

ಶಿವಮೊಗ್ಗ: ದಿನದ ಆರಂಭದಲ್ಲೇ ಆಘಾತ ಎದುರಿಸಿದರೂ ಅನುಭವಿ ಬ್ಯಾಟ್ಸ್ಮನ್ ಆರ್.ಸಮರ್ಥ್ (105* ರನ್, 278 ಎಸೆತ, 6 ಬೌಂಡರಿ) ಹಾಗೂ ಕೆವಿ ಸಿದ್ದಾರ್ಥ್ (62*ರನ್, 130 ಎಸೆತ, 7 ಬೌಂಡರಿ) ಜೋಡಿಯ ಸಮರ್ಥ ನಿರ್ವಹಣೆಯ ಫಲವಾಗಿ ಆತಿಥೇಯ ಕರ್ನಾಟಕ ತಂಡ ರಣಜಿ ಟ್ರೋಫಿ ಟೂರ್ನಿಯ 8ನೇ ಸುತ್ತಿನ ಪಂದ್ಯದಲ್ಲಿ ಮಧ್ಯಪ್ರದೇಶ ಎದುರು ಬೃಹತ್ ಮೊತ್ತದತ್ತ ಮುಖಮಾಡಿದೆ. ಜಿಗುಟು ಬ್ಯಾಟಿಂಗ್ ಮೂಲಕವೇ ದಿನವಿಡೀ ಬ್ಯಾಟಿಂಗ್ ಕಾಯ್ದುಕೊಂಡ ಆರ್. ಸಮರ್ಥ್ ಪ್ರಸಕ್ತ ಆವೃತ್ತಿಯಲ್ಲಿ ಕರ್ನಾಟಕದ ಮೊದಲ ಶತಕ ದಾಖಲಿಸುವ ಮೂಲಕ ದಿನದ ಗೌರವ ಪಡೆದರು.
ಆತಿಥೇಯರಿಗೆ ಆರಂಭಿಕ ಆಘಾತ: ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಮಧ್ಯಪ್ರದೇಶ ನಾಯಕ ಶುಭಂ ಶರ್ಮ ನಿರ್ಧಾರವನ್ನು ಸಮರ್ಥಿಸುವಂತೆ ಬೌಲರ್ಗಳು ದಾಳಿ ಸಂಘಟಿಸಿದರು. ಆರಂಭದಲ್ಲಿ ಬ್ಯಾಟಿಂಗ್ ಮಾಡಲು ಕರ್ನಾಟಕದ ಆಟಗಾರರು ತಿಣುಕಾಡಿದರು. ದಿನದ 2ನೇ ಓವರ್ನಲ್ಲೇ ಭರವಸೆಯ ದೇವದತ್ ಪಡಿಕಲ್ (0) ಶೂನ್ಯಕ್ಕೆ ಪೆವಿಲಿಯನ್ ಸೇರಿದರು. ಬಳಿಕ ಕ್ರೀಸ್ಗಿಳಿದ ರೋಹನ್ ಕದಂ (9) ಮತ್ತೊಮ್ಮೆ ಸಿಕ್ಕ ಅವಕಾಶವನ್ನು ಸೂಕ್ತವಾಗಿ ಬಳಸಿಕೊಳ್ಳಲು ವಿಫಲರಾದರು. ರವಿ ಯಾದವ್ ಬೌಲಿಂಗ್ನಲ್ಲಿ ಕೀಪರ್ ಹಿಮಾಂಶು ಮಂತ್ರಿಗೆ ಕ್ಯಾಚ್ ನೀಡಿ ಪಡಿಕಲ್ ನಿರ್ಗಮಿಸಿದರು. ಎಡಗೈ ವೇಗಿ ರವಿ ಯಾದವ್, ಮಧ್ಯಮ ವೇಗಿಗಳಾದ ಗೌರವ್ ಯಾದವ್ ಹಾಗೂ ವೆಂಕಟೇಶ್ ಅಯ್ಯರ್ ಉತ್ತಮ ದಾಳಿ ನಡೆಸಿದರು.
