ಸೌರಾಷ್ಟ್ರಕ್ಕೆ ವಸವಾಡ ಶತಕದಾಸರೆ: ರಣಜಿ ಟ್ರೋಫಿ ಫೈನಲ್, ಎರಡನೇ ದಿನ ಬಂಗಾಳ ಬೌಲರ್​ಗಳ ಪರದಾಟ

Sp 1
Published on

ರಾಜ್​ಕೋಟ್: ಎಡಗೈ ಬ್ಯಾಟ್ಸ್​ಮನ್ ಅರ್ಪಿತ್ ವಸವಾಡ (106 ರನ್, 287 ಎಸೆತ, 11 ಬೌಂಡರಿ) ಬಾರಿಸಿದ ತಾಳ್ಮೆಯ ಶತಕ ಮತ್ತು ಟೆಸ್ಟ್ ತಜ್ಞ ಬ್ಯಾಟ್ಸ್ ಮನ್ ಚೇತೇಶ್ವರ ಪೂಜಾರ (66 ರನ್, 237 ಎಸೆತ, 5 ಬೌಂಡರಿ) ಅನಾರೋಗ್ಯದ ನಡುವೆಯೂ ನೀಡಿದ ಅಗತ್ಯ ಸಾಥ್​ನಿಂದ ಸೌರಾಷ್ಟ್ರ ತಂಡ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಪ್ರವಾಸಿ ಬಂಗಾಳ ವಿರುದ್ಧ ಉತ್ತಮ ಮೊತ್ತ ಪೇರಿಸಿ ಸುಸ್ಥಿತಿಯಲ್ಲಿದೆ. 2ನೇ ದಿನವೂ ಸೌರಾಷ್ಟ್ರ ತಂಡ ಆಮೆಗತಿಯ ಬ್ಯಾಟಿಂಗ್ ಪ್ರದರ್ಶಿಸಿದರೂ, ಬಂಗಾಳಕ್ಕೆ ಇನಿಂಗ್ಸ್ ಮುನ್ನಡೆ ಸಾಧಿಸಲು ಸವಾಲೆನಿಸುವಂಥ ಮೊತ್ತ ಕೂಡಿಹಾಕುವಲ್ಲಿ ಸಫಲವಾಗಿದೆ.

ಎಸ್​ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮಂಗಳವಾರ 5 ವಿಕೆಟ್​ಗೆ 206 ರನ್​ಗಳಿಂದ 2ನೇ ದಿನದಾಟ ಮುಂದುವರಿಸಿದ ಸೌರಾಷ್ಟ್ರ, ದಿನದಂತ್ಯಕ್ಕೆ 8 ವಿಕೆಟ್​ಗೆ 384 ರನ್ ಪೇರಿಸಿದೆ. ದಿನದ ಮೊದಲೆರಡೂ ಅವಧಿಯ ಆಟದಲ್ಲಿ ಒಂದೂ ವಿಕೆಟ್ ಕಬಳಿಸಲು ಸಾಧ್ಯವಾಗದೆ ಬಂಗಾಳ ಬೌಲರ್​ಗಳು ಪರದಾಡಿದರು. 2ನೇ ದಿನದಾಟದಲ್ಲಿ ಸೌರಾಷ್ಟ್ರ 79.1 ಓವರ್ ಎದುರಿಸಿ 3 ವಿಕೆಟ್ ನಷ್ಟದಲ್ಲಿ 2.25ರ ಸರಾಸರಿಯಲ್ಲಿ 178 ರನ್ ಕೂಡಿಹಾಕಿತು. ಬಂಗಾಳ ವೇಗಿಗಳನ್ನು ಹೆಚ್ಚು ಬಳಸಿದ್ದು ಮತ್ತು ಡಿಆರ್​ಎಸ್​ನಲ್ಲಿ ಸಮಯ ವ್ಯಯವಾದ ಕಾರಣ 2ನೇ ದಿನವೂ 90 ಓವರ್ ಆಟ ಪೂರ್ಣಗೊಳ್ಳಲಿಲ್ಲ.

