

ಇಂದೋರ್: ಪ್ರತಿಷ್ಠಿತ ದೇಶೀಯ ಕ್ರಿಕೆಟ್ ಟೂರ್ನಿ ರಣಜಿ ಟ್ರೋಫಿಯ ಮೊದಲ ಪಂದ್ಯದಲ್ಲಿ ಮಳೆ ಮತ್ತು ಮಂದಬೆಳಕಿನ ಅಡಚಣೆ ಎದುರಿಸಿದ ಕರ್ನಾಟಕ ಮತ್ತು ಮಧ್ಯಪ್ರದೇಶ ತಂಡಗಳು ನೀರಸ ಡ್ರಾಕ್ಕೆ ತೃಪ್ತಿಪಟ್ಟಿವೆ. ಉಭಯ ತಂಡಗಳ ಮೊದಲ ಇನಿಂಗ್ಸ್ ಕೂಡ ಪೂರ್ಣಗೊಳ್ಳದ ಕಾರಣ, ಹಿನ್ನಡೆ&ಮುನ್ನಡೆ ಲೆಕ್ಕಾಚಾರಗಳಿಲ್ಲದೆ ತಲಾ ಒಂದು ಅಂಕ ಹಂಚಿಕೊಂಡವು.
ಮೂರನೇ ದಿನದಂತ್ಯಕ್ಕೆ 8 ವಿಕೆಟ್ಗೆ 425 ರನ್ ಗಳಿಸಿದ್ದ ಆತಿಥೇಯ ಮಧ್ಯಪ್ರದೇಶ 4ನೇ ಹಾಗೂ ಅಂತಿಮ ದಿನವಾದ ಸೋಮವಾರ ಮತ್ತೆ ಬ್ಯಾಟಿಂಗ್ಗೆ ಇಳಿಯದೆ ಅದೇ ಮೊತ್ತಕ್ಕೆ ಡಿಕ್ಲೇರ್ ಮಾಡಿಕೊಂಡಿತು. ಕರ್ನಾಟಕ ತಂಡ ಆರಂಭಿಕ ನಿಕಿನ್ ಜೋಸ್ (99 ರನ್, 216 ಎಸೆತ, 8 ಬೌಂಡರಿ, 4 ಸಿಕ್ಸರ್) ಶತಕವಂಚಿತ ಬ್ಯಾಟಿಂಗ್ ಮತ್ತು ಶ್ರೇಯಸ್ ಗೋಪಾಲ್ (60*ರನ್, 110 ಎಸೆತ, 7 ಬೌಂಡರಿ, 1 ಸಿಕ್ಸರ್) ಹೋರಾಟದಿಂದ 75 ಓವರ್ಗಳಲ್ಲಿ 5 ವಿಕೆಟ್ಗೆ 206 ರನ್ ಗಳಿಸಿ ಡ್ರಾ ಸಾಧಿಸಿತು. ಮಂದಬೆಳಕಿನ ಅಡಚಣೆಯಿಂದ ದಿನದ ಕೊನೇ ಅವಧಿಯಲ್ಲಿ ಹೆಚ್ಚಿನ ಆಟ ನಷ್ಟಗೊಂಡಿತು. ಇದಕ್ಕೆ ಮುನ್ನ ಪಂದ್ಯದ 2ನೇ ದಿನದಾಟ ಮಳೆಯಿಂದಾಗಿ ಒಂದೂ ಎಸೆತವಿಲ್ಲದೆ ರದ್ದುಗೊಂಡಿತ್ತು. 4 ದಿನಗಳಲ್ಲಿ ಒಟ್ಟಾರೆ 360 ಓವರ್ಗಳ ಆಟ ನಡೆಯಬೇಕಿದ್ದಲ್ಲಿ, 215 ಓವರ್ಗಳ ಆಟವಷ್ಟೇ ನಡೆಯಿತು.
