ರಣಜಿ ಟ್ರೋಫಿ ಡಿಆರ್​ಎಸ್​ನಲ್ಲಿ ಪ್ರತಿ ಇನಿಂಗ್ಸ್​ಗೆ 4 ರೆಫರಲ್

LEAD
Published on

ಕೋಲ್ಕತ/ರಾಜ್​ಕೋಟ್: ಕೆಟ್ಟ ತೀರ್ಪಗಳನ್ನು ತಡೆಗಟ್ಟುವ ಉದ್ದೇಶದಿಂದ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ಸ್ ಮತ್ತು ಫೈನಲ್ ಪಂದ್ಯಗಳಲ್ಲಿ ಮೊದಲ ಬಾರಿಗೆ ತೀರ್ಪು ಪರಾಮರ್ಶೆ ಪದ್ಧತಿಯನ್ನು (ಡಿಆರ್​ಎಸ್) ಬಿಸಿಸಿಐ ಜಾರಿಗೊಳಿಸುತ್ತಿದೆ. ಇದರನ್ವಯ ಪ್ರತಿ ಇನಿಂಗ್ಸ್​ನಲ್ಲಿ ಉಭಯ ತಂಡಗಳಿಗೆ ತಲಾ 4 ರೆಫರಲ್ ಅವಕಾಶ ಸಿಗಲಿದೆ. ಅಂಪೈರ್ ತೀರ್ಪು ಬದಲಾಯಿಸಿದರೆ, ತೃತೀಯ ಅಂಪೈರ್​ಗೆ ಮೇಲ್ಮನವಿ ಸಲ್ಲಿಸಿದ್ದ ತಂಡದ ರೆಫರಲ್ ಉಳಿದುಕೊಳ್ಳಲಿದೆ. ಮೇಲ್ಮನವಿ ವಿಫಲವಾದರೆ ಆ ತಂಡಕ್ಕೆ ರೆಫರಲ್ ನಷ್ಟವಾಗಲಿದೆ.

ರಣಜಿ ಸೆಮಿಫೈನಲ್ ಪಂದ್ಯಗಳು ಶನಿವಾರದಿಂದ ಕರ್ನಾಟಕ- ಬಂಗಾಳ ನಡುವೆ ಕೋಲ್ಕತ ಮತ್ತು ಗುಜರಾತ್-ಸೌರಾಷ್ಟ್ರ ನಡುವೆ ರಾಜ್​ಕೋಟ್​ನಲ್ಲಿ ನಡೆಯಲಿವೆ. ಬಳಿಕ ಫೈನಲ್ ಪಂದ್ಯ ಮಾರ್ಚ್ 9ರಿಂದ 13ರವರೆಗೆ ನಡೆಯಲಿದ್ದು, ಸ್ಥಳ ಇನ್ನೂ ನಿಗದಿಯಾಗಿಲ್ಲ. ಈ ಮೂರೂ ಪಂದ್ಯಗಳು ಸ್ಟಾರ್ ಸ್ಪೋರ್ಟ್ಸ್ ಮತ್ತು ಹಾಟ್​ಸ್ಟಾರ್​ನಲ್ಲಿ ನೇರಪ್ರಸಾರ ಕಾಣಲಿವೆ. ಈ ಬಾರಿ ರಣಜಿ ಟ್ರೋಫಿ ನಾಕೌಟ್ ಹಂತದಿಂದಲೇ ಡಿಆರ್​ಎಸ್ ಬಳಕೆಯಾಗುತ್ತದೆ ಎನ್ನಲಾಗಿದ್ದರೂ, ಕ್ವಾರ್ಟರ್​ಫೈನಲ್ಸ್​ಗೆ ಡಿಆರ್​ಎಸ್ ಇಲ್ಲ ಎಂದು ಬಿಸಿಸಿಐ ಪ್ರಧಾನ ವ್ಯವಸ್ಥಾಪಕ (ಕ್ರಿಕೆಟ್) ಸಾಬಾ ಕರೀಂ ಬಳಿಕ ಸ್ಪಷ್ಟಪಡಿಸಿದ್ದರು. ರಣಜಿ ಜತೆಗೆ ದೇಶೀಯ ಕ್ರಿಕೆಟ್​ನ ಪ್ರಮುಖ ಸೀಮಿತ ಓವರ್ ಟೂರ್ನಿಗಳಾದ ವಿಜಯ್ ಹಜಾರೆ ಟ್ರೋಫಿ ಮತ್ತು ಸಯ್ಯದ್ ಮುಷ್ತಾಕ್ ಟ್ರೋಫಿಯ ನಾಕೌಟ್ ಪಂದ್ಯಗಳಲ್ಲೂ ಡಿಆರ್​ಎಸ್ ಬಳಕೆಯಾಗಬೇಕು ಎಂಬ ಬೇಡಿಕೆಗಳು ಬಂದಿವೆ.

