Ranji Trophy: ಕರ್ನಾಟಕಕ್ಕೆ ಮತ್ತೆ ಒಂದಂಕ; ನಾಕೌಟ್​ ಹಾದಿ ಕಠಿಣ...

web kar
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಹತ್ತು ವರ್ಷಗಳ ಬಳಿಕ ಪ್ರಶಸ್ತಿ ಜಯಿಸುವ ಕನಸಿನೊಂದಿಗೆ ಅಭಿಯಾನ ಆರಂಭಿಸಿದ 8 ಬಾರಿಯ ಚಾಂಪಿಯನ್​ ಕರ್ನಾಟಕ ತಂಡ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್​ ಟೂರ್ನಿಯಲ್ಲಿ ಮಳೆ ಅಡಚಣೆಯಿಂದಾಗಿ ಸತತ 2ನೇ ಪಂದ್ಯದಲ್ಲಿ ಕೇವಲ ಒಂದು ಅಂಕಕ್ಕೆ ತೃಪ್ತಿಪಟ್ಟಿದೆ. ಇದರೊಂದಿಗೆ ನಾಕೌಟ್​ ಹಂತಕ್ಕೇರುವ ಹಾದಿ ದುರ್ಗಮಗೊಂಡಿದೆ.

ಬೆಂಗಳೂರು ಹೊರವಲಯದ ಆಲೂರಿನ ಕೆಎಸ್​ಸಿಎ ಮೈದಾನದಲ್ಲಿ ನಡೆದ ಪ್ರವಾಸಿ ಕೇರಳ ವಿರುದ್ಧದ 2ನೇ ಲೀಗ್​ ಪಂದ್ಯದ ಕೊನೇ ದಿನವೂ ಮಳೆ&ಒದ್ದೆ ಮೈದಾನದಿಂದಾಗಿ ಒಂದೂ ಎಸೆತ ಆಟ ನಡೆಯಲಿಲ್ಲ. ಇದರಿಂದ ಪಂದ್ಯ ನೀರಸ ಡ್ರಾನಲ್ಲಿ ಕೊನೆಗೊಂಡಿತು ಮತ್ತು ಕನಿಷ್ಠ ಮೊದಲ ಇನಿಂಗ್ಸ್​ ಕೂಡ ಪೂರ್ಣಗೊಳ್ಳದ ಕಾರಣ ಉಭಯ ತಂಡಗಳು ತಲಾ ಒಂದು ಅಂಕವನ್ನಷ್ಟೇ ಪಡೆದವು. ಇದರಿಂದಾಗಿ ಮಯಾಂಕ್​ ಅಗರ್ವಾಲ್​ ಬಳಗ ಆಡಿದ ಮೊದಲ 2 ಪಂದ್ಯಗಳಲ್ಲಿ 2 ಅಂಕಗಳನ್ನಷ್ಟೇ ಗಳಿಸಿ ಸಿ ಗುಂಪಿನ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕಿಳಿದಿದೆ. ಮಧ್ಯಪ್ರದೇಶ ವಿರುದ್ಧದ ಮೊದಲ ಪಂದ್ಯದಲ್ಲೂ ರಾಜ್ಯ ತಂಡ ಮಳೆಯಿಂದಾಗಿ ಆಟ ನಡೆಯದೆ ಕೇವಲ ಒಂದು ಅಂಕಕ್ಕೆ ತೃಪ್ತಿಪಟ್ಟಿತ್ತು.

ಇನ್ನು ಗೆಲುವಿನ ಒತ್ತಡ
ಕರ್ನಾಟಕ ತಂಡ ಟೂರ್ನಿಯಲ್ಲಿ ಇನ್ನೂ 5 ಲೀಗ್​ ಪಂದ್ಯಗಳನ್ನು ಆಡಲಿದ್ದು, ಅಂಕಪಟ್ಟಿಯ ಅಗ್ರ 2ರಲ್ಲಿ ಸ್ಥಾನ ಪಡೆಯುವ ಮೂಲಕ ನಾಕೌಟ್​ ಹಂತಕ್ಕೇರಲು ಗೆಲುವಿನ ಒತ್ತಡಕ್ಕೆ ಸಿಲುಕಿದೆ. ಕರ್ನಾಟಕ ಮುಂದಿನ ಪಂದ್ಯದಲ್ಲಿ ಅ.26ರಿಂದ 29ರವರೆಗೆ ಪಟನಾದಲ್ಲಿ ಬಿಹಾರ ವಿರುದ್ಧ ಆಡಲಿದೆ. ನಂತರದಲ್ಲಿ ಬಲಿಷ್ಠ ಬಂಗಾಳ (ಬೆಂಗಳೂರು, ನ. 6-9), ಉತ್ತರ ಪ್ರದೇಶ (ಲಖನೌ, ನ.13-16), ಪಂಜಾಬ್​ (ಜ. 23-26), ಹರಿಯಾಣ (ಜ. 30-ಫೆ.2) ತಂಡಗಳನ್ನು ಎದುರಿಸಲಿದೆ. ಸಿ ಗುಂಪಿನಲ್ಲಿ ಸದ್ಯ ಹರಿಯಾಣ 10 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಕೇರಳ (7), ಬಂಗಾಳ (4) ಮತ್ತು ಪಂಜಾಬ್​ (3) ನಂತರದ ಸ್ಥಾನದಲ್ಲಿವೆ.

ಅಭಿನವ್​, ಅನೀಶ್​ ಸೇರ್ಪಡೆ
ಬಿಹಾರ ವಿರುದ್ಧದ 3ನೇ ಲೀಗ್​ ಪಂದ್ಯಕ್ಕೆ ಅಭಿನವ್​ ಮನೋಹರ್​ ಮತ್ತು ಅನೀಶ್​ ಕೆವಿ ಕರ್ನಾಟಕ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಭಾರತ ಎ ತಂಡದೊಂದಿಗೆ ಆಸ್ಟ್ರೆಲಿಯಾ ಪ್ರವಾಸಕ್ಕೆ ತೆರಳುವ ಸಾಧ್ಯತೆ ಇರುವುದರಿಂದ ಎಡಗೈ ಬ್ಯಾಟರ್​ ದೇವದತ್​ ಪಡಿಕ್ಕಲ್​ ರಾಜ್ಯ ತಂಡದಿಂದ ಹೊರಬಿದ್ದಿದ್ದಾರೆ. ಉಳಿದಂತೆ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net