ಡಿಸೆಂಬರ್ 13ರಿಂದ ರಣಜಿ ಟ್ರೋಫಿ? ಈ ಬಾರಿ ದೇಶೀಯ ಕ್ರಿಕೆಟ್ ಋತುವಿನಲ್ಲಿ ಎರಡೇ ಟೂರ್ನಿಗಳು..!

sport
Published on

ನವದೆಹಲಿ: ಕೋವಿಡ್-19 ಹಾವಳಿಯಿಂದಾಗಿ ದೇಶೀಯ ಕ್ರಿಕೆಟ್ ಋತು ಈ ಬಾರಿ ನಿಗದಿಯಂತೆ ಆರಂಭ ಕಾಣುವುದಿಲ್ಲ ಎಂಬುದು ಈಗಾಗಲೆ ಖಚಿತಗೊಂಡಿದೆ. ಸೆಪ್ಟೆಂಬರ್-ನವೆಂಬರ್​ನಲ್ಲಿ ಐಪಿಎಲ್ ಟೂರ್ನಿ ಕೂಡ ನಿಗದಿಯಾಗಿರುವುದರಿಂದ ಈ ಬಾರಿ ವರ್ಷಾಂತ್ಯದವರೆಗೂ ದೇಶೀಯ ಕ್ರಿಕೆಟ್ ಟೂರ್ನಿ ಮುಂದೂಡಲ್ಪಡಲಿದೆ. ಜತೆಗೆ ಈ ವರ್ಷ ಸೀನಿಯರ್ ಪುರುಷರ ಕ್ರಿಕೆಟ್​ನಲ್ಲಿ ಕೇವಲ 2 ಟೂರ್ನಿಗಳಷ್ಟೇ ನಡೆಯಲಿವೆ. ಅವುಗಳೆಂದರೆ ರಣಜಿ ಟ್ರೋಫಿ ಮತ್ತು ಸಯ್ಯದ್ ಮುಸ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿ ಎನ್ನಲಾಗಿದೆ.

ಐಪಿಎಲ್ ಟೂರ್ನಿ ಯುಎಇಯಲ್ಲಿ ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ನಡೆಯಲಿದೆ. ಬಳಿಕ ನವೆಂಬರ್ 19ರಿಂದ ಡಿಸೆಂಬರ್ 7ರವರೆಗೆ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿ ನಡೆದರೆ, ಡಿಸೆಂಬರ್ 13ರಿಂದ ಮಾರ್ಚ್ 10ರವರರೆಗೆ ರಣಜಿ ಟ್ರೋಫಿ ಟೂರ್ನಿ ನಡೆಯಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಸಾಮಾನ್ಯವಾಗಿ ಸೆಪ್ಟೆಂಬರ್​ನಲ್ಲಿ ದೇಶೀಯ ಕ್ರಿಕೆಟ್ ಋತು ಆರಂಭವಾಗುತ್ತದೆ. ಆದರೆ ಈ ಬಾರಿ ವರ್ಷಾಂತ್ಯದವರೆಗೆ ಋತು ಆರಂಭಗೊಳ್ಳದಿರುವ ಕಾರಣ, ದುಲೀಪ್ ಟ್ರೋಫಿ, ದೇವಧರ್ ಟ್ರೋಫಿ ಮತ್ತು ವಿಜಯ್ ಹಜಾರೆ ಟ್ರೋಫಿಗಳನ್ನು ಕೈಬಿಡುವುದು ಅನಿವಾರ್ಯವೆನಿಸಿದೆ.

ಮುಂದಿನ ವರ್ಷದ ಐಪಿಎಲ್ 14ನೇ ಆವೃತ್ತಿಗೆ ಪೂರ್ವಭಾವಿಯಾಗಿ ಡಿಸೆಂಬರ್ ಅಥವಾ 2021ರ ಜನವರಿಯಲ್ಲಿ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಇದಕ್ಕೆ ದೇಶೀಯ ಆಟಗಾರರನ್ನು ಆಯ್ದುಕೊಳ್ಳಲು ಫ್ರಾಂಚೈಸಿಗಳಿಗೆ ನೆರವಾಗುವ ಸಲುವಾಗಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿ ನಡೆಯಲಿದೆ ಎನ್ನಲಾಗಿದೆ.