ಬಂಗಾಳವನ್ನು ಬೆಂಡೆತ್ತಿದ ವಸವಾಡ-ಪೂಜಾರ: ಅನಾರೋಗ್ಯದಿಂದಾಗಿ ಮೊದಲ ದಿನ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದು ಕೇವಲ 5 ರನ್ ಗಳಿಸಿ ನಿವೃತ್ತಿ ಪಡೆದಿದ್ದ ಪೂಜಾರ, ಸೋಮವಾರ ಬೆಳಗ್ಗೆ ವಸವಾಡ ಜತೆ ಮರಳಿ ಕಣಕ್ಕಿಳಿದರು. 29 ರನ್ ಗಳಿಸಿ ಸಮರ್ಥ ಜತೆಗಾರರ ನಿರೀಕ್ಷೆಯಲ್ಲಿದ್ದ ವಸವಾಡಗೆ ಪೂಜಾರ ಬೆಂಬಲವಾಗಿ ನಿಂತರು. ವಸವಾಡ ಮತ್ತು ಪೂಜಾರ 6ನೇ ವಿಕೆಟ್​ಗೆ 142 ರನ್ ಜತೆಯಾಡುವ ಮೂಲಕ ಸೌರಾಷ್ಟ್ರ ಇನಿಂಗ್ಸ್​ಗೆ ಚೇತರಿಕೆ ಒದಗಿಸಿದರು. ಸುಮಾರು 5 ಗಂಟೆಗಳ ಕಾಲ ಕ್ರೀಸ್​ನಲ್ಲಿದ್ದ ವಸವಾಡ-ಪೂಜಾರ ಜೋಡಿ 63.1 ಓವರ್​ಗಳ ಕಾಲ ಬಂಗಾಳವನ್ನು ಕಾಡಿತು. ಕೆಟ್ಟ ಎಸೆತಗಳನ್ನಷ್ಟೇ ದಂಡಿಸುತ್ತಿದ್ದ ಈ ಜೋಡಿ ಅತಿಯಾದ ರಕ್ಷಣಾತ್ಮಕ ಆಟದ ಮೂಲಕ ಪ್ರೇಕ್ಷಕರನ್ನು ಬೋರ್ ಹಡೆಸಿದರೂ, ಸೌರಾಷ್ಟ್ರವನ್ನು ಉತ್ತಮ ಸ್ಥಿತಿಗೆ ಕೊಂಡೊಯ್ಯುವಲ್ಲಿ ಯಶಸ್ವಿಯಾಯಿತು. ಈ ಜೋಡಿ ದಿನದ 15ನೇ ಓವರ್​ನಲ್ಲಿ ಮೊದಲ ಬೌಂಡರಿ ಬಾರಿಸಿತು. ಚಹಾ ವಿರಾಮದ ಬಳಿಕ ಕೊನೆಗೂ ಬಂಗಾಳ ತಂಡ ದಿನದ ಮೊದಲ ಯಶ ಕಾಣುವಲ್ಲಿ ಸಫಲವಾಯಿತು. ಸ್ಪಿನ್ನರ್ ಶಾಬಾಜ್ ಅಹ್ಮದ್ ಎಸೆತದಲ್ಲಿ ಶತಕವೀರ ವಸವಾಡರನ್ನು ಸ್ಟಂಪ್ ಔಟ್ ಮಾಡುವ ಮೂಲಕ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹ ಈ ಜೋಡಿಯನ್ನು ಬೇರ್ಪಡಿಸಿದರು.

ಅಂಪೈರ್ ಬದಲಾವಣೆ

ಮೊದಲ ದಿನದಾಟದ ವೇಳೆ ಚೆಂಡೇಟು ತಿಂದು ಗಾಯಗೊಂಡಿದ್ದ ಅಂಪೈರ್ ಸಿ. ಶಂಶುದ್ದೀನ್ ರಣಜಿ ಟ್ರೋಫಿ ಫೈನಲ್ ಪಂದ್ಯದಿಂದ ಹೊರಬಿದ್ದಿದ್ದಾರೆ. ಬಂಗಾಳ ಫೀಲ್ಡರ್ ಎಸೆದ ಚೆಂಡು ತಪ್ಪಿ ಶಂಶುದ್ದೀನ್ ಹೊಟ್ಟೆಗೆ ಬಡಿದಿತ್ತು. ರಾತ್ರಿ ವೇಳೆಗೆ ನೋವು ಹೆಚ್ಚಾದ ಕಾರಣ ಶಂಶುದ್ದೀನ್​ಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಮಂಗಳವಾರ ಬೆಳಗ್ಗಿನ ಅವಧಿಯಲ್ಲಿ ಶಂಶುದ್ದೀನ್​ರ ಜತೆಗಾರ ಅಂಪೈರ್ ಅನಂತ ಪದ್ಮನಾಭನ್ ಅವರೇ ಪ್ರಧಾನ ಅಂಪೈರ್ ಆಗಿ ಕಾರ್ಯನಿರ್ವಹಿಸಿದರೆ, ಸ್ಥಳೀಯ ಅಂಪೈರ್ ಪೀಯುಷ್ ಖಾಕರ್ ಲೆಗ್ ಅಂಪೈರ್ ಆಗಿದ್ದರು. ಭೋಜನ ವಿರಾಮದ ಬಳಿಕ, ತೃತೀಯ ಅಂಪೈರ್ ಎಸ್. ರವಿ, ಪದ್ಮನಾಭನ್ ಜತೆಗೆ ಮೈದಾನಕ್ಕಿಳಿದರೆ, ಶಂಶುದ್ದೀನ್ ತೃತೀಯ ಅಂಪೈರ್ ಆಗಿ ಕಾರ್ಯನಿರ್ವಹಿಸಿದರು. 3ನೇ ದಿನದಾಟದಲ್ಲಿ ಶಂಶುದ್ದೀನ್​ಗೆ ಬದಲಿಯಾಗಿ ಯಶ್ವಂತ್ ಬರ್ಡೆ ಅಂಪೈರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಶಂಶುದ್ದೀನ್​ಗೆ ವೈದ್ಯರು ಒಂದು ವಾರ ವಿಶ್ರಾಂತಿ ಸೂಚಿಸಿದ್ದಾರೆ.

