

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಟೀಮ್ ಇಂಡಿಯಾ ಬ್ಯಾಟರ್ ಶುಭಮಾನ್ ಗಿಲ್ (102 ರನ್, 171 ಎಸೆತ, 14 ಬೌಂಡರಿ, 3 ಸಿಕ್ಸರ್) ಶತಕದ ಪ್ರತಿರೋಧವನ್ನು ಸಂಟಿತ ಬೌಲಿಂಗ್ ದಾಳಿಯೊಂದಿಗೆ ಹಿಮ್ಮೆಟ್ಟಿಸಿದ ಕರ್ನಾಟಕ ತಂಡ ರಣಜಿ ಟ್ರೋಫಿ 2ನೇ ಚರಣದಲ್ಲಿ ಪ್ರವಾಸಿ ಪಂಜಾಬ್ ವಿರುದ್ಧ ಇನಿಂಗ್ಸ್ ಮತ್ತು 207 ರನ್ಗಳಿಂದ ಗೆಲುವು ದಾಖಲಿಸಿದೆ. ಇದರೊಂದಿಗೆ ಬೋನಸ್ ಸಹಿತ 7 ಅಂಕ ಕಲೆಹಾಕಿದ ಮಯಾಂಕ್ ಅಗರ್ವಾಲ್ ಪಡೆ ನಾಕೌಟ್ ಹಂತಕ್ಕೇರುವ ಆಸೆಗೆ ಹೆಚ್ಚಿನ ಬಲ ತುಂಬಿಸಿಕೊಂಡಿದೆ.
ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೂರನೇ ದಿನಗಳಲ್ಲಿ ಮುಕ್ತಾಯಗೊಂಡ ತನ್ನ 6ನೇ ಲೀಗ್ ಪಂದ್ಯದಲ್ಲಿ ಕರ್ನಾಟಕ ತಂಡ ಪಂಜಾಬ್ ತಂಡದ 2ನೇ ಇನಿಂಗ್ಸ್ಗೂ ಕಡಿವಾಣ ಹಾಕುವಲ್ಲಿ ಯಶಸ್ವಿಯಾಯಿತು. 2 ವಿಕೆಟ್ಗೆ 24 ರನ್ಗಳಿಂದ ಶನಿವಾರ 3ನೇ ದಿನದಾಟ ಆರಂಭಿಸಿದ ಪಂಜಾಬ್ ಚಹಾ ವಿರಾಮಕ್ಕೂ ಮೊದಲೇ 63.4 ಓವರ್ಗಳಲ್ಲಿ 213 ರನ್ಗಳಿಗೆ ಆಲೌಟ್ ಆಯಿತು. ಪಂಜಾಬ್ ನಾಯಕ ಶುಭಮಾನ್ ಗಿಲ್ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 14ನೇ ಶತಕ ಸಿಡಿಸುವ ಮೂಲಕ ಲಯಕ್ಕೆ ಮರಳಿದರೂ, ತಂಡವನ್ನು ಇನಿಂಗ್ಸ್ ಸೋಲಿನಿಂದ ಪಾರು ಮಾಡುವಲ್ಲಿ ಶಕ್ತರಾಗಲಿಲ್ಲ.
