ರಣಜಿ ಟ್ರೋಫಿ ರಣರಂಗ ಸಜ್ಜು; ಇಂದಿನಿಂದ ಪ್ರತಿಷ್ಠಿತ ದೇಶೀಯ ಕ್ರಿಕೆಟ್​ ಟೂರ್ನಿ

ಕರ್ನಾಟಕಕ್ಕೆ ಆಂಧ್ರ ಮೊದಲ ಸವಾಲು
ranji trophy
ರಣಜಿ ಟ್ರೋಫಿಸಂಗ್ರಹ ಚಿತ್ರ
Published on: 

ಬೆಂಗಳೂರು: ಪ್ರತಿಷ್ಠಿತ ದೇಶೀಯ ಪ್ರಥಮ ದರ್ಜೆ ಕ್ರಿಕೆಟ್​ ಟೂರ್ನಿ ರಣಜಿ ಟ್ರೋಫಿಯ 92ನೇ ಆವೃತ್ತಿಗೆ ವೇದಿಕೆ ಸಜ್ಜಾಗಿದೆ. ದುಲೀಪ್​ ಟ್ರೋಫಿ ಮೂಲಕ 2026&27ರ ದೇಶೀಯ ಕ್ರಿಕೆಟ್​ ಋತುವಿಗೆ ಆಗಸ್ಟ್​ನಲ್ಲೇ ಚಾಲನೆ ದೊರೆತಿದ್ದರೆ, ಭಾನುವಾರದಿಂದ ನಡೆಯಲಿರುವ ರಣಜಿ ಹಣಾಹಣಿಯೊಂದಿಗೆ ರೆಡ್​ಬಾಲ್​ ಕ್ರಿಕೆಟ್​ ಹಬ್ಬ ಇನ್ನಷ್ಟು ಮೆರುಗು ಪಡೆದುಕೊಳ್ಳಲಿದೆ. ದೇಶದ ಕಿರೀಟ ಭಾಗದ ಜಮ್ಮು-ಕಾಶ್ಮೀರ ತಂಡ ಹಾಲಿ ಚಾಂಪಿಯನ್​ ಆಗಿ ಕಣಕ್ಕಿಳಿಯುತ್ತಿದ್ದರೆ, 8 ಬಾರಿಯ ಚಾಂಪಿಯನ್​ ಹಾಗೂ ಹಾಲಿ ರನ್ನರ್​ಅಪ್​ ಕರ್ನಾಟಕ, 42 ಬಾರಿಯ ಚಾಂಪಿಯನ್​ ಮುಂಬೈ, ತಮಿಳುನಾಡು, ವಿದರ್ಭ, ಸೌರಾಷ್ಟ್ರ, ಮಧ್ಯಪ್ರದೇಶ ಮತ್ತು ಬಂಗಾಳ ಯುವ&ಅನುಭವಿ ಆಟಗಾರರ ಮಿಶ್ರಣದೊಂದಿಗೆ ಪ್ರಶಸ್ತಿ ಪೈಪೋಟಿ ನಡೆಸಲಿವೆ. ಭಾರತದ ಯುವ ಟೆಸ್ಟ್​ ತಂಡದಲ್ಲಿ ಸ್ಥಾನ ಸಂಪಾದಿಸುವ ಕನಸಿನಲ್ಲಿರುವವರಿಗೆ ಆಯ್ಕೆಗಾರರ ಗಮನಸೆಳೆಯಲು ಇದು ಉತ್ತಮ ಅವಕಾಶವೆನಿಸಿದೆ.

