ಕರ್ನಾಟಕದ ನಾಕೌಟ್ ಕನಸು ಕಗ್ಗಂಟು: ಮಧ್ಯಪ್ರದೇಶ ವಿರುದ್ಧ ಇನಿಂಗ್ಸ್ ಹಿನ್ನಡೆಯ ಕಹಿ

Sp 13
Published on

ಶಿವಮೊಗ್ಗ: ಅಂತಿಮ ದಿನದಾಟದಲ್ಲಿ ಇನಿಂಗ್ಸ್ ಮುನ್ನಡೆಯ ಅವಕಾಶ ಕೈಚೆಲ್ಲಿದ ಆತಿಥೇಯ ಕರ್ನಾಟಕ ತಂಡ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯ 8ನೇ ಸುತ್ತಿನ ಪಂದ್ಯದಲ್ಲಿ ಪ್ರವಾಸಿ ಮಧ್ಯಪ್ರದೇಶ ಎದುರು ಇನಿಂಗ್ಸ್ ಹಿನ್ನಡೆ ಅನುಭವಿಸಿದ ಫಲವಾಗಿ ಕೇವಲ 1 ಅಂಕಕ್ಕೆ ತೃಪ್ತಿಪಟ್ಟುಕೊಂಡಿತು. ಶತಕಸಾಧಕ ಆದಿತ್ಯ ಶ್ರೀವಾಸ್ತವ (192 ರನ್, 339 ಎಸೆತ, 25 ಬೌಂಡರಿ, 2 ಸಿಕ್ಸರ್) ಹಾಗೂ ಕುಲದೀಪ್ ಸೇನ್ (23*ರನ್, 19 ಎಸೆತ, 1 ಬೌಂಡರಿ, 3 ಸಿಕ್ಸರ್) ಕಡೇ ವಿಕೆಟ್​ಗೆ 50 ರನ್ ಕಲೆಹಾಕಿ ಮಧ್ಯಪ್ರದೇಶಕ್ಕೆ 5 ರನ್​ಗಳ ಅಲ್ಪ ಮುನ್ನಡೆ ತಂದುಕೊಡುವ ಮೂಲಕ 8 ಬಾರಿಯ ಚಾಂಪಿಯನ್ ಕರ್ನಾಟಕ ತಂಡದ ಅತ್ಯಮೂಲ್ಯ ಮೂರಂಕ ಸಂಪಾದಿಸುವ ಆಸೆಗೆ ತಣ್ಣೀರೆರಚಿದರು. ಇದರೊಂದಿಗೆ ಎಂಟರ ಘಟ್ಟದ ಕನಸಿನಲ್ಲಿರುವ ಕರ್ನಾಟಕ ತಂಡ ಆಸೆ ಕಗ್ಗಂಟಾಗಿಯೇ ಉಳಿಯಿತು.

