನಾಟಕದ ಯೋಜನೆಗೆ ಅನುಷ್ಟಪ್ ಮಜುಮ್ದಾರ್ (120ರನ್, 173 ಎಸೆತ, 18 ಬೌಂಡರಿ, 1 ಸಿಕ್ಸರ್) ಅಡ್ಡಿಯಾದರು. ಇದು ಈಡನ್ ಗಾರ್ಡನ್ಸ್ ಮೈದಾನದಲ್ಲಿ ಶನಿವಾರ ಆರಂಭಗೊಂಡ 8 ಬಾರಿ ಚಾಂಪಿಯನ್ ಕರ್ನಾಟಕ ಹಾಗೂ ಬಂಗಾಳ ನಡುವಿನ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದ ಮೊದಲ ದಿನದಾಟದ ಹೈಲೈಟ್ಸ್. ಇದರ ನಡುವೆ ಕರುಣ್ ನಾಯರ್ ಪಡೆ ಮೊದಲ ದಿನದ ಗೌರವ ತನ್ನದಾಗಿಸಿಕೊಂಡಿತು.

ಅನುಭವಿ ವೇಗದ ಬೌಲರ್​ಗಳಾದ ಅಭಿಮನ್ಯು ಮಿಥುನ್ (65ಕ್ಕೆ 3), ಪ್ರಸಿದ್ಧ ಕೃಷ್ಣ (62ಕ್ಕೆ 2),ರೋನಿತ್ ಮೋರೆ (45ಕ್ಕೆ2) ಹಾಗೂ ಸ್ಪಿನ್ನರ್ ಕೆ.ಗೌತಮ್ (88ಕ್ಕೆ 2) ಸಂಘಟಿತ ದಾಳಿಗೆ ನಲುಗಿದ ಬಂಗಾಳ ತಂಡ ಮೊದಲ ದಿನದಾಟದ ಅಂತ್ಯಕ್ಕೆ 9 ವಿಕೆಟ್​ಗೆ 275 ರನ್ ಪೇರಿಸಿದೆ. ದಿನದಾಟದ ಮೂರನೇ ಅವಧಿಯಲ್ಲಿ ಎದುರಾಳಿ ತಂಡಕ್ಕೆ 2 ಜೀವದಾನ ನೀಡಿದ ಕರ್ನಾಟಕ, ಮೊದಲ ದಿನವೇ ಆಲೌಟ್ ಖೆಡ್ಡಾಗೆ ಬೀಳಿಸುವ ಅವಕಾಶ ತಪ್ಪಿಸಿಕೊಂಡಿತು. ಟಾಸ್ ಜಯಿಸಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ನಾಯಕ ಕರುಣ್ ನಾಯರ್ ನಿರ್ಧಾರವನ್ನು ವೇಗಿಗಳು ದಿನದ ಆರಂಭದಲ್ಲೇ ಸಮರ್ಥಿಸಿಕೊಂಡರು. ಅನುಭವಿ ವೇಗಿ ಅಭಿಮನ್ಯು ಮಿಥುನ್, ಅಭಿಷೇಕ್ ರಾಮನ್ (0) ವಿಕೆಟ್ ಕಬಳಿಸಿ ಆರಂಭಿಕ ಆಘಾತ ನೀಡಿದರು. ಇತರ ವೇಗಿಗಳಾದ ಪ್ರಸಿದ್ಧ ಕೃಷ್ಣ ಹಾಗೂ ರೋನಿತ್ ಮೋರೆ ಜೋಡಿಯಿಂದ ಸಾಥ್ ಗಿಟ್ಟಿಸಿಕೊಂಡ ಮಿಥುನ್ ಆತಿಥೇಯ ತಂಡಕ್ಕೆ ಆಘಾತ ಮೇಲೆ ಆಘಾತ ನೀಡಿದರು. ಈ ತ್ರಿಮೂರ್ತಿಗಳ ಮಾರಕ ದಾಳಿಗೆ ನಲುಗಿದ ಬಂಗಾಳ ಭೋಜನ ವಿರಾಮದ ವೇಳೆಗೆ 66 ರನ್​ಗಳಿಗೆ 5 ವಿಕೆಟ್ ಕಳೆದುಕೊಂಡಿತು. ಇದರಿಂದ ಕನಿಷ್ಠ 100ರ ಗಡಿ ದಾಟುವುದು ದುಸ್ತರ ಎನಿಸಿತು.

ತಂಡದ ಕಳಪೆ ಫೀಲ್ಡಿಂಗ್

ಕರ್ನಾಟಕ ತಂಡದ ಕಳಪೆ ಫೀಲ್ಡಿಂಗ್ ನಿರ್ವಹಣೆ ಸೆಮಿಫೈನಲ್​ನಲ್ಲೂ ಮುಂದುವರಿಯಿತು. ನಾಯಕ ಕರುಣ್ ನಾಯರ್ ಹಾಗೂ ವಿಕೆಟ್ ಕೀಪರ್ ಶರತ್ ಶ್ರೀನಿವಾಸ್ ತಲಾ ಒಂದು ಕ್ಯಾಚ್ ಕೈಚೆಲ್ಲುವ ಮೂಲಕ ಬಂಗಾಳ ತಂಡದ ಚೇತರಿಕೆಗೆ ಅವಕಾಶ ನೀಡಿದರು. ಲೀಗ್ ಹಂತದಲ್ಲೂ ಶರತ್ ಶ್ರೀನಿವಾಸ್, ಕರುಣ್ ಸತತವಾಗಿ ಕ್ಯಾಚ್ ಕೈಚೆಲ್ಲುವ ಮೂಲಕ ಟೀಕೆಗೆ ಗುರಿಯಾಗಿದ್ದರು.