ಕಣದಲ್ಲಿದ್ದಾರೆ ಸ್ಟಾರ್ಸ್​

ಈ ಬಾರಿ ರಣಜಿ ಮೊದಲ ಸುತ್ತಿನಲ್ಲಿ ಹಲವು ಸ್ಟಾರ್​ ಆಟಗಾರರು ಕಣಕ್ಕಿಳಿಯಲಿದ್ದಾರೆ. ಕರ್ನಾಟಕ ಪರ ಕೆಎಲ್​ ರಾಹುಲ್​, ಸೌರಾಷ್ಟ್ರ ಪರ ರವೀಂದ್ರ ಜಡೇಜಾ, ಮುಂಬೈ ಪರ ಯಶಸ್ವಿ ಜೈಸ್ವಾಲ್​, ಸ್ರಾರ್ಜ್​ ಖಾನ್​, ಹೈದರಾಬಾದ್​ ಪರ ಮೊಹಮದ್​ ಸಿರಾಜ್​, ಬಂಗಾಳ ಪರ ಮೊಹಮದ್​ ಶಮಿ ಕಣಕ್ಕಿಳಿಯಲಿದ್ದಾರೆ.

ಪ್ರಮುಖ ಮಿಸ್ಸಿಂಗ್​

ರಣಜಿ ಮೊದಲ ಸುತ್ತಿನಲ್ಲಿ ಕೆಲ ಪ್ರಮುಖರು ಗೈರಾಗಲಿದ್ದಾರೆ. ಆಸೀಸ್​ ಎ ವಿರುದ್ಧ ಏಕದಿನ ಸರಣಿ ಆಡುತ್ತಿರುವ ಭಾರತ ಎ ತಂಡದಲ್ಲಿರುವ ಕಾರಣ ಋತುರಾಜ್​ ಗಾಯಕ್ವಾಡ್​, ದೇವದತ್​ ಪಡಿಕ್ಕಲ್​, ರಜತ್​ ಪಾಟೀದಾರ್​, ಸಾಯಿ ಸುದರ್ಶನ್​ ರಣಜಿಗೆ ಅಲಭ್ಯರಾಗಿದ್ದಾರೆ. ದಿಗ್ಗಜ ಸಚಿನ್​ ತೆಂಡುಲ್ಕರ್​ ಪುತ್ರ ಅರ್ಜುನ್​ ತೆಂಡುಲ್ಕರ್​ ಮೊದಲ ಪಂದ್ಯಕ್ಕೆ ಗೋವಾ ತಂಡದಲ್ಲಿ ಸ್ಥಾನ ಪಡೆಯದಿರುವುದು ಅಚ್ಚರಿ ತಂದಿದೆ. ಸೂರ್ಯಕುಮಾರ್​ ಯಾದವ್​, ಶಾರ್ದೂಲ್​ ಠಾಕೂರ್​, ವೆಂಕಟೇಶ್​ ಅಯ್ಯರ್​ ಮತ್ತಿತರರು ಫಿಟ್ನೆಸ್​ ಸಹಿತ ಇತರ ಕೆಲ ಕಾರಣಗಳಿಂದ ಗೈರಾಗುತ್ತಿದ್ದಾರೆ.

ಗುಂಪುಗಳು

ಎ: ಬರೋಡ, ಬಿಹಾರ, ಗೋವಾ, ಜಮ್ಮು&ಕಾಶ್ಮೀರ, ಮಧ್ಯಪ್ರದೇಶ, ಪುದುಚೇರಿ, ಉತ್ತರ ಪ್ರದೇಶ, ವಿದರ್ಭ.

ಬಿ: ಕರ್ನಾಟಕ, ಆಂಧ್ರ, ಅಸ್ಸಾಂ, ಛತ್ತೀಸ್​ಗಢ, ಹೈದರಾಬಾದ್​, ಪಂಜಾಬ್​, ಸೌರಾಷ್ಟ್ರ, ತ್ರಿಪುರ.

ಸಿ: ಬಂಗಾಳ, ದೆಹಲಿ, ಗುಜರಾತ್​, ಜಾರ್ಖಂಡ್​, ಕೇರಳ, ಮಹಾರಾಷ್ಟ್ರ, ಒಡಿಶಾ, ಸರ್ವೀಸಸ್​.

ಡಿ: ಚಂಡೀಗಢ, ಹರಿಯಾಣ, ಹಿಮಾಚಲ ಪ್ರದೇಶ, ಮುಂಬೈ, ರೈಲ್ವೇಸ್​, ರಾಜಸ್ಥಾನ, ತಮಿಳುನಾಡು, ಉತ್ತರಾಖಂಡ.

