ಇಂದಿನಿಂದ ರಣಜಿ ಟ್ರೋಫಿ ಫೈನಲ್​: 42ನೇ ಪ್ರಶಸ್ತಿ ಹಂಬಲದಲ್ಲಿ ಮುಂಬೈ; ವಿದರ್ಭಕ್ಕೆ 3ರ ಗುರಿ

ranji final web
Published on

ಮುಂಬೈ: ಪ್ರತಿಷ್ಠಿತ ದೇಶೀಯ ಕ್ರಿಕೆಟ್​ ಟೂರ್ನಿ ರಣಜಿ ಟ್ರೋಫಿಯ ಫೈನಲ್​ ಪಂದ್ಯ ಭಾನುವಾರದಿಂದ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದ್ದು, 42ನೇ ಬಾರಿ ಪ್ರಶಸ್ತಿ ಗೆಲುವಿನ ಹಂಬಲದಲ್ಲಿರುವ ಆತಿಥೇಯ ಮುಂಬೈ ತಂಡ ವಿದರ್ಭ ಎದುರು ಸೆಣಸಲಿದೆ. ಕನ್ನಡಿಗ ಕರುಣ್​ ನಾಯರ್​ ಒಳಗೊಂಡ ವಿದರ್ಭ ತಂಡ 3ನೇ ಬಾರಿ ಪ್ರಶಸ್ತಿ ಜಯಿಸುವ ನಿರೀಕ್ಷೆಯಲ್ಲಿದೆ.

ಅನುಭವಿ ಬ್ಯಾಟರ್​ ಅಜಿಂಕ್ಯ ರಹಾನೆ ಮುಂಬೈ ತಂಡದ ಸಾರಥ್ಯ ವಹಿಸಿಕೊಂಡಿದ್ದಾರೆ. ಬ್ಯಾಟಿಂಗ್​ನಲ್ಲಿ ರನ್​ಬರ ಎದುರಿಸಿರುವ ನಡುವೆ ರಹಾನೆ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದು, ಶ್ರೇಯಸ್​ ಅಯ್ಯರ್​, ಪೃಥ್ವಿ ಷಾ, ಶಾರ್ದೂಲ್​ ಠಾಕೂರ್​ರಂಥ ಟೀಮ್​ ಇಂಡಿಯಾ ಆಟಗಾರರ ಬಲವೂ ಇದೆ.

ಅಕ್ಷಯ್​ ವಾಡ್ಕರ್​ ನೇತೃತ್ವದ ವಿದರ್ಭ ಕೂಡ ಅನುಭವಿ ವೇಗಿ ಉಮೇಶ್​ ಯಾದವ್​ ಬಲ ಹೊಂದಿದ್ದು, ಆದಿತ್ಯ ಸರವಟೆ (40 ವಿಕೆಟ್​) ಮತ್ತು ಆದಿತ್ಯ ಠಾಕರೆ (33) ಸಮರ್ಥ ಸಾಥ್​ ನೀಡುತ್ತಿದ್ದಾರೆ. ಬ್ಯಾಟಿಂಗ್​ನಲ್ಲಿ ಧ್ರುವ ಶೋರೆ, ಅಥರ್ವ ತೈಡೆ ಮತ್ತು ಯಶ್​ ಠಾಕೂರ್​ ಉತ್ತಮ ಕೊಡುಗೆ ನೀಡುತ್ತಿದ್ದಾರೆ. ರಾಜ್ಯದಿಂದ ವಿದರ್ಭಕ್ಕೆ ವಲಸೆ ಹೋಗಿರುವ ಅನುಭವಿ ಬ್ಯಾಟರ್​ ಕರುಣ್​ ನಾಯರ್​ 616 ರನ್​ ಸಿಡಿಸಿ ಗಮನಸೆಳೆದಿದ್ದಾರೆ.

ರಣಜಿಯಲ್ಲಿ 53 ವರ್ಷಗಳ ಬಳಿಕ ಒಂದೇ ರಾಜ್ಯದ 2 ತಂಡಗಳು ಫೈನಲ್​ನಲ್ಲಿ ಮುಖಾಮುಖಿ ಆಗುತ್ತಿವೆ. ಕರ್ನಾಟಕ ಪರ 2 ಬಾರಿ (2013, 2015) ರಣಜಿ ಟ್ರೋಫಿ ಗೆದ್ದಿರುವ ಕರುಣ್​ ಇದೀಗ 3ನೇ ಪ್ರಶಸ್ತಿ ನಿರೀಕ್ಷೆಯಲ್ಲಿದ್ದಾರೆ.

ಆರಂಭ: ಬೆಳಗ್ಗೆ 9.30

ನೇರಪ್ರಸಾರ: ಜಿಯೋಸಿನಿಮಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net