ಕರ್ನಾಟಕದ ಹಿಡಿತ, ಬರೋಡ ಪ್ರತಿರೋಧ: ಮುಂದುವರಿದ ರಾಜ್ಯದ ಫೀಲ್ಡಿಂಗ್ ವೈಫಲ್ಯ, ಇನಿಂಗ್ಸ್ ಸೋಲಿನಿಂದ ಪಾರಾದ ಪ್ರವಾಸಿ ತಂಡ

anaji
Published on

ಬೆಂಗಳೂರು: ಕಳಪೆ ಫೀಲ್ಡಿಂಗ್ ನಡುವೆಯೂ ಬೌಲರ್​ಗಳ ಬಿಗಿದಾಳಿ ನೆರವಿನಿಂದ ಆತಿಥೇಯ ಕರ್ನಾಟಕ ತಂಡ ರಣಜಿ ಟ್ರೋಫಿ ಟೂರ್ನಿಯ 9ನೇ ಹಾಗೂ ಅಂತಿಮ ಸುತ್ತಿನ ಪಂದ್ಯದಲ್ಲಿ ಬರೋಡ ಎದುರು ಮೇಲುಗೈ ಸಾಧಿಸಿದೆ. ಇನಿಂಗ್ಸ್ ಮುನ್ನಡೆಯೊಂದಿಗೆ ಎಂಟರ ಘಟ್ಟದ ಹಾದಿಯಲ್ಲಿರುವ 8 ಬಾರಿಯ ಚಾಂಪಿಯನ್ ಕರ್ನಾಟಕ ತಂಡಕ್ಕೆ ಎರಡನೇ ದಿನದಾಟದಲ್ಲಿ ಪ್ರವಾಸಿ ತಂಡ ಕೊಂಚ ಪ್ರತಿರೋಧ ಒಡ್ಡಿದೆ. ಎದುರಾಳಿ ತಂಡಕ್ಕೆ 4 ಜೀವದಾನ ನೀಡಿದ ಕರ್ನಾಟಕದ ಫೀಲ್ಡರ್​ಗಳು ಮತ್ತಷ್ಟು ಒತ್ತಡ ಹೇರುವ ಅವಕಾಶ ತಪ್ಪಿಸಿಕೊಂಡರು.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 7 ವಿಕೆಟ್​ಗೆ 165 ರನ್​ಗಳಿಂದ ಗುರುವಾರ ಆಟ ಆರಂಭಿಸಿದ ಕರ್ನಾಟಕ ತಂಡ, 233 ರನ್​ಗಳಿಗೆ ಸರ್ವಪತನ ಕಂಡಿತು. ಇದರೊಂದಿಗೆ 148 ರನ್ ಮುನ್ನಡೆ ಸಾಧಿಸಿ ಎದುರಾಳಿಗೆ ಒತ್ತಡ ಹೇರಿತು. ಬಳಿಕ 2ನೇ ಸರದಿ ಬ್ಯಾಟಿಂಗ್ ಆರಂಭಿಸಿರುವ ಬರೋಡ, ಅಹ್ಮದ್ನೂರ್ ಪಠಾಣ್ (90ರನ್, 162 ಎಸೆತ, 8 ಬೌಂಡರಿ, 3 ಸಿಕ್ಸರ್) ಹಾಗೂ ಅನುಭವಿ ದೀಪಕ್ ಹೂಡಾ (50 ರನ್, 71 ಎಸೆತ, 3 ಬೌಂಡರಿ, 2 ಸಿಕ್ಸರ್) ನೆರವಿನಿಂದ ಇನಿಂಗ್ಸ್ ಸೋಲಿನ ಭೀತಿಯಿಂದ ಪಾರಾಗಿದ್ದು, ದಿನದಂತ್ಯಕ್ಕೆ 5 ವಿಕೆಟ್​ಗೆ 208 ರನ್ ಕಲೆಹಾಕಿ 60 ರನ್ ಮುನ್ನಡೆ ಸಾಧಿಸಿದೆ. ಬರೋಡ ತಂಡ ಮೊದಲ ಇನಿಂಗ್ಸ್​ನಲ್ಲಿ 85 ರನ್​ಗೆ ಕುಸಿದಿತ್ತು.

