

ಕೋಲ್ಕತ: ಮಧ್ಯಮ ವೇಗಿ ಮುಕೇಶ್ ಕುಮಾರ್ (61ಕ್ಕೆ 6) ಮಾರಕ ದಾಳಿಗೆ ನಲುಗಿದ 8 ಬಾರಿಯ ಚಾಂಪಿಯನ್ ಕರ್ನಾಟಕ ತಂಡ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಸತತ ಮೂರನೇ ವರ್ಷ ಸೆಮಿಫೈನಲ್ನಲ್ಲಿ ಮುಗ್ಗರಿಸಿದೆ. ಬಂಗಾಳ ನೀಡಿದ 352 ರನ್ಗಳ ಕಠಿಣ ಸವಾಲು ಬೆನ್ನಟ್ಟಿದ ಕರ್ನಾಟಕ ತಂಡ 174 ರನ್ಗಳಿಂದ ಶರಣಾಯಿತು.
ಈಡನ್ ಗಾರ್ಡನ್ಸ್ ಮೈದಾನದಲ್ಲಿ ಮಂಗಳವಾರ ಮುಕ್ತಾಯಗೊಂಡ ಪಂದ್ಯದಲ್ಲಿ 3 ವಿಕೆಟ್ಗೆ 98 ರನ್ಗಳಿಂದ 4ನೇ ದಿನದಾಟ ಆರಂಭಿಸಿದ ಕರ್ನಾಟಕ ತಂಡ ಯುವ ಬ್ಯಾಟ್ಸ್ಮನ್ ದೇವದತ್ ಪಡಿಕಲ್ (62 ರನ್, 129 ಎಸೆತ, 7 ಬೌಂಡರಿ) ಏಕಾಂಗಿ ನಿರ್ವಹಣೆ ನಡುವೆಯೂ ಭೋಜನ ವಿರಾಮಕ್ಕೂ ಮೊದಲೇ 177 ರನ್ಗಳಿಗೆ ಸರ್ವಪತನ ಕಂಡಿತು. ಇದರೊಂದಿಗೆ ಸತತ ಮೂರನೇ ಯತ್ನದಲ್ಲೂ ಪ್ರಶಸ್ತಿ ಸುತ್ತಿಗೇರಲು ಕರ್ನಾಟಕ ವಿಫಲವಾಯಿತು. ಬಂಗಾಳ ಮೊದಲ ಇನಿಂಗ್ಸ್ನಲ್ಲಿ 312 ರನ್ ಗಳಿಸಿದರೆ, ಕರ್ನಾಟಕ 122 ರನ್ಗಳಿಸಿ 190 ರನ್ ಹಿನ್ನಡೆ ಕಂಡಿತ್ತು. 2ನೇ ಸರದಿಯಲ್ಲಿ ಬಂಗಾಳ ತಂಡ 161 ರನ್ಗಳಿಗೆ ಆಲೌಟ್ ಆಗಿತ್ತು.
ಮತ್ತೆ ಕೈಕೊಟ್ಟ ಬ್ಯಾಟಿಂಗ್: 3ನೇ ದಿನದಾಟದಲ್ಲಿ ದೇವದತ್ ಪಡಿಕಲ್ ಅರ್ಧಶತಕದೊಂದಿಗೆ ಪ್ರತಿರೋಧ ನೀಡುವ ಸೂಚನೆ ರವಾನಿಸಿದ್ದ ಕರ್ನಾಟಕ ತಂಡ, 4ನೇ ದಿನದಾಟದ ಆರಂಭ ದಲ್ಲೇ ಕುಸಿಯಲು ಆರಂಭಿಸಿತು. ಕ್ರಮವಾಗಿ 50 ಹಾಗೂ 11 ರನ್ನಿಂದ ಆಟ ಮುಂದುವರಿಸಿದ ಪಡಿಕಲ್ ಹಾಗೂ ಅನುಭವಿ ಮನೀಷ್ ಪಾಂಡೆ ದಿನದ 3ನೇ ಓವರ್ನಲ್ಲೇ ಬೇರ್ಪಟ್ಟರು. ಹಿಂದಿನ ದಿನದಾಟಕ್ಕೆ 1 ರನ್ ಪೇರಿಸಿದ್ದ ಮನೀಷ್, ಮುಕೇಶ್ ಕುಮಾರ್ ಎಸೆತದಲ್ಲಿ ವಿಕೆಟ್ ಕೀಪರ್ ಶ್ರೀವತ್ಸ ಗೋಸ್ವಾಮಿಗೆ ಕ್ಯಾಚ್ ನೀಡಿದರು.
