

ಶಿವಮೊಗ್ಗ: ಕ್ಯಾಚ್ಗಳು ಮ್ಯಾಚ್ ಗೆಲ್ಲಿಸುತ್ತವೆ ಎಂಬ ಕ್ರಿಕೆಟ್ ನಾಣ್ಣುಡಿಯನ್ನು ಗುರುವಾರ ಕರ್ನಾಟಕ ತಂಡ ಅಕ್ಷರಶಃ ಮರೆತಂತಿತ್ತು. ಎದುರಾಳಿ ತಂಡಕ್ಕೆ ಜೀವದಾನಗಳನ್ನೇ ಧಾರೆ ಎರೆಯುವ ಮೂಲಕ ಗೆಲುವು ಕೈಚೆಲ್ಲಿರುವ ಆತಿಥೇಯ ತಂಡ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಪ್ರವಾಸಿ ಮಧ್ಯಪ್ರದೇಶ ಎದುರು ಇನಿಂಗ್ಸ್ ಮುನ್ನಡೆಗಾಗಿ ಪರದಾಡುತ್ತಿದೆ. ಎ ಮತ್ತು ಬಿ ಗುಂಪಿನಲ್ಲಿ ಎಂಟರ ಘಟ್ಟಕ್ಕೆ ಪ್ರವೇಶಿಸಲು 8 ಬಾರಿಯ ಚಾಂಪಿಯನ್ ಕರ್ನಾಟಕ ತಂಡಕ್ಕೆ ಕನಿಷ್ಠ ಇನಿಂಗ್ಸ್ ಮುನ್ನಡೆ ಅನಿವಾರ್ಯವಾಗಿದೆ.
ನವುಲೆಯ ಕೆಎಸ್ಸಿಎ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 2 ವಿಕೆಟ್ಗೆ 60 ರನ್ಗಳಿಂದ 3ನೇ ದಿನವಾದ ಗುರುವಾರ ಆಟ ಆರಂಭಿಸಿದ ಮಧ್ಯ ಪ್ರದೇಶ ತಂಡ, ಆದಿತ್ಯ ಶ್ರೀವಾಸ್ತವ (109* ರನ್, 223 ಎಸೆತ, 15 ಬೌಂಡರಿ) ಹಾಗೂ ವೆಂಕಟೇಶ್ ಅಯ್ಯರ್ (80* ರನ್, 200 ಎಸೆತ, 10 ಬೌಂಡರಿ, 1 ಸಿಕ್ಸರ್) ಜೋಡಿ ಮುರಿಯದ 5ನೇ ವಿಕೆಟ್ಗೆ ಸೇರಿಸಿದ 188 ರನ್ ಜತೆಯಾಟದ ಫಲವಾಗಿ ದಿನದಂತ್ಯಕ್ಕೆ 4 ವಿಕೆಟ್ಗೆ 311 ರನ್ ಗಳಿಸಿದ್ದು, ಇನಿಂಗ್ಸ್ ಮುನ್ನಡೆ ಸಾಧಿಸಲು ಇನ್ನೂ 115 ರನ್ ಅವಶ್ಯಕತೆ ಇದೆ. 3ನೇ ದಿನದಾಟದಲ್ಲಿ ಬರೀ 2 ವಿಕೆಟ್ ಉರುಳಿಸಲಷ್ಟೇ ಶಕ್ತವಾದ ಕರುಣ್ ನಾಯರ್ ಪಡೆ, ಅಂತಿಮ ದಿನದಾಟದಲ್ಲಿ ಸುಧಾರಿತ ನಿರ್ವಹಣೆ ನೀಡಿದರಷ್ಟೇ ಇನಿಂಗ್ಸ್ ಮುನ್ನಡೆಯ ಅವಕಾಶ ಹೊಂದಿದೆ. ಕರ್ನಾಟಕ ಮೊದಲ ಇನಿಂಗ್ಸ್ನಲ್ಲಿ 426 ರನ್ಗಳಿಸಿದೆ.