ರಾಹುಲ್ ಆಗಮನ, ಸುಚಿತ್ ಔಟ್

ಸ್ಟಾರ್ ಬ್ಯಾಟ್ಸ್​ಮನ್ ಕೆಎಲ್ ರಾಹುಲ್ ಆಗಮನದಿಂದಾಗಿ ಜೆ.ಸುಚಿತ್ ಹನ್ನೊಂದರ ಬಳಗದಿಂದ ಹೊರಗುಳಿದರು. ಇದರಿಂದ ಕರ್ನಾಟಕ ಏಕೈಕ ಬದಲಾವಣೆಯೊಂದಿಗೆ ಕಣಕ್ಕಿಳಿಯಿತು.

ಅನುಷ್ಟಪ್ ಶತಕದ ಆಸರೆ

ಅಗ್ರಕ್ರಮಾಂಕದ ಬ್ಯಾಟ್ಸ್​ಮನ್​ಗಳ ವೈಫಲ್ಯದಿಂದ ತತ್ತರಿಸಿದ್ದ ಬಂಗಾಳ ತಂಡಕ್ಕೆ ಅನುಷ್ಟಪ್ ಮಜುಮ್ದಾರ್ ಆಸರೆಯಾದರು. ಭೋಜನ ವಿರಾಮದ ಬಳಿಕ ಶ್ರೀವತ್ಸ ಗೋಸ್ವಾಮಿ ಖಾತೆ ತೆರೆಯುವ ಮುನ್ನವೇ ನಿರ್ಗಮನಿಸಿದರು. 67 ರನ್​ಗಳಿಗೆ 6 ವಿಕೆಟ್ ಕಳೆದುಕೊಂಡಿದ್ದ ವೇಳೆ ಅನುಷ್ಟಪ್​ಗೆ ಜತೆಯಾದ ಶಹಬಾಜ್ ಅಹಮದ್ (35ರನ್, 50 ಎಸೆತ, 7 ಬೌಂಡರಿ) ಇನಿಂಗ್ಸ್ ಕಟ್ಟಲು ಯತ್ನಿಸಿದರು. ಈ ಜೋಡಿ 7ನೇ ವಿಕೆಟ್​ಗೆ 72 ರನ್ ಪೇರಿಸಿ ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಿಂದ ತಂಡವನ್ನು ಪಾರು ಮಾಡಿತು. ಶಹಬಾಜ್ ವಿಕೆಟ್ ಕಬಳಿಸುವ ಮೂಲಕ ಈ ಜೋಡಿಗೆ ಮಿಥುನ್ ಬ್ರೇಕ್ ಹಾಕಿದರು. ಕೆಳಕ್ರಮಾಂಕದ ಮತ್ತೋರ್ವ ಬ್ಯಾಟ್ಸ್ ಮನ್ ಅಕ್ಷದೀಪ್ (44ರನ್, 72 ಎಸೆತ, 3 ಬೌಂಡರಿ, 3 ಸಿಕ್ಸರ್) ಅನುಷ್ಟಪ್​ಗೆ ಅಗತ್ಯ ಸಾಥ್ ನೀಡಿದರು. ರಾಜ್ಯದ ಫೀಲ್ಟರ್​ಗಳು ನೀಡಿದ ಜೀವದಾನ ಲಾಭ ಗಿಟ್ಟಿಸಿಕೊಂಡ ಈ ಜೋಡಿ 8ನೇ ವಿಕೆಟ್​ಗೆ 103 ರನ್ ಜತೆಯಾಟವಾಡಿತು. ಕನಿಷ್ಠ 200ರೊಳಗೆ ಕುಸಿಯುವ ಆತಂಕದಲ್ಲಿ ಬಂಗಾಳ ರಾಜ್ಯದ ಫೀಲ್ಡರ್​ಗಳು ನೀಡಿದ ಜೀವದಾನದಿಂದ ಇನಿಂಗ್ಸ್ ಚೇತರಿಕೆ ಕಂಡಿತು. ಇದರ ಲಾಭ ಗಿಟ್ಟಿಸಿಕೊಂಡ ಅನುಷ್ಟಪ್ ಸತತ 2ನೇ ಶತಕ ದಾಖಲಿಸಿದರು. ಅಂತಿಮವಾಗಿ ಕೆ.ಗೌತಮ್ ಅಕ್ಷದೀಪ್ ವಿಕೆಟ್ ಕಬಳಿಸಿದರೆ, ಬಳಿಕ ಬಂದ ಮುಕೇಶ್ ಕುಮಾರ್ (7) ಪ್ರಸಿದ್ಧ ಕೃಷ್ಣಗೆ ವಿಕೆಟ್ ನೀಡಿದರು. ಮೊದಲ ದಿನದಾಟವೇ ಇನಿಂಗ್ಸ್ ಆರಂಭಿಸುವ ಕರ್ನಾಟಕದ ಯೋಜನೆಗೆ ಅನುಷ್ಟಪ್ ಅಡ್ಡಿಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net