ರಣಜಿ ಟ್ರೋಫಿಯಲ್ಲಿ ಪ್ರತಿ ಗುಂಪಿನಲ್ಲಿ 2 ನಗರಗಳ 4 ಮೈದಾನಗಳಲ್ಲಿ ಪಂದ್ಯಗಳು ನಡೆಯಲಿವೆ. ತಂಡಗಳು ಈ ಬಾರಿ ಒಟ್ಟು 5 ಗುಂಪುಗಳಲ್ಲಿ ವಿಂಗಡನೆಯಾಗಲಿವೆ ಎನ್ನಲಾಗಿದೆ. ಎನ್​ಸಿಎ ಮುಖ್ಯಸ್ಥ ರಾಹುಲ್ ದ್ರಾವಿಡ್ ಮತ್ತು ಐಪಿಎಲ್ ಸಿಇಒ ಹೇಮಂಗ್ ಅಮಿನ್ ಸಿದ್ಧಪಡಿಸಿರುವ ಈ ಬಾರಿಯ ದೇಶೀಯ ಕ್ರಿಕೆಟ್ ಋತುವಿನ ಕರಡು ವೇಳಾಪಟ್ಟಿಯ ಪ್ರಕಾರ, ಸಿಕೆ ನಾಯ್ಡು ಟ್ರೋಫಿ 23 ವಯೋಮಿತಿ ಟೂರ್ನಿ ಡಿಸೆಂಬರ್ 15ರಿಂದ ಮಾರ್ಚ್ 9ರವರೆಗೆ, ಕೂಚ್ ಬೆಹಾರ್ ಟ್ರೋಫಿ 19 ವಯೋಮಿತಿ ಟೂರ್ನಿ ನವೆಂಬರ್ 1ರಿಂದ ಜನವರಿ 22ರವರೆಗೆ ಮತ್ತು ವಿಜಯ್ ಮರ್ಚೆಂಟ್ ಟ್ರೋಫಿ 16 ವಯೋಮಿತಿ ಟೂರ್ನಿ ನವೆಂಬರ್ 1ರಿಂದ ಜನವರಿ 7ರವರೆಗೆ ನಡೆಯಲಿದೆ.

ಕಳೆದ ದೇಶೀಯ ಕ್ರಿಕೆಟ್ ಋತುವಿನ ಅಂತ್ಯದಲ್ಲಿ ನಿಗದಿಯಾಗಿದ್ದ ರಣಜಿ ಟ್ರೋಫಿ ಚಾಂಪಿಯನ್ ಸೌರಾಷ್ಟ್ರ ಮತ್ತು ಶೇಷ ಭಾರತ ನಡುವಿನ ಇರಾನಿ ಕಪ್ ಪಂದ್ಯ ಕರೊನಾ ಹಾವಳಿಯಿಂದಾಗಿ ರದ್ದುಗೊಂಡಿತ್ತು. ಈ ಬಾರಿಯ ದೇಶೀಯ ಕ್ರಿಕೆಟ್ ಋತುವಿನಲ್ಲೂ ಇರಾನಿ ಕಪ್ ಪಂದ್ಯ ನಡೆಯುವುದಿಲ್ಲ ಎನ್ನಲಾಗಿದೆ. ಇನ್ನು ದೇಶದಲ್ಲಿ ಕರೊನಾ ವೈರಸ್ ಹಾವಳಿ ದೇಶದಲ್ಲಿ ಯಾವಾಗ ಸಂಪೂರ್ಣ ನಿಯಂತ್ರಣಕ್ಕೆ ಬರಲಿದೆ ಎಂಬುದರ ಆಧಾರದಲ್ಲೂ ದೇಶೀಯ ಕ್ರಿಕೆಟ್ ಋತುವಿನ ಆರಂಭ ಅವಲಂಬಿಸಿದೆ. ಮಹಿಳೆಯರ ವಿಭಾಗದಲ್ಲಿ ಸೀನಿಯರ್ ಏಕದಿನ ಲೀಗ್ ಮಾರ್ಚ್ 17ರಿಂದ ಏಪ್ರಿಲ್ 12ರವರೆಗೆ, ಟಿ20 ಲೀಗ್ ನವೆಂಬರ್ 1ರಿಂದ 20ರವರೆಗೆ, 22 ವಯೋಮಿತಿ ಏಕದಿನ ಲೀಗ್ ನವೆಂಬರ್ 30ರಿಂದ ಡಿಸೆಂಬರ್ 23ರವರೆಗೆ, 23 ವಯೋಮಿತಿ ಟಿ20 ಲೀಗ್ ಜನವರಿ 27ರಿಂದ ಫೆಬ್ರವರಿ 15ರವರೆಗೆ, 19 ವಯೋಮಿತಿ ಏಕದಿನ ಲೀಗ್ ಡಿಸೆಂಬರ್ 29ರಿಂದ ಜನವರಿ 21ರವರೆಗೆ ಮತ್ತು 19 ವಯೋಮಿತಿ ಟಿ20 ಲೀಗ್ ಫೆಬ್ರವರಿ 21ರಿಂದ ಮಾರ್ಚ್ 11ರವರೆಗೆ ನಡೆಯಲಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net