ಕಳೆದ ವರ್ಷ ಕರ್ನಾಟಕಕ್ಕೆ ಹಿನ್ನಡೆಯಾಗಿತ್ತು

ರಣಜಿ ಟ್ರೋಫಿಯಲ್ಲಿ ಡಿಆರ್​ಎಸ್ ಇಲ್ಲದ ಕಾರಣ ಕಳೆದ ಆವೃತ್ತಿಯಲ್ಲಿ ಸೌರಾಷ್ಟ್ರ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡಕ್ಕೆ ಭಾರಿ ಹಿನ್ನಡೆಯಾಗಿತ್ತು. ಚೇತೇಶ್ವರ ಪೂಜಾರ 29 ರನ್ ಗಳಿಸಿದ್ದಾಗ ಕೀಪರ್​ಗೆ ಕ್ಯಾಚ್ ನೀಡಿದ್ದರೂ ಅಂಪೈರ್ ಔಟ್ ನೀಡಿರಲಿಲ್ಲ. ಇದರ ಲಾಭ ಪಡೆದ ಪೂಜಾರ ಶತಕ ಸಿಡಿಸಿ ಸೌರಾಷ್ಟ್ರಕ್ಕೆ 279 ರನ್ ಚೇಸಿಂಗ್​ಗೆ ನೆರವಾಗಿದ್ದರು. ಪಂದ್ಯದಲ್ಲಿ ಇನ್ನೂ ಕೆಲ ಕೆಟ್ಟ ತೀರ್ಪಗಳು ಕರ್ನಾಟಕಕ್ಕೆ ಮಾರಕವಾಗಿದ್ದವು. ಅದಕ್ಕೆ ಮುನ್ನ ಕ್ವಾರ್ಟರ್​ಫೈನಲ್​ನಲ್ಲಿ ರಾಜಸ್ಥಾನ ವಿರುದ್ಧ ಇಂಥದ್ದೇ ಕೆಟ್ಟ ತೀರ್ಪಗಳಿಂದ ಕರ್ನಾಟಕ ಲಾಭ ಪಡೆದಿತ್ತು ಎಂಬುದು ಬೇರೆ ಮಾತು.

ಎಲ್​ಬಿಡಬ್ಲ್ಯು ಸ್ಪಷ್ಟ ಪರಾಮರ್ಶೆ ಕಷ್ಟ

ರಣಜಿ ಡಿಆರ್​ಎಸ್​ನಲ್ಲಿ ಸ್ಲೋ-ಮೋಷನ್ ಕ್ಯಾಮರಾ ಮತ್ತು ಪಿಚ್ ಮ್ಯಾಪ್ ತಂತ್ರಜ್ಞಾನಗಳಷ್ಟೇ ಬಳಕೆಯಾಗಲಿವೆ. ಇದರಿಂದಾಗಿ ಎಲ್ಲ ರೀತಿಯ ಎಲ್​ಬಿಡಬ್ಲ್ಯು ತೀರ್ಪಗಳ ಪರಾಮರ್ಶೆ ಕಷ್ಟಕರವಾಗಿದೆ. ಎಲ್​ಬಿಡಬ್ಲ್ಯು ನೀಡಿದಾಗ ಚೆಂಡು ಬ್ಯಾಟ್​ಗೆ ರ್ಸ³ಸಿದ್ದರೆ, ಔಟ್​ಸೈಡ್ ಲೆಗ್-ಸ್ಟಂಪ್ ಪಿಚ್ ಆಗಿದ್ದರೆ ಅಥವಾ ಔಟ್​ಸೈಡ್ ಆಫ್-ಸ್ಟಂಪ್ ಇಂಪ್ಯಾಕ್ಟ್ ಆಗಿದ್ದರೆ ಮಾತ್ರ ತೀರ್ಪು ಬದಲಾಯಿಸಲು ಸಾಧ್ಯ. ಇನ್ನು ಕಾಟ್ ಬಿಹೈಂಡ್ ತೀರ್ಪಗಳಲ್ಲೂ ಈ ತಂತ್ರಜ್ಞಾನ ತೃತೀಯ ಅಂಪೈರ್​ಗೆ ನೆರವಾಗಲಿದೆ.

ಹ್ವಾಕ್ ಐ, ಅಲ್ಟ್ರಾ ಎಜ್ ಬಳಕೆ ಇಲ್ಲ

ರಣಜಿಯಲ್ಲಿ ಬಳಸುವ ಡಿಆರ್​ಎಸ್ ತಂತ್ರಜ್ಞಾನದ ಸೀಮಿತ ಬಳಕೆಯಿಂದ ಕೂಡಿರುತ್ತದೆ. ಅಂತಾರಾಷ್ಟ್ರೀಯ ಕ್ರಿಕೆಟ್​ನ ಡಿಆರ್​ಎಸ್​ನಲ್ಲಿ ಪ್ರಮುಖವಾಗಿ ಬಳಕೆಯಾಗುವ 2 ತಂತ್ರಜ್ಞಾನಗಳಾದ ಹ್ವಾಕ್ ಐ ಮತ್ತು ಅಲ್ಟ್ರಾ ಎಜ್ ಇಲ್ಲಿರುವುದಿಲ್ಲ. ಜತೆಗೆ ಹಾಟ್ ಸ್ಪಾಟ್, ಸ್ನಿಕೋ ಮೀಟರ್ ಅಥವಾ ಬಾಲ್ ಟ್ರಾ್ಯಕರ್ ಕೂಡ ಬಳಕೆಯಾಗುವುದಿಲ್ಲ.

(ಪಿಟಿಐ/ಏಜೆನ್ಸೀಸ್) 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net