ನವುಲೆಯ ಕೆಎಸ್​ಸಿಎ ಮೈದಾನದಲ್ಲಿ ಶುಕ್ರವಾರ ಅಂತ್ಯಗೊಂಡ ಪಂದ್ಯದಲ್ಲಿ 4 ವಿಕೆಟ್​ಗೆ 311 ರನ್​ಗಳಿಂದ ದಿನದಾಟ ಆರಂಭಿಸಿದ ಮಧ್ಯಪ್ರದೇಶ ತಂಡ 431 ರನ್​ಗಳಿಗೆ ಸರ್ವಪತನ ಕಂಡಿತು. ಬಳಿಕ ಇನಿಂಗ್ಸ್ ಹಿನ್ನಡೆಯೊಂದಿಗೆ ಔಪಚಾರಿಕವಾಗಿ 2ನೇ ಇನಿಂಗ್ಸ್ ಆರಂಭಿಸಿದ ಕರ್ನಾಟಕ 1 ವಿಕೆಟ್​ಗೆ 62 ರನ್ ಕಲೆಹಾಕಿತು. ಮೊದಲ ಇನಿಂಗ್ಸ್​ನಲ್ಲಿ ಶತಕ ಗಳಿಸಿದ್ದ ಆರ್. ಸಮರ್ಥ್ 12 ರನ್​ಗೆ ಔಟಾದರು. ದೇವದತ್ ಪಡಿಕಲ್(31) ಹಾಗೂ ರೋಹನ್ ಕದಂ (16) ಅಜೇಯರಾಗುಳಿದರು. ದಿನದ ಕಡ್ಡಾಯ ಓವರ್​ಗಳ ಆಟ ಮುಕ್ತಾಯವಾದ ಬಳಿಕ ಉಭಯ ತಂಡಗಳ ನಾಯಕರು ಡ್ರಾಗೆ ಸಮ್ಮತಿ ಸೂಚಿಸಿದರು. ಇನಿಂಗ್ಸ್ ಮುನ್ನಡೆ ಆಧಾರದಲ್ಲಿ ಮಧ್ಯಪ್ರದೇಶ 3 ಅಂಕ ಪಡೆದರೆ, ಕರ್ನಾಟಕಕ್ಕೆ ಒಂದು ಅಂಕ ಮಾತ್ರ ಸಿಕ್ಕಿತು. ಕರ್ನಾಟಕ ಮೊದಲ ಇನಿಂಗ್ಸ್​ನಲ್ಲಿ 426 ರನ್ ಗಳಿಸಿತ್ತು.

ಹೋರಾಡಿದರೂ ದಕ್ಕದ ಮುನ್ನಡೆ

ಇನಿಂಗ್ಸ್ ಮುನ್ನಡೆಯ ಭರವಸೆ ಯೊಂದಿಗೆ ದಿನದಾಟ ಆರಂಭಿಸಿದ ಆತಿಥೇಯ ತಂಡ ದಿನದ ಆರಂಭದಲ್ಲೇ ಪ್ರವಾಸಿಗರಿಗೆ ಆಘಾತ ನೀಡುವ ಮೂಲಕ ಮೇಲುಗೈ ಸಾಧಿಸಿದರು. ಕ್ರಮವಾಗಿ 109 ಮತ್ತು 80 ರನ್​ಗಳಿಂದ ದಿನದಾಟ ಆರಂಭಿಸಿದ ಆದಿತ್ಯ ಶ್ರೀವಾಸ್ತವ ಹಾಗೂ ವೆಂಕಟೇಶ್ ಅಯ್ಯರ್ ಜೋಡಿಯನ್ನು ಆರಂಭದಲ್ಲೇ ವೇಗಿ ರೋನಿತ್ ಮೋರೆ ಬೇರ್ಪಡಿಸಲು ಯಶಸ್ವಿಯಾದರು. ಮೂರನೇ ದಿನದಾಟದ ಕೊನೇ ಎರಡು ಅವಧಿ ಕ್ರೀಸ್​ನಲ್ಲಿ ನಿಂತಿದ್ದ ಈ ಜೋಡಿ ಶುಕ್ರವಾರ ಮತ್ತೆ 12 ರನ್ ಪೇರಿಸಲಷ್ಟೇ ಶಕ್ತವಾಯಿತು. ಒಟ್ಟಾರೆ 5ನೇ ವಿಕೆಟ್​ಗೆ 200 ರನ್ ಜತೆಯಾಟವಾಡಿತು. ನಂತರ ಬಂದ ವಿಕೆಟ್ ಕೀಪರ್-ಬ್ಯಾಟ್ಸ್ ಮನ್ ಹಿಮಾಂಶು ಮಂತ್ರಿ (3) 6ನೇ ವಿಕೆಟ್​ಗೆ ಆದಿತ್ಯ ಜತೆಗೂಡಿ 29 ರನ್ ಪೇರಿಸಿ ನಿರ್ಗಮಿಸಿದರೆ, ರೋನಿತ್ ಮೋರೆ ಹಾಗೂ ಮಿಥುನ್ ಜೋಡಿಗೆ ದಾಳಿಗೆ ಮಧ್ಯ ಪ್ರದೇಶ ಕೇವಲ 5 ರನ್ ಅಂತರದಲ್ಲಿ 3 ವಿಕೆಟ್ ಕಳೆದುಕೊಂಡಿತು. ಇದರೊಂದಿಗೆ ಕರ್ನಾಟಕ ಪಾಳಯದಲ್ಲೂ ಇನಿಂಗ್ಸ್ ಮುನ್ನಡೆಯ ಭರವಸೆ ಹೆಚ್ಚಿತ್ತು.