ಪ್ರವಾಸಿಗರಿಗೆ ಅಹ್ಮದ್ನೂರ್-ದೀಪಕ್ ಹೂಡಾ ಆಸರೆ

ಬರೋಡ ತಂಡದ 2ನೇ ಸರದಿಯಲ್ಲಿ ಕೇದಾರ್ ದೇವಧರ್ (15) ಹಾಗೂ ಅಹ್ಮದ್ನೂರ್ ಪಠಾಣ್ ಆರಂಭಿಕ ಜೋಡಿ ರಕ್ಷಣಾತ್ಮಕ ಆಟದತ್ತ ಗಮನನೀಡಿತು. 45 ರನ್ ಪೇರಿಸಿದ ಈ ಜೋಡಿಯನ್ನು ಪ್ರಸಿದ್ಧ ಕೃಷ್ಣ ಬೇರ್ಪಡಿಸಲು ಯಶಸ್ವಿಯಾದರು. ಬಳಿಕ ವಿಷ್ಣು ಸೋಲಂಕಿ (2) ಗೌತಮ್ ಎಸೆತದಲ್ಲಿ ಎಲ್​ಬಿಯಾದರು. ಇದರಿಂದ ಪ್ರವಾಸಿ ತಂಡ 48 ರನ್​ಗಳಿಗೆ 2 ವಿಕೆಟ್ ಕಳೆದುಕೊಂಡಿತು. ಆಗ ಜತೆಯಾದ ಅಹ್ಮದ್ನೂರ್ ಪಠಾಣ್ ಹಾಗೂ ಅನುಭವಿ ದೀಪಕ್ ಹೂಡಾ ಜೋಡಿ ರಾಜ್ಯದ ಬೌಲಿಂಗ್ ದಾಳಿಗೆ ಕೆಲಕಾಲ ಪ್ರತಿರೋಧ ವ್ಯಕ್ತಪಡಿಸಿತು. ಈ ಹಂತದಲ್ಲಿ ತಲಾ ಒಂದು ಜೀವದಾನ ಗಿಟ್ಟಿಸಿಕೊಂಡ ಈ ಜೋಡಿ ಬಿರುಸಿನ ಬ್ಯಾಟಿಂಗ್ ಮೂಲಕ ಗಮನಸೆಳೆಯಿತು. 3ನೇ ವಿಕೆಟ್​ಗೆ 94 ರನ್ ಕಲೆಹಾಕಿದ್ದ ವೇಳೆ ವೇಗಿ ರೋನಿತ್ ಮೋರೆ ಆಘಾತ ನೀಡಿದರು. ಬಳಿಕ ಬಂದ ನಾಯಕ ಕೃನಾಲ್ ಪಾಂಡ್ಯ (5) ರೋನಿತ್ ಎಸೆತದಲ್ಲೇ ಔಟಾದರು.

ಮತ್ತೆ ಕಳಪೆ ಫೀಲ್ಡಿಂಗ್

ಶಿವಮೊಗ್ಗದಲ್ಲಿ ಮಧ್ಯಪ್ರದೇಶ ಎದುರು ಕಳಪೆ ಫೀಲ್ಡಿಂಗ್​ನಿಂದಲೇ ಗೆಲುವು ಕೈಚೆಲ್ಲಿದ್ದ ಕರ್ನಾಟಕ, ಹಿಂದಿನ ತಪ್ಪನ್ನು ತಿದ್ದಿಕೊಂಡಂತೆ ಕಂಡುಬರಲಿಲ್ಲ. ದೀಪಕ್ ಹೂಡಾ ಹಾಗೂ ಅಹ್ಮದ್ನೂರ್ ಪಠಾಣ್​ಗೆ ಜೀವದಾನ ನೀಡುವ ಮೂಲಕ 2ನೇ ದಿನದಾಟದಲ್ಲೇ ಪ್ರವಾಸಿಗರನ್ನು ಕಟ್ಟಿಹಾಕುವ ಅವಕಾಶದಿಂದ ಕರ್ನಾಟಕ ವಂಚಿತವಾಯಿತು. ದೀಪಕ್ ಹೂಡಾ ವೈಯಕ್ತಿಕ ಮೊತ್ತ 27 ರನ್​ಗಳಿಸಿದ್ದ ವೇಳೆ ಕೆ.ಗೌತಮ್ ಎಸೆತದಲ್ಲಿ ಶಾರ್ಟ್ ಲೆಗ್​ನಲ್ಲಿದ್ದ ಬದಲಿ ಫೀಲ್ಡರ್ ಡಿ.ನಿಶ್ಚಲ್ ಕ್ಯಾಚ್ ಬಿಟ್ಟರೆ, ಇದಾದ ಕೆಲಹೊತ್ತಿನಲ್ಲೇ ಅಹ್ಮದ್ನೂರ್ 55 ರನ್​ಗಳಿಸಿದ್ದ ವೇಳೆ ಪವನ್ ದೇಶಪಾಂಡೆ ಓವರ್​ನಲ್ಲಿ ಕೈಗೆ ಬಂದ ಕ್ಯಾಚ್​ಅನ್ನು ನಾಯಕ ಕರುಣ್ ನಾಯರ್ ಕೈಚೆಲ್ಲಿದರು.

ಮೊತ್ತ ಹಿಗ್ಗಿಸಿದ ಮಿಥುನ್-ಶರತ್

ಬೆಳಗ್ಗೆ ಕ್ರಮವಾಗಿ 19 ಮತ್ತು 9 ರನ್​ಗಳಿಂದ ದಿನದಾಟ ಆರಂಭಿಸಿದ ಶರತ್ ಶ್ರೀನಿವಾಸ್ ಹಾಗೂ ಅಭಿಮನ್ಯು ಮಿಥುನ್ ಜೋಡಿ ರಾಜ್ಯ ತಂಡದ ಮೊತ್ತವನ್ನು 200ರ ಗಡಿ ದಾಟಿಸಲು ನೆರವಾಯಿತು. ದಿನದ ಆರಂಭದಲ್ಲಿ ಈ ಜೋಡಿ ಬುಧವಾರದ ಮೊತ್ತಕ್ಕೆ ಮತ್ತೆ 39 ರನ್ ಕಲೆಹಾಕಿತು. ಒಟ್ಟಾರೆ ಈ ಜೋಡಿ 8ನೇ ವಿಕೆಟ್​ಗೆ 62 ರನ್ ಜತೆಯಾಟವಾಡಿತು.

| ರಘುನಾಥ್ ಡಿ.ಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net