ಇದರೊಂದಿಗೆ ಕರ್ನಾಟಕದ ಪತನ ಕೂಡ ಆರಂಭಕೊಂಡಿತು. ತಂಡದ ಸಂಕಷ್ಟದ ಸಮಯದಲ್ಲಿ ತಂಡಕ್ಕೆ ಆಸರೆಯಾಗುತ್ತಿದ್ದ ಕೆವಿ ಸಿದ್ದಾರ್ಥ್ ಹಾಗೂ ಶರತ್ ಶ್ರೀನಿವಾಸ್ ಖಾತೆ ತೆರೆಯುವ ಮುನ್ನವೇ ಒಂದೇ ಓವರ್ನಲ್ಲಿ ಮುಕೇಶ್ಗೆ ವಿಕೆಟ್ ನೀಡಿದರು. ಇದರೊಂದಿಗೆ ಕರ್ನಾಟಕದ ಸೋಲು ಕೂಡ ಖಚಿತಗೊಂಡಿತು. ಒಂದೆಡೆ ಏಕಾಂಗಿ ನಿರ್ವಹಣೆ ತೋರುತ್ತಿದ್ದ ದೇವದತ್ ಪಡಿಕಲ್ ಕೂಡ ಮುಕೇಶ್ಗೆ ವಿಕೆಟ್ ನೀಡಿದರು. ಇದರಿಂದ ಕರ್ನಾಟಕ ತಂಡ 118 ರನ್ಗಳಿಗೆ 7 ವಿಕೆಟ್ ಕಳೆದುಕೊಂಡಿತು. ಈ ವೇಳೆ ಜತೆಯಾದ ಕೆ.ಗೌತಮ್ (22) ಹಾಗೂ ಮಿಥುನ್ (38) 8ನೇ ವಿಕೆಟ್ಗೆ ಬಿರುಸಿನ 24 ರನ್ ಹಾಕಿದ್ದೇ ಸಮಾಧಾನಕರ ಸಂಗತಿ. ಗೌತಮ್ ನಿರ್ಗಮನದ ಬಳಿಕ ಕೆಳಕ್ರಮಾಂಕದ ಬ್ಯಾಟ್ಸ್ಮನ್ಗಳ ನೆರವು ಪಡೆದ ಮಿಥುನ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿ ತಂಡದ ಮೊತ್ತವನ್ನು 170ರ ಗಡಿ ದಾಟಿಸಿದರು. -ಏಜೆನ್ಸೀಸ್
ಸೌರಾಷ್ಟ್ರ ಹಿಡಿತದಲ್ಲಿ ಗುಜರಾತ್
ರಾಜ್ಕೋಟ್ನಲ್ಲಿ ನಡೆಯುತ್ತಿರುವ ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಸೌರಾಷ್ಟ್ರ ತಂಡ ಮಾಜಿ ಚಾಂಪಿಯನ್ ಗುಜರಾತ್ ವಿರುದ್ಧ ಬಿಗಿ ಹಿಡಿತ ಸಾಧಿಸಿದೆ. ಸೌರಾಷ್ಟ್ರ ನೀಡಿದ 327 ರನ್ ಗುರಿ ಬೆನ್ನಟ್ಟಿರುವ ಗುಜರಾತ್ 4ನೇ ದಿನದಂತ್ಯಕ್ಕೆ 1 ವಿಕೆಟ್ಗೆ 7 ರನ್ ಪೇರಿಸಿದ್ದು, ಅಂತಿಮ ದಿನದಾಟದಲ್ಲಿ 320 ರನ್ ಪೇರಿಸಬೇಕಿದೆ. ಇದಕ್ಕೂ ಮೊದಲು ಚಿಂತನ್ ಗಜಾ (71ಕ್ಕೆ 7) ಮಾರಕ ದಾಳಿಯ ನಡುವೆ 5 ವಿಕೆಟ್ಗೆ 66 ರನ್ಗಳಿಂದ ದಿನದಾಟ ಆರಂಭಿಸಿದ ಸೌರಾಷ್ಟ್ರ, ಅರ್ಪಿತ್ ವಸವಾಡ (139) ಹಾಗೂ ಚಿರಾಗ್ ಜಾನಿ (51) ಜೋಡಿ 7ನೇ ವಿಕೆಟ್ಗೆ ಸೇರಿಸಿದ 109 ರನ್ ಜತೆಯಾಟದಿಂದ 274 ರನ್ಗಳಿಗೆ ಸರ್ವಪತನ ಕಂಡಿತು.