ಕೈಕೊಟ್ಟ ಪ್ರಮುಖರು
ಕರ್ನಾಟಕ ತಂಡದ ಪ್ರಮುಖ ಬ್ಯಾಟರ್ಗಳಾದ ನಾಯಕ ಮಯಾಂಕ್ ಅಗರ್ವಾಲ್ (0), ದೇವದತ್ ಪಡಿಕ್ಕಲ್ (16), ಮನೀಷ್ ಪಾಂಡೆ (9) ಜತೆಗೆ ಪದಾರ್ಪಣೆ ಪಂದ್ಯವಾಡಿದ ಆರ್. ಸ್ಮರಣ್ (17) ಬೇಗನೆ ಔಟಾಗಿ ನಿರಾಸೆ ಮೂಡಿಸಿದರು. ಆದರೆ ನಿಕಿನ್ ಜೋಸ್ ಮತ್ತು ಶ್ರೇಯಸ್ ಗೋಪಾಲ್ ಹೋರಾಟದಿಂದಾಗಿ ಕರ್ನಾಟಕ ಆಲೌಟ್ನಿಂದ ಪಾರಾಗಿ, ಇನಿಂಗ್ಸ್ ಹಿನ್ನಡೆಯೊಂದಿಗೆ ಎದುರಾಳಿಗೆ 3 ಅಂಕ ಬಿಟ್ಟುಕೊಡುವ ಅಪಾಯ ತಪ್ಪಿಸಿಕೊಂಡಿತು. ಜೋಸ್-ಶ್ರೇಯಸ್ 5ನೇ ವಿಕೆಟ್ಗೆ 127 ರನ್ ಜತೆಯಾಟವಾಡಿದರು. ಆದರೆ ಜೋಸ್ ಕೇವಲ 1 ರನ್ನಿಂದ ತನ್ನ 3ನೇ ಶತಕ ತಪ್ಪಿಸಿಕೊಂಡರು. ಕೇರಳದಿಂದ ರಾಜ್ಯ ತಂಡಕ್ಕೆ ಮರಳಿರುವ ಶ್ರೇಯಸ್ ಬೌಲಿಂಗ್ನಲ್ಲಿ ನಿರಾಸೆ ಮೂಡಿಸಿದ್ದರೂ, ಬ್ಯಾಟಿಂಗ್ನಲ್ಲಿ ಅಮೂಲ್ಯ ಕೊಡುಗೆ ನೀಡಿದರು.
ಮಧ್ಯಪ್ರದೇಶ: 8 ವಿಕೆಟ್ಗೆ 425 ಡಿಕ್ಲೇರ್; ಕರ್ನಾಟಕ: 5 ವಿಕೆಟ್ಗೆ 206 (ನಿಕಿನ್ ಜೋಸ್ 99, ಮಯಾಂಕ್ 0, ಪಡಿಕ್ಕಲ್ 16, ಸ್ಮರಣ್ 17, ಮನೀಷ್ ಪಾಂಡೆ 9, ಶ್ರೇಯಸ್ ಗೋಪಾಲ್ 60*, ಸುಜಯ್ 2*, ಕಾರ್ತಿಕೇಯ 68ಕ್ಕೆ 3, ಸಾರಾಂಶ್ ಜೈನ್ 103ಕ್ಕೆ 2).
*ಕರ್ನಾಟಕದ ಮುಂದಿನ ಪಂದ್ಯ
ಯಾವಾಗ: ಅ.18-21
ಎದುರಾಳಿ: ಕೇರಳ
ಸ್ಥಳ: ಬೆಂಗಳೂರು (ಆಲೂರು)
ಮುಂಬೈಗೆ ಬರೋಡ ಶಾಕ್
ಹಾಲಿ ಹಾಗೂ 42 ಬಾರಿಯ ಚಾಂಪಿಯನ್ ಮುಂಬೈ ತಂಡ ಸೋಲಿನ ಆರಂಭ ಕಂಡಿದೆ. ಇತ್ತೀಚೆಗೆ ಇರಾನಿ ಕಪ್ ಗೆದ್ದು ಬೀಗಿದ್ದ ಮುಂಬೈ, ವಡೋದರದಲ್ಲಿ ಆತಿಥೇಯ ಬರೋಡ ಎದುರು 84 ರನ್ಗಳಿಂದ ಶರಣಾಯಿತು. ಈ ಮೂಲಕ ಬರೋಡ 26 ವರ್ಷಗಳ ಬಳಿಕ ಮುಂಬೈ ವಿರುದ್ಧ ಗೆಲುವಿನ ಸಂಭ್ರಮ ಕಂಡಿತು. 262 ರನ್ ಸವಾಲು ಪಡೆದ ಮುಂಬೈ, ಭಾರ್ಗವ್ ಭಟ್ (55ಕ್ಕೆ 6) ದಾಳಿಗೆ ಕುಸಿದು 177 ರನ್ಗಳಿಗೆ ಸರ್ವಪತನ ಕಂಡಿತು. ಪ್ರಮುಖ ಬ್ಯಾಟರ್ಗಳಾದ ಪೃಥ್ವಿ ಷಾ (12), ನಾಯಕ ಅಜಿಂಕ್ಯ ರಹಾನೆ (12), ಶ್ರೇಯಸ್ ಅಯ್ಯರ್ (30) ವೈಫಲ್ಯ ಕಂಡರು.