ಗಿಲ್ ಏಕಾಂಗಿ ಪ್ರತಿರೋಧ
ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ಬಿಡುವು ಪಡೆದಾಗ ದೇಶೀಯ ಕ್ರಿಕೆಟ್ನಲ್ಲಿ ಕಡ್ಡಾಯವಾಗಿ ಆಡಬೇಕೆಂಬ ಬಿಸಿಸಿಐ ಸೂಚನೆಯನ್ವಯ ಕಣಕ್ಕಿಳಿದ ಭಾರತ ಏಕದಿನ ತಂಡದ ಉಪನಾಯಕ ಶುಭಮಾನ್ ಗಿಲ್ ಮೊದಲ ಇನಿಂಗ್ಸ್ನಲ್ಲಿ ಕೇವಲ 4 ರನ್ ಗಳಿಸಿ ನಿರಾಸೆ ಮೂಡಿಸಿದ್ದರೆ, 2ನೇ ಸರದಿಯಲ್ಲಿ ಶತಕದಾಟದೊಂದಿಗೆ ಮಿಂಚಿದರು. ಆದರೆ ತಂಡದ ಇತರ ಬ್ಯಾಟರ್ಗಳಿಂದ ಸಮರ್ಥ ಬೆಂಬಲ ಲಭ್ಯವಾಗಲಿಲ್ಲ. ಬೆಳಗ್ಗೆ ಯುವ ವೇಗಿ ಯಶೋವರ್ಧನ್ ಪರಂತಾಪ್ (37ಕ್ಕೆ 3) ದಾಳಿಗೆ ಕುಸಿದ ಪಂಜಾಬ್, 84 ರನ್ಗಳಿಗೆ 6 ವಿಕೆಟ್ ಕಳೆದುಕೊಂಡು ಬೇಗನೆ ಶರಣಾಗುವ ಭೀತಿ ಎದುರಿಸಿತು. ಆಗ ಗಿಲ್ 7ನೇ ವಿಕೆಟ್ಗೆ ಮಯಾಂಕ್ ಮಾರ್ಕಂಡೆ (27) ಜತೆಗೂಡಿ 63 ರನ್ ಮತ್ತು 8ನೇ ವಿಕೆಟ್ಗೆ ಸುಖ್ದೀಪ್ ಬಾಜ್ವ (26) ಜತೆಗೂಡಿ 40 ರನ್ ಸೇರಿಸಿ ಪ್ರತಿರೋಧ ತೋರಿದರು. 159 ಎಸೆತಗಳಲ್ಲಿ ಶತಕ ಪೂರೈಸಿದ ಬಳಿಕ ಗಿಲ್ ಸ್ಪಿನ್ನರ್ ಶ್ರೇಯಸ್ ಗೋಪಾಲ್ (19ಕ್ಕೆ 3) ಎಸೆತದಲ್ಲಿ ಎಲ್ಬಿ ಬಲೆಗೆ ಬಿದ್ದರು. ನಂತರ ಕೊನೇ 2 ವಿಕೆಟ್ಗಳನ್ನೂ ಬೇಗನೆ ಕಬಳಿಸಿದ ಶ್ರೇಯಸ್ ಕರ್ನಾಟಕಕ್ಕೆ ಇನ್ನೊಂದು ದಿನ ಮತ್ತು ಒಂದು ಅವಧಿಯ ಆಟ ಬಾಕಿ ಇರುವಂತೆಯೇ ಗೆಲುವು ತಂದುಕೊಟ್ಟರು.
ಪಂಜಾಬ್: 55 ಮತ್ತು 213 (ಗಿಲ್ 102, ಜಸ್ಸಿಂದರ್ 13, ರಮಣ್ದೀಪ್ 0, ಮಾರ್ಕಂಡೆ 27, ಸುಖ್ದೀಪ್ 26*, ಗುರ್ನೂರ್ 12, ಪರಂತಾಪ್ 37ಕ್ಕೆ 3, ಶ್ರೇಯಸ್ 19ಕ್ಕೆ 3, ಪ್ರಸಿದ್ಧ ಕೃಷ್ಣ 57ಕ್ಕೆ 2, ಅಭಿಲಾಷ್ 58ಕ್ಕೆ 1, ವಿ. ಕೌಶಿಕ್ 37ಕ್ಕೆ 1), ಕರ್ನಾಟಕ: 475. ಪಂದ್ಯಶ್ರೇಷ್ಠ: ಆರ್. ಸ್ಮರಣ್.