ಅರುಣ್ ಲಾಲ್ ವಿಶೇಷ ಸಾಧನೆ
13 ವರ್ಷಗಳ ಬಳಿಕ ಫೈನಲ್ ಪ್ರವೇಶಿಸಿರುವ ಬಂಗಾಳ ತಂಡದ ಯಶಸ್ಸಿನಲ್ಲಿ ಕೋಚ್ ಅರುಣ್ ಲಾಲ್ ಪ್ರಮುಖ ಸೂತ್ರದಾರ. ಭಾರತ ತಂಡದ ಮಾಜಿ ಆಟಗಾರನೂ ಆಗಿರುವ ಅರುಣ್ ಲಾಲ್, 1989-90ರಲ್ಲಿ ಕೊನೆಯ ಬಾರಿ ಪ್ರಶಸ್ತಿ ಜಯಿಸಿದ ಬಂಗಾಳ ತಂಡದ ಸದಸ್ಯರಾಗಿದ್ದರು. ದೆಹಲಿ ವಿರುದ್ಧ ನಡೆದ ಅಂದಿನ ಫೈನಲ್ ಪಂದ್ಯದಲ್ಲಿ ಅಜೇಯ 52 ರನ್ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅಂದಿನ ಟೂರ್ನಿಯಲ್ಲಿ ಒಟ್ಟು 465 ರನ್ ಪೇರಿಸಿದ್ದರು. ಬಂಗಾಳ ತಂಡ ಪ್ರಶಸ್ತಿ ಗೆದ್ದಲ್ಲಿ, ಒಂದೇ ತಂಡದ ಆಟಗಾರನಾಗಿ ಹಾಗೂ ಕೋಚ್ ಆಗಿಯೂ ಪ್ರಶಸ್ತಿ ಜಯಿಸಿದ ಶ್ರೇಯ ಅರುಣ್ಗೆ ಒಲಿಯಲಿದೆ. ಬಂಗಾಳ ಪಾಲಿಗೆ 30 ವರ್ಷಗಳಿಂದ ಮರೀಚಿಕೆಯಾಗಿರುವ ಪ್ರಶಸ್ತಿ ಬರವೂ ನೀಗಲಿದೆ.