ಪೂಜಾರ ಆಮೆಗತಿ ಆಟ

ಅನಾರೋಗ್ಯದ ನಡುವೆ ಆಡಿದ ಪೂಜಾರ ಏಕಾಗ್ರತೆ ಕಳೆದುಕೊಳ್ಳದೆ ಆಮೆಗತಿ ಆಟದ ಮೂಲಕ ಬಂಗಾಳವನ್ನು ಸತಾಯಿಸಿದರು. 27.84ರ ಸ್ಟ್ರೈಕ್​ರೇಟ್​ನಲ್ಲಿ ರನ್ ಗಳಿಸಿದ ಪೂಜಾರ, ಅರ್ಧಶತಕ ಪೂರೈಸಲು 191 ಎಸೆತ ಬಳಸಿದರು. ಪೂಜಾರ ವಿರುದ್ಧ ಎಲ್​ಬಿಡಬ್ಲ್ಯುಗಾಗಿ ಬಂಗಾಳ ತಂಡ 2 ಬಾರಿ ಡಿಆರ್​ಎಸ್ ಮೊರೆ ಹೋದರೂ ಪ್ರಯೋಜನವಾಗಲಿಲ್ಲ. ವಸವಾಡ ನಿರ್ಗಮನದ ಕೆಲ ಓವರ್​ಗಳ ಬಳಿಕ ಪೂಜಾರ, ವೇಗಿ ಮುಕೇಶ್ ಕುಮಾರ್​ಗೆ ವಿಕೆಟ್ ಒಪ್ಪಿಸಿದರು. ಈ ಬಾರಿ ಎಲ್​ಬಿಡಬ್ಲ್ಯು ತೀರ್ಪಿನ ವಿರುದ್ಧ ಪೂಜಾರ ಡಿಆರ್​ಎಸ್ ಮೊರೆ ಹೋದರೂ ಪಾರಾಗಲಿಲ್ಲ. ಸೆಮೀಸ್​ನಲ್ಲಿ ಕರ್ನಾಟಕವನ್ನು ಕಾಡಿದ್ದ ಮುಕೇಶ್ ಪಂದ್ಯದಲ್ಲಿ ತಾನೆಸೆದ 34ನೇ ಓವರ್​ನಲ್ಲಿ ಮೊದಲ ಯಶ ಕಂಡರು. ಮರು ಓವರ್​ನಲ್ಲಿ ಪ್ರೇರಕ್ ಮಂಕಡ್ (0) ವಿಕೆಟ್ ಕಬಳಿಸಿದರು. ಸೌರಾಷ್ಟ್ರವನ್ನು 2ನೇ ದಿನವೇ ಸರ್ವಪತನಗೊಳಿಸುವ ಪ್ರಯತ್ನಕ್ಕೆ ಚಿರಾಗ್ ಜಾನಿ (13*) ಮತ್ತು ಧಮೇಂದ್ರಸಿನ್ಹಾ ಜಡೇಜಾ (13*) ಅಡ್ಡಿಯಾದರು. ಇವರಿಬ್ಬರು ಮುರಿಯದ 9ನೇ ವಿಕೆಟ್​ಗೆ 20 ರನ್ ಸೇರಿಸಿ 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಒಂದೇ ಕಾಲನಿಯ ಜೋಡಿ!

ಚೇತೇಶ್ವರ ಪೂಜಾರ ಮತ್ತು ಅರ್ಪಿತ್ ವಡವಾಸ ಬಾಲ್ಯದಿಂದ ಜತೆಯಾಗಿ ಆಡುತ್ತ ಬೆಳೆದವರು. ರಾಜ್​ಕೋಟ್​ನ ರೈಲ್ವೇಸ್ ಕಾಲನಿಯಲ್ಲಿ ಜತೆಯಾಗಿ ಬೆಳೆದ ಇವರಿಬ್ಬರಿಗೂ ಪೂಜಾರ ತಂದೆ ಅರವಿಂದ್ ಪೂಜಾರ ಅವರೇ ಬಾಲ್ಯದ ಕೋಚ್. ಹೀಗಾಗಿ ಉತ್ತಮ ಹೊಂದಾಣಿಕೆಯ ಆಟವಾಡಿದ ಇವರಿಬ್ಬರು, ಗುರು ಕಲಿಸಿಕೊಟ್ಟ ಕ್ರಿಕೆಟ್ ಪಾಠವನ್ನು ಇಲ್ಲಿ ಸಮರ್ಥವಾಗಿ ವಿನಿಯೋಗಿಸಿದರು. 8 ವರ್ಷಗಳಲ್ಲಿ 4ನೇ ಬಾರಿ ರಣಜಿ ಫೈನಲ್​ಗೇರಿರುವ ಸೌರಾಷ್ಟ್ರ, ಈ ಬಾರಿಯಾದರೂ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net