ಪ್ಲೇಟ್​: ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್​, ಸಿಕ್ಕಿಂ.

ಎರಡು ಹಂತಗಳಲ್ಲಿ ಟೂರ್ನಿ

ರಣಜಿ ಟ್ರೋಫಿ ಟೂರ್ನಿಯನ್ನು ಈ ಬಾರಿ ಕೂಡ 2 ಹಂತಗಳಲ್ಲಿ ವಿಂಗಡಿಸಲಾಗಿದೆ. ಮೊದಲ ಹಂತದಲ್ಲಿ ಎಲ್ಲ ತಂಡಗಳೂ ನವೆಂಬರ್​ 5ರವರೆಗೆ ತಲಾ 4 ಲೀಗ್​ ಪಂದ್ಯಗಳನ್ನು ಆಡಲಿವೆ. ನಂತರದಲ್ಲಿ ಎರಡು ವೈಟ್​ಬಾಲ್​ ಕ್ರಿಕೆಟ್​ ಟೂರ್ನಿಗಳು ಅಂದರೆ ಸಯ್ಯದ್​ ಮುಸ್ತಾಕ್​ ಅಲಿ ಟ್ರೋಫಿ ಟಿ20 (ನ. 14-ಡಿ.6) ಮತ್ತು ವಿಜಯ್​ ಹಜಾರೆ ಟ್ರೋಫಿ ಏಕದಿನ (ಡಿ.14-ಜ.8) ಟೂರ್ನಿಗಳು ನಡೆಯಲಿವೆ. ನಂತರ ಜ.17ರಿಂದ ರಣಜಿಯ ಕೊನೇ 3 ಲೀಗ್​ ಪಂದ್ಯಗಳು ನಡೆಯಲಿದ್ದು, ಫೆಬ್ರವರಿ 9ರಿಂದ ನಾಕೌಟ್​ ಪಂದ್ಯಗಳು ನಡೆಯಲಿವೆ. ಫೆಬ್ರವರಿ 27ರಿಂದ ಮಾರ್ಚ್​ 3ರವರೆಗೆ ನಡೆಯಲಿರುವ ಫೈನಲ್​ ಪಂದ್ಯದೊಂದಿಗೆ 2026-27ರ ದೇಶೀಯ ಕ್ರಿಕೆಟ್​ ಋತುವಿಗೆ ತೆರೆ ಬೀಳಲಿದೆ. ಟೂರ್ನಿಯಲ್ಲಿ ಒಟ್ಟು 135 ಪಂದ್ಯಗಳು ನಡೆಯಲಿವೆ.

ಟೂರ್ನಿ ಸ್ವರೂಪ

ಟೂರ್ನಿಯಲ್ಲಿ ಭಾಗವಹಿಸುವ ಒಟ್ಟು 38 ತಂಡಗಳ ಪೈಕಿ ಎಲೀಟ್​ ಹಂತದಲ್ಲಿರುವ 32 ತಂಡಗಳನ್ನು ತಲಾ 8ರಂತೆ 4 ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಉಳಿದ 6 ತಂಡಗಳು ಪ್ಲೇಟ್​ ಗುಂಪಿನಲ್ಲಿವೆ. ಎಲೀಟ್​ ಗುಂಪಿನ ಅಗ್ರ 2 ತಂಡಗಳು ನೇರವಾಗಿ ಕ್ವಾರ್ಟರ್​ಫೈನಲ್​ಗೇರಲಿವೆ. ಪ್ಲೇಟ್​ ಗುಂಪಿನ ಅಗ್ರ 2 ತಂಡಗಳು ಪ್ಲೇಟ್​ ಫೈನಲ್​ನಲ್ಲಿ ಆಡಲಿವೆ. ಇದರಲ್ಲಿ ಗೆದ್ದ ತಂಡ 2027-28ರ ಸಾಲಿನಲ್ಲಿ ಎಲೀಟ್​ ಗುಂಪಿಗೆ ಪ್ರವೇಶಿಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net