ಮಿಂಚಿದ ಸಮರ್ಥ್, ಸುಚಿತ್, ಕಾರಿಯಪ್ಪ
ಹಾಲಿ ಋತುವಿನಲ್ಲಿ ಉತ್ತರಾಖಂಡಕ್ಕೆ ವಲಸೆ ಹೋಗಿ ನಾಯಕರೂ ಆಗಿರುವ ಕನ್ನಡಿಗ ಆರ್. ಸಮರ್ಥ್ (112) ಶತಕ ಸಿಡಿಸಿ ಮಿಂಚಿದ್ದಾರೆ. ಆದರೆ ಇದರ ನಡುವೆಯೂ ಉತ್ತರಾಖಂಡ ತಂಡ ಹಿಮಾಚಲ ಪ್ರದೇಶ ವಿರುದ್ಧ ಇನಿಂಗ್ಸ್ ಮತ್ತು 97 ರನ್ಗಳಿಂದ ಶರಣಾಯಿತು. ನಾಗಾಲ್ಯಾಂಡ್ಗೆ ವಲಸೆ ಹೋಗಿರುವ ಕನ್ನಡಿಗ ಜೆ. ಸುಚಿತ್ ಪಂದ್ಯದಲ್ಲಿ ಒಟ್ಟು 9 ವಿಕೆಟ್ (5+4) ಕಬಳಿಸುವ ಮೂಲಕ ಅರುಣಾಚಲ ಪ್ರದೇಶ ವಿರುದ್ಧದ ಪ್ಲೇಟ್ ಲೀಗ್ ಪಂದ್ಯದಲ್ಲಿ ಇನಿಂಗ್ಸ್ ಮತ್ತು 290 ರನ್ ಗೆಲುವಿನ ರೂವರಿ ಎನಿಸಿದರು. ಇದಕ್ಕೆ ಮುನ್ನ ನಾಗಾಲ್ಯಾಂಡ್ ಪರ ಆಡುತ್ತಿರುವ ಮತ್ತಿಬ್ಬರು ಕನ್ನಡಿಗರಾದ ಡಿ. ನಿಶ್ಚಲ್ (149) ಶತಕ ಮತ್ತು ಆರ್. ಜೊನಾಥನ್ (225) ದ್ವಿಶತಕ ಸಿಡಿಸಿ ಬೃಹತ್ ಮೊತ್ತಕ್ಕೆ ನೆರವಾಗಿದ್ದರು. ಮಿಜೋರಾಂಗೆ ವಲಸೆ ಹೋಗಿರುವ ಕನ್ನಡಿಗ ಕೆಸಿ ಕಾರಿಯಪ್ಪ ಒಟ್ಟು 12 (7+5) ವಿಕೆಟ್ ಕಬಳಿಸಿ ಮಿಂಚಿದರೂ, ಸಿಕ್ಕಿಂ ಎದುರು 137 ರನ್ಗಳಿಂದ ಸೋಲು ಎದುರಾಯಿತು. ಕೊಡಗಿನ ಕಾರಿಯಪ್ಪ 51 ಮತ್ತು 75 ರನ್ ಗಳಿಸಿ ಬ್ಯಾಟಿಂಗ್ನಲ್ಲೂ ಪ್ರತಿರೋಧ ತೋರಿದರೂ ಸೋಲು ತಪ್ಪಿಸಲಾಗಲಿಲ್ಲ.