ನಿರಾಸೆ ಮೂಡಿಸಿದ ಕರುಣ್: ನಾಯಕ ಕರುಣ್ ನಾಯರ್ (22) ಮತ್ತೊಮ್ಮೆ ದೊಡ್ಡ ಮೊತ್ತ ಪೇರಿಸಲು ವಿಫಲರಾದರು. 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕರುಣ್ ನಾಯಕನ ಇನಿಂಗ್ಸ್ ಆಡುವಲ್ಲಿ ಎಡವಿದರು. ಸಮರ್ಥ್ ಜತೆಗೂಡಿ ಭೋಜನ ವಿರಾಮದವರೆಗೂ ವಿಕೆಟ್ ಕಾಯ್ದುಕೊಂಡ ಕರುಣ್, ಬಳಿಕ 42ನೇ ಓವರ್ನಲ್ಲಿ 22 ರನ್ ಗಳಿಸಿ ಕುಲದೀಪ್ ಸೇನ್ಗೆ ವಿಕೆಟ್ ಒಪ್ಪಿಸಿದರು. ಇದರಿಂದ 83 ರನ್ಗಳಿಗೆ 3 ವಿಕೆಟ್ ಕಳೆದುಕೊಂಡ ಕರ್ನಾಟಕ ಆರಂಭಿಕ ಆಘಾತದಿಂದ ತತ್ತರಿಸಿತು.
ಸಮರ್ಥ್-ಸಿದ್ಧಾರ್ಥ್ ಆಸರೆ
ಅಗ್ರ ಕ್ರಮಾಂಕದ ವೈಫಲ್ಯದಿಂದ ತತ್ತರಿಸಿದ್ದ ಕರ್ನಾಟಕಕ್ಕೆ ಆರಂಭಿಕ ಸಮರ್ಥ್ ಹಾಗೂ ಕೆವಿ ಸಿದ್ದಾರ್ಥ್ ಜೋಡಿ ಆಸರೆಯಾಯಿತು. ದಿನದ ಆರಂಭದಿಂದಲೂ ಜಿಗುಟು ಬ್ಯಾಟಿಂಗ್ ಮೂಲಕವೇ ಸಮರ್ಥ್ ಎಚ್ಚರಿಕೆಯ ನಿರ್ವಹಣೆ ತೋರಿದರು. ಸಮರ್ಥ್ಗೆ ತಕ್ಕ ಸಾಥ್ ನೀಡಿದ ಸಿದ್ದಾರ್ಥ್ ಮುರಿಯದ 4ನೇ ವಿಕೆಟ್ಗೆ 150 ರನ್ ಕಲೆಹಾಕಿದರು. ಸಿದ್ದಾರ್ಥ್ ಎದುರಾಳಿ ತಂಡ ನೀಡಿದ ಜೀವದಾನದ ಲಾಭ ಪಡೆದರು. ಚಹಾ ವಿರಾಮದ ವೇಳೆ 3 ವಿಕೆಟ್ಗೆ 120 ರನ್ ಕಲೆಹಾಕಿತ್ತು. ದಿನದ ಅಂತಿಮ ಅವಧಿಯಲ್ಲೂ ಪಾರಮ್ಯ ಸಾಧಿಸಿದ ಈ ಜೋಡಿ ರಾಜ್ಯ ತಂಡಕ್ಕೆ ಬೃಹತ್ ಮೊತ್ತದ ಆಸೆ ಚಿಗುರಿಸಿದೆ.
ದಿನದ ಮೂರನೇ ಅವಧಿಯವರೆಗೂ ಬೌಲಿಂಗ್ಗೆ ಪಿಚ್ ಹೆಚ್ಚು ಸಹಕಾರಿ ಆಗಿತ್ತು. ಹೀಗಾಗಿ ತಾಳ್ಮೆಯಿಂದ ಆಡುವುದು ಅನಿವಾರ್ಯವಾಯಿತು. ಚಹಾ ವಿರಾಮದ ಬಳಿಕ ಪಿಚ್ ಬ್ಯಾಟಿಂಗ್ಗೆ ಅನುಕೂಲವಾಗಿತ್ತು. ನಾವು ಎಷ್ಟು ಸ್ಕೋರ್ ಮಾಡಬೇಕೆಂಬ ಬಗ್ಗೆ ಯಾವುದೇ ಯೋಜನೆ ಹೊಂದಿಲ್ಲ. | ಆರ್.ಸಮರ್ಥ್
| ಅರವಿಂದ ಅಕ್ಲಾಪುರ