*ಕರ್ನಾಟಕಕ್ಕೆ ಮುಂದಿನ ಪಂದ್ಯ
ಯಾವಾಗ: ಜ. 30-ಫೆ. 2
ಎದುರಾಳಿ: ಹರಿಯಾಣ
ಎಲ್ಲಿ: ಬೆಂಗಳೂರು
ಕರ್ನಾಟಕದ ನಾಕೌಟ್ ಲೆಕ್ಕಾಚಾರ
ಕರ್ನಾಟಕ ತಂಡ (6 ಪಂದ್ಯ,2 ಜಯ, 4 ಡ್ರಾ) ಗೆಲುವಿನೊಂದಿಗೆ ಒಟ್ಟಾರೆ 19 ಅಂಕ ಕಲೆಹಾಕಿ ಸಿ ಗುಂಪಿನ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ. ಹರಿಯಾಣ ತಂಡ (6 ಪಂದ್ಯ, 3 ಜಯ, 3 ಡ್ರಾ) 26 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಕೇರಳ ತಂಡ ಸದ್ಯ 18 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದ್ದರೂ, ಮಧ್ಯಪ್ರದೇಶ ವಿರುದ್ಧ ಪ್ರಸಕ್ತ ನಡೆಯುತ್ತಿರುವ ಪಂದ್ಯದಲ್ಲಿ ಗೆದ್ದರೆ ಅಥವಾ ಡ್ರಾ ಸಾಧಿಸಿದರೆ ಅಂಕಪಟ್ಟಿಯಲ್ಲಿ ಮತ್ತೆ 2ನೇ ಸ್ಥಾನಕ್ಕೇರಲಿದೆ. ಮಧ್ಯಪ್ರದೇಶದಿಂದ 363 ರನ್ ಸವಾಲು ಪಡೆದಿರುವ ಕೇರಳ, 3ನೇ ದಿನದಂತ್ಯಕ್ಕೆ 1 ವಿಕೆಟ್ಗೆ 28 ರನ್ ಗಳಿಸಿದೆ. ಕೊನೇ ದಿನ ಗೆಲುವಿಗೆ ಇನ್ನೂ 335 ರನ್ ಬೇಕಿದೆ. ಕೇರಳ ಸೋತರೆ, ಕರ್ನಾಟಕ ಕೊನೇ ಪಂದ್ಯದಲ್ಲಿ ಹರಿಯಾಣ ಎದುರು ಗೆದ್ದು ನಾಕೌಟ್ ಪ್ರವೇಶಿಸಬಹುದಾಗಿದೆ. ಆದರೆ ಕೇರಳ ಡ್ರಾ ಅಥವಾ ಗೆಲುವು ಕಂಡರೆ ಕರ್ನಾಟಕ ಕೊನೇ ಪಂದ್ಯದಲ್ಲಿ ಬೋನಸ್ ಸಹಿತ ಗೆಲ್ಲಬೇಕಾದ ಒತ್ತಡಕ್ಕೆ ಸಿಲುಕಿಲಿದೆ. ಕೇರಳ ಕೊನೇ ಪಂದ್ಯದಲ್ಲಿ ದುರ್ಬಲ ಬಿಹಾರ ವಿರುದ್ಧ ಆಡುವ ಅನುಕೂಲವನ್ನು ಹೊಂದಿದೆ. ಪ್ರತಿ ಗುಂಪಿನ ಅಗ್ರ 2 ತಂಡಗಳಷ್ಟೇ ನಾಕೌಟ್ ಹಂತಕ್ಕೇರಲಿವೆ.
ಕೊನೇ ಪಂದ್ಯಕ್ಕೆ ರಾಹುಲ್?
ಜನವರಿ 30ರಿಂದ ಬೆಂಗಳೂರಿನಲ್ಲೇ ನಡೆಯಲಿರುವ ರಾಜ್ಯ ತಂಡದ ಕೊನೇ ಲೀಗ್ ಪಂದ್ಯಕ್ಕೆ ಟೀಮ್ ಇಂಡಿಯಾ ಬ್ಯಾಟರ್ ಕೆಎಲ್ ರಾಹುಲ್ ಲಭ್ಯರಾಗುವ ನಿರೀಕ್ಷೆ ಇದೆ. ಕಡ್ಡಾಯವಾಗಿ ದೇಶೀಯ ಕ್ರಿಕೆಟ್ ಆಡಬೇಕೆಂಬ ಬಿಸಿಸಿಐ ಮಾರ್ಗಸೂಚಿಯ ನಡುವೆ ಮೊಣಕೈ ನೋವಿನಿಂದಾಗಿ ಪಂಜಾಬ್ ವಿರುದ್ಧದ ಪಂದ್ಯ ತಪ್ಪಿಸಿಕೊಂಡಿದ್ದ ರಾಹುಲ್, ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಮುನ್ನ ರಣಜಿಯಲ್ಲಿ ಆಡುವ ಸಾಧ್ಯತೆ ಇದೆ.