ಅಡ್ಡಿಯಾದ ಆದಿತ್ಯ- ಕುಲದೀಪ್

ರಾಜ್ಯದ ವೇಗಿಗಳ ದಾಳಿಯಿಂದಾಗಿ 381 ರನ್​ಗಳಿಗೆ 9 ವಿಕೆಟ್ ಕಳೆದುಕೊಂಡ ಮಧ್ಯಪ್ರದೇಶ ಇನಿಂಗ್ಸ್ ಮುನ್ನಡೆ ಸಾಧಿಸಲು ಇನ್ನೂ 45 ರನ್ ಅವಶ್ಯಕತೆಯಿತ್ತು. ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಮತ್ತೊಂದೆಡೆ ಏಕಾಂಗಿ ನಿರ್ವಹಣೆ ತೋರಿದ ಆದಿತ್ಯ ಶ್ರೀವಾಸ್ತವ, ಕರ್ನಾಟಕದ ಪಾಲಿಗೆ ವಿಲನ್ ಆದರು. ಕೊನೇ ಕ್ರಮಾಂಕದ ಆಟಗಾರ ಕುಲದೀಪ್ ಸೇನ್​ರಿಂದ (23) ಅಗತ್ಯ ಸಾಥ್​ಗಿಟ್ಟಿಸಿಕೊಂಡ ಆದಿತ್ಯ ಶ್ರೀವಾಸ್ತವ 10ನೇ ವಿಕೆಟ್​ಗೆ ಬಿರುಸಿನ 50 ರನ್ ಪೇರಿಸಿ ಕರ್ನಾಟಕ ತಂಡಕ್ಕೆ ಆಘಾತ ನೀಡಿದರು. ದ್ವಿಶತಕದಂಚಿನಲ್ಲಿದ್ದಾಗ ಆದಿತ್ಯ, ಕೆ.ಗೌತಮ್ ಎಸೆತದಲ್ಲಿ ಪಡಿಕಲ್​ಗೆ ಕ್ಯಾಚ್ ನೀಡಿ ಔಟಾದರು. ಇದರೊಂದಿಗೆ ಆದಿತ್ಯ ಸುದೀರ್ಘ ಇನಿಂಗ್ಸ್ ಕೊನೆಗೊಂಡಿತು.

ತೂಗುಯ್ಯಾಲೆಯಲ್ಲಿ ಕರ್ನಾಟಕದ ಅವಕಾಶ

ಎಂಟರ ಘಟ್ಟಕ್ಕೇರಲು ಅಡ್ಡ ಕತ್ತರಿಯಲ್ಲಿ ಸಿಲುಕಿರುವ ಕರ್ನಾಟಕ ತಂಡ ಟೂರ್ನಿಯ 9ನೇ ಹಾಗೂ ಅಂತಿಮ ಸುತ್ತಿನ ಪಂದ್ಯದಲ್ಲಿ ಬರೋಡ ತಂಡವನ್ನು ಎದುರಿಸಲಿದೆ. ಫೆಬ್ರವರಿ 12ರಿಂದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯ ಕರ್ನಾಟಕದ ಪಾಲಿಗೆ ಮಾಡು ಇಲ್ಲವೆ ಮಡಿಯಾಗಿದೆ. ಜಯ ದಾಖಲಿಸಿದರೆ ನಿರಾಯಾಸವಾಗಿ ಕ್ವಾರ್ಟರ್​ಫೈನಲ್ ಪ್ರವೇಶಿಸಲಿರುವ ಕರ್ನಾಟಕ, ಇನಿಂಗ್ಸ್ ಮುನ್ನಡೆ ಅಥವಾ ಹಿನ್ನಡೆ ಗಳಿಸಿದರೂ ಇತರ ಪಂದ್ಯಗಳ ಫಲಿತಾಂಶದ ಮೇಲೆ ಭವಿಷ್ಯ ಅವಲಂಬಿಸಬೇಕಾಗುತ್ತದೆ.

