

ನವದೆಹಲಿ: ಹಿಂದಿನ ಸುತ್ತಿನಲ್ಲಿ ವಿಶ್ರಾಂತಿ ಯಲ್ಲಿದ್ದ ಕರ್ನಾಟಕ ತಂಡ ಸೋಮವಾರ ಆರಂಭವಾಗಲಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ 7ನೇ ಸುತ್ತಿನ ಪಂದ್ಯದಲ್ಲಿ ರೈಲ್ವೇಸ್ ತಂಡವನ್ನು ಎದುರಿಸಲಿದೆ. ಎ ಮತ್ತು ಬಿ ಗುಂಪಿನಲ್ಲಿ 7ನೇ ಸ್ಥಾನದಲ್ಲಿರುವ ಕರ್ನಾಟಕ ತಂಡ ಅಂಕಪಟ್ಟಿಯಲ್ಲಿ ಮೇಲೇರುವ ತವಕದಲ್ಲಿದೆ. ಎಂಟರ ಘಟ್ಟ ಖಾತ್ರಿಪಡಿಸಿಕೊಳ್ಳುವ ದೃಷ್ಟಿಯಿಂದ ಕರ್ನಾಟಕ ತಂಡ ಈ ಪಂದ್ಯದಲ್ಲಿ ಗೆದ್ದಷ್ಟು ಅನುಕೂಲ.
ಮದುವೆ ಹಿನ್ನೆಲೆಯಲ್ಲಿ ಸೌರಾಷ್ಟ್ರ ವಿರುದ್ಧದ ಹಿಂದಿನ ಪಂದ್ಯದಿಂದ ಹೊರಗುಳಿದಿದ್ದ ನಾಯಕ ಕರುಣ್ ನಾಯರ್, ತಮಿಳುನಾಡು ವಿರುದ್ಧದ ಮೊದಲ ಪಂದ್ಯ ಆಡಿದ ಬಳಿಕ ಗಾಯಕ್ಕೆ ತುತ್ತಾಗಿದ್ದ ಕೆ.ಗೌತಮ್ ತಂಡಕ್ಕೆ ವಾಪಸಾಗಿದ್ದಾರೆ. ಪ್ರಮುಖರ ಅಲಭ್ಯಯಿಂದ ಸೌರಾಷ್ಟ್ರ ಎದುರು ಬಳಲಿದ್ದ ಕರ್ನಾಟಕ ತಂಡ ಪುಟಿದೇಳುವ ವಿಶ್ವಾಸದಲ್ಲಿದೆ. ಮತ್ತೊಂದೆಡೆ, ಬಲಿಷ್ಠ ಮುಂಬೈ ತಂಡವನ್ನು ಮಣಿಸಿದ ಬಳಿಕ ಸತತ ವೈಫಲ್ಯ ಅನುಭವಿಸುತ್ತಿರುವ ರೈಲ್ವೇಸ್ ತಂಡ ಕೂಡ ಪ್ರಬಲ ಹೋರಾಟಕ್ಕೆ ಸಜ್ಜಾಗಿದೆ.
ಹಾಲಿ ಟೂರ್ನಿಯಲ್ಲಿ ಇದುವರೆಗೆ ಕರ್ನಾಟಕದ ಒಬ್ಬ ಬ್ಯಾಟ್ಸ್ಮನ್ ಕೂಡ ಶತಕ ಸಿಡಿಸಿಲ್ಲ. ಆಲ್ರೌಂಡರ್ ಕೆ.ಗೌತಮ್ ತಂಡಕ್ಕೆ ವಾಪಸಾಗಿರುವುದು ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದ ಶಕ್ತಿಯನ್ನು ಇಮ್ಮಡಿಗೊಳಿಸಿದೆ. ಕೆಎಲ್ ರಾಹುಲ್, ಮನೀಷ್ ಪಾಂಡೆ ಹಾಗೂ ಮಯಾಂಕ್ ಅಗರ್ವಾಲ್ ಅನುಪಸ್ಥಿತಿಯಲ್ಲಿ ಸಮರ್ಥ್ ಹಾಗೂ ದೇವದತ್ ಪಡಿಕಲ್ ಜೋಡಿ ಸಮರ್ಥವಾಗಿ ನಿಭಾಯಿಸುತ್ತಿದೆ. ಆರ್. ಸಮರ್ಥ್ ಕಳೆದ ನಾಲ್ಕು ಇನಿಂಗ್ಸ್ ಗಳಲ್ಲಿ 3 ಅರ್ಧಶತಕ ಬಾರಿಸಿರುವುದೇ ಇದಕ್ಕೆ ಸಾಕ್ಷಿ. ಕರುಣ್ ನಾಯರ್, ಕೆ.ಗೌತಮ್ ಅಭಿಮನ್ಯು ಮಿಥುನ್ ಹಾಗೂ ವಿ. ಕೌಶಿಕ್ ಹನ್ನೊಂದರ ಬಳಗ ಸೇರಿಕೊಂಡರೆ, ಪ್ರವೀಣ್ ದುಬೆ, ರೋಹನ್ ಕದಂ ಹಾಗೂ ಕೆವಿ ಸಿದ್ದಾರ್ಥ್ ಹೊರಗುಳಿಯುವ ಸಾಧ್ಯತೆಗಳಿವೆ. ಅಂಕಪಟ್ಟಿಯಲ್ಲಿ 11ನೇ ಸ್ಥಾನದಲ್ಲಿರುವ ರೈಲ್ವೇಸ್ ಈಗಾಗಲೇ 6 ಪಂದ್ಯಗಳನ್ನಾಡಿದ್ದು, ಕರ್ನಾಟಕದ ವಿರುದ್ಧ ಗೆದ್ದರೂ ಮುಂದಿನ ಹಂತಕ್ಕೇರುವುದು ಅನುಮಾನವಾಗಿದೆ. -ಏಜೆನ್ಸೀಸ್
ಪಂದ್ಯ ಆರಂಭ: ಬೆಳಗ್ಗೆ 9.30 ಮುಖಾಮುಖಿ: 9 ಕರ್ನಾಟಕ: 5 ರೈಲ್ವೇಸ್: 1 ಡ್ರಾ: 3