ಮಧ್ಯಪ್ರದೇಶ ಜಿಗುಟು ಬ್ಯಾಟಿಂಗ್: ಪ್ರವಾಸಿ ತಂಡ ದಿನದ ಆರಂಭದಿಂದಲೇ ಜಿಗುಟು ಬ್ಯಾಟಿಂಗ್ಗೆ ಮುಂದಾಯಿತು. ಕ್ರಮವಾಗಿ 17 ಮತ್ತು 6 ರನ್ಗಳಿಂದ ಇನಿಂಗ್ಸ್ ಆರಂಭಿಸಿದ ಯಶ್ ದುಬೆ ಹಾಗೂ ನಾಯಕ ಶುಭಂ ಶರ್ಮ ಜೋಡಿ ಕರ್ನಾಟಕ ದಾಳಿಯನ್ನು ಸಮರ್ಥವಾಗಿ ಎದುರಿಸಿತು. ಈ ಜೋಡಿ 50ನೇ ಓವರ್ನಲ್ಲಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿತು. 3ನೇ ವಿಕೆಟ್ಗೆ 63 ರನ್ ಜತೆಯಾಟವಾಡಿದ ಈ ಜೋಡಿಗೆ ಶ್ರೇಯಸ್ ಗೋಪಾಲ್ ಬ್ರೇಕ್ ಹಾಕಿದರು. ಯಶ್ ದುಬೆ ಅವರನ್ನು ಎಲ್ಬಿ ಬಲೆಗೆ ಬೀಳಿಸಿದರು. ಇದಾದ ಕೆಲಹೊತ್ತಿನಲ್ಲೇ ನಾಯಕ ಶುಭಂ ಶರ್ಮ ಕೂಡ ಕೆ.ಗೌತಮ್ೆ ವಿಕೆಟ್ ನೀಡಿದರು. ಇದರಿಂದ ಮಧ್ಯ ಪ್ರದೇಶ ತಂಡ 123 ರನ್ಗಳಿಗೆ 4 ವಿಕೆಟ್ ಕಳೆದುಕೊಂಡಿತು. ಭೋಜನ ವಿರಾಮಕ್ಕೂ ಮುನ್ನ ಇವರಿಬ್ಬರೂ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಇದರೊಂದಿಗೆ ಕರ್ನಾಟಕ ತಂಡದ ಪಾಳಯದಲ್ಲಿ ಮಧ್ಯಪ್ರದೇಶ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕುವ ಆಸೆ ಚಿಗುರಿತು.
ಇನಿಂಗ್ಸ್ ಮುನ್ನಡೆ ಅನಿವಾರ್ಯ
ಕರ್ನಾಟಕ ತಂಡ ಮಧ್ಯ ಪ್ರದೇಶ ಎದುರು ಇನಿಂಗ್ಸ್ ಮುನ್ನಡೆ ಗಳಿಸಿದರಷ್ಟೇ ಎಂಟರ ಘಟ್ಟದ ಖಾತ್ರಿಯೊಂದಿಗೆ ಅಂತಿಮ ಲೀಗ್ ಪಂದ್ಯದಲ್ಲಿ ಒತ್ತಡ ರಹಿತವಾಗಿ ಕಣಕ್ಕಿಳಿಯಬಹುದು. ಇದುವರೆಗೆ 6 ಪಂದ್ಯಗಳಿಂದ 24 ಅಂಕ ಕಲೆಹಾಕಿರುವ ಕರ್ನಾಟಕ ಎ ಮತ್ತು ಬಿ ಗುಂಪಿನಲ್ಲಿ ಸದ್ಯ 5ನೇ ಸ್ಥಾನದಲ್ಲಿದ್ದು, ಇನಿಂಗ್ಸ್ ಮುನ್ನಡೆಯೊಂದಿಗೆ 3 ಅಂಕಗಳಿಸಿದರೂ ಅಂಕಪಟ್ಟಿಯಲ್ಲೇ ಮೇಲೇರುವ ಅವಕಾಶ ಹೊಂದಿದೆ.