ಮಿಥುನ್​ಗೆ ತಪ್ಪಿದ ಹ್ಯಾಟ್ರಿಕ್

ಪ್ರಸಕ್ತ ದೇಶೀಯ ಋತುವಿನ ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿ ಫೈನಲ್ ಹಾಗೂ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿ ಸೆಮಿಫೈನಲ್​ನಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ್ದ ಮಿಥುನ್ ರಣಜಿಯಲ್ಲೂ ಅಂಥ ಸಾಧನೆ ಮಾಡುವ ಅವಕಾಶದಿಂದ ವಂಚಿತರಾದರು. ಇನಿಂಗ್ಸ್​ನ 145ನೇ ಓವರ್​ನ 5ನೇ ಎಸೆತದಲ್ಲಿ ಕಾರ್ತಿಕೇಯರನ್ನು ಬೌಲ್ಡ್ ಮಾಡಿದ ಮಿಥುನ್ ಮರುಎಸೆತದಲ್ಲಿಯೇ ರವಿ ಯಾದವ್ ಅವರನ್ನು ಎಲ್​ಬಿ ಬಲೆಗೆ ಕೆಡವಿದರು. ಮುಂದಿನ ಓವರ್​ನ ಮೊದಲ ಎಸೆತದಲ್ಲಿ ವಿಕೆಟ್ ಕಬಳಿಸಿ ಹ್ಯಾಟ್ರಿಕ್ ಸಾಧನೆ ಮಾಡುವ ಅವಕಾಶ ತಪ್ಪಿಸಿಕೊಂಡರು.

ಕುತೂಹಲ ಕಾಯ್ದ ಎ-ಬಿ ಗುಂಪು

ಎಲೈಟ್ ಎ ಮತ್ತು ಬಿ ಗುಂಪಿನಿಂದ ಅಗ್ರ 5 ತಂಡಗಳು 8ರ ಘಟ್ಟಕ್ಕೇರಲಿವೆ. ಆದರೆ, ಟೂರ್ನಿಯ 8 ಸುತ್ತಿನ ಲೀಗ್ ಪಂದ್ಯಗಳು ಮುಕ್ತಾಯಗೊಂಡಿ ದ್ದರೂ, ಯಾವುದೇ ತಂಡಕ್ಕೆ ನಾಕೌಟ್ ಸ್ಥಾನ ಖಚಿತವಾಗಿಲ್ಲ. ಸದ್ಯ ಗುಜರಾತ್ (7 ಪಂದ್ಯ, 29 ಅಂಕ) ಅಗ್ರಸ್ಥಾನದಲ್ಲಿದ್ದು, ಕಡೇ ಲೀಗ್ ಪಂದ್ಯದಲ್ಲಿ ಆಂಧ್ರ ಎದುರು ಕನಿಷ್ಠ ಡ್ರಾ ಸಾಧಿಸಿದರೂ 8ರ ಘಟ್ಟಕ್ಕೇರಲಿದೆ. ಬಲಿಷ್ಠ ತಂಡಗಳಾದ ಮುಂಬೈ ಹಾಗೂ ತಮಿಳುನಾಡು ತಮ್ಮ ಅಂತಿಮ ಪಂದ್ಯಕ್ಕೆ ಮುನ್ನವೇ ಟೂರ್ನಿಯಿಂದ ಹೊರಬಿದ್ದಿವೆ.

| ಅರವಿಂದ ಅಕ್ಲಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net