ಕಾಡಿದ ಆದಿತ್ಯ ಶ್ರೀವಾಸ್ತವ-ವೆಂಕಟೇಶ್ ಅಯ್ಯರ್
ಅವಕಾಶ ಕೈಚೆಲ್ಲಿದ ಕರ್ನಾಟಕ
ಪದೇಪದೆ ಅವಕಾಶ ಕೈ ಚೆಲ್ಲಿದ ಕರ್ನಾಟಕ ಗೆಲುವಿನ ದಾರಿಯಿಂದ ದೂರ ಸರಿಯುವಂತಾಯಿತು. ಮೂರು ಕ್ಯಾಚ್, ಒಂದು ರನೌಟ್ ಅವಕಾಶವನ್ನು ಅತಿಥೇಯರು ಬಳಸಿಕೊಳ್ಳಲಿಲ್ಲ. ವೆಂಕಟೇಶ್ ಅಯ್ಯರ್ ವೈಯಕ್ತಿಕ 62 ರನ್ ಗಳಿಸಿದ್ದಾಗ ಅಭಿಮನ್ಯು ಮಿಥುನ್ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆಗಿದ್ದರು. ಆದರೆ ಅದು ನೋಬಾಲ್ ಆಗಿತ್ತು. ಆದಿತ್ಯ ಶ್ರೀವಾಸ್ತವ್ 8 ರನ್ ಗಳಿಸಿದ್ದಾಗ ಕೆ.ಗೌತಮ್ ಬೌಲಿಂಗ್ನಲ್ಲಿ ನೀಡಿದ್ದ ಕ್ಯಾಚ್ಅನ್ನು ಕೀಪರ್ ಶರತ್ ಶ್ರೀನಿವಾಸ್ ಕೈ ಚೆಲ್ಲಿದರೆ, 66 ರನ್ ಗಳಿಸಿದ್ದಾಗ ಮತ್ತೊಮ್ಮೆ ಕರುಣ್ ನಾಯರ್ ಮೂಲಕ ಜೀವದಾನ ಪಡೆದರು. ಎರಡು ಜೀವದಾನಗಳನ್ನು ಸದುಪಯೋಗಪಡಿಸಿಕೊಂಡ ಆದಿತ್ಯ ಶತಕದ ಗಡಿ ದಾಟಿದರು. ವೆಂಕಟೇಶ್ ಅಯ್ಯರ್ ಕೂಡ 2 ಜೀವದಾನ ಪಡೆದರು. 80ನೇ ಓವರ್ನಲ್ಲಿ ರನೌಟ್ ಮಾಡುವ ಅವಕಾಶವನ್ನು ಕೆ.ಗೌತಮ್ ಕೈಚೆಲ್ಲಿದರೆ, ರೋನಿತ್ ಮೋರೆ ಬೌಲಿಂಗ್ನಲ್ಲಿ ಮೊದಲ ಸ್ಲಿಪ್ನಲ್ಲಿದ್ದ ಕೆ.ಗೌತಮ್ ಕ್ಯಾಚ್ ಬಿಟ್ಟರು.
ತಮಿಳುನಾಡಿಗೆ ಭರ್ಜರಿ ಜಯ
ತಮಿಳುನಾಡು ತಂಡ ಬಿ ಗುಂಪಿನ ಪಂದ್ಯದಲ್ಲಿ ಬರೋಡ ಎದುರು ಇನಿಂಗ್ಸ್ ಹಾಗೂ 57 ರನ್ಗಳಿಂದ ಜಯ ದಾಖಲಿಸಿತು. ಇದರಿಂದ ಅಂತಿಮ ಪಂದ್ಯದವರೆಗೂ ಎಂಟರ ಘಟ್ಟದ ಹೋರಾಟವನ್ನು ಜೀವಂತವಾಗಿರಿಸಿಕೊಂಡಿತು. ಗೋವಾ ತಂಡ ನಾಗಾಲ್ಯಾಂಡ್ ವಿರುದ್ಧ ಗೆದ್ದರೆ, ಜಮ್ಮು ಕಾಶ್ಮೀರ ತಂಡ 329 ರನ್ಗಳಿಂದ ತ್ರಿಪುರ ತಂಡದ ಎದುರು ಜಯ ದಾಖಲಿಸಿತು.
| ಅರವಿಂದ ಅಕ್ಲಾಪುರ