ಬಂಗಾಳ ತಂಡಕ್ಕೆ ಸಾಹ ಬಲ
ಭಾರತ ಟೆಸ್ಟ್ ತಂಡದ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹ ಮಾರ್ಚ್ 9ರಿಂದ ನಡೆಯಲಿರುವ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಬಂಗಾಳ ತಂಡದ ಪರ ಕಣಕ್ಕಿಳಿಯಲಿದ್ದಾರೆ. ವಿಕೆಟ್ ಕೀಪರ್-ಆರಂಭಿಕ ಬ್ಯಾಟ್ಸ್ಮನ್ ಅಭಿಷೇಕ್ ರಾಮನ್ ರನ್ ಗಳಿಸಲು ಪರದಾಡುತ್ತಿರುವ ಹಿನ್ನೆಲೆಯಲ್ಲಿ ಅವರ ಬದಲಿಗೆ ಸಾಹ ತಂಡ ಕೂಡಿಕೊಳ್ಳಲಿದ್ದಾರೆ. ಕೋಲ್ಕತದಲ್ಲಿ ನಡೆದ ಭಾರತ-ಬಾಂಗ್ಲಾದೇಶ ನಡುವಿನ ಅಹರ್ನಿಶಿ ಟೆಸ್ಟ್ ಪಂದ್ಯದ ವೇಳೆ ಸಾಹ ಗಾಯಕ್ಕೆ ತುತ್ತಾಗಿದ್ದರು. ಬಳಿಕ ಚೇತರಿಕೆ ಕಂಡಿದ್ದ ಸಾಹ, ನ್ಯೂಜಿಲೆಂಡ್ ಪ್ರವಾಸದ ವೇಳೆ ಭಾರತ ಟೆಸ್ಟ್ ತಂಡದಲ್ಲಿದ್ದರೂ ಹನ್ನೊಂದರ ಬಳಗದಲ್ಲಿ ಆಡಿರಲಿಲ್ಲ. ಸಾಹ 2017-18ನೇ ಸಾಲಿನಲ್ಲಿ ಕಡೇ ಬಾರಿಗೆ ಬಂಗಾಳ ಪರ ರಣಜಿ ಟ್ರೋಫಿಯಲ್ಲಿ ಆಡಿದ್ದರು.
14 ಬಂಗಾಳ ತಂಡ 14ನೇ ಬಾರಿ ಫೈನಲ್ಗೇರುವ ಮೂಲಕ ಕರ್ನಾಟಕದ ಸಾಧನೆಯನ್ನು ಸರಿಗಟ್ಟಿತು. ಆದರೆ ಕರ್ನಾಟಕ 8 ಬಾರಿ ಪ್ರಶಸ್ತಿ ಗೆದ್ದಿದ್ದರೆ, ಬಂಗಾಳ ಈ ಹಿಂದೆ 2 ಬಾರಿ ಮಾತ್ರ ಪ್ರಶಸ್ತಿ ಜಯಿಸಿದೆ. ಮುಂಬೈ 46 ಬಾರಿ ಫೈನಲ್ಗೇರಿದ್ದು ದಾಖಲೆ. ದೆಹಲಿ ತಂಡ 15 ಫೈನಲ್ಗೇರಿ ನಂತರದ ಸ್ಥಾನದಲ್ಲಿದೆ.
03 ಕರ್ನಾಟಕ ಸತತ 3ನೇ ಬಾರಿಗೆ ಸೆಮಿಫೈನಲ್ನಲ್ಲಿ ಮುಗ್ಗರಿಸಿತು. 2017-18ನೇ ಸಾಲಿನಲ್ಲಿ ಕೋಲ್ಕತದಲ್ಲೇ ವಿದರ್ಭ ಎದುರು ಕೇವಲ 5 ರನ್ಗಳಿಂದ ಸೋತಿದ್ದ ಕರ್ನಾಟಕ, ಕಳೆದ ವರ್ಷ ಬೆಂಗಳೂರಿನಲ್ಲಿ ಸೌರಾಷ್ಟ್ರ ತಂಡದ ಶರಣಾಗಿತ್ತು.
ಕರ್ನಾಟಕಕ್ಕೆ ತಪ್ಪಿದ ಹ್ಯಾಟ್ರಿಕ್ ಪ್ರಶಸ್ತಿ
ದೇಶೀಯ ಕ್ರಿಕೆಟ್ನಲ್ಲಿ ಸತತ ಎರಡು ಬಾರಿ ಹ್ಯಾಟ್ರಿಕ್ ಪ್ರಶಸ್ತಿ ಜಯಿಸಿದ್ದ ಕರ್ನಾಟಕ ಈ ಸೋಲಿನಿಂದ 3ನೇ ಬಾರಿಗೆ ಹ್ಯಾಟ್ರಿಕ್ ಪ್ರಶಸ್ತಿ ಗೆಲ್ಲುವ ಅವಕಾಶ ತಪ್ಪಿಸಿಕೊಂಡಿತು. ಪ್ರಸಕ್ತ ದೇಶೀಯ ಋತುವಿನಲ್ಲಿ ಕರ್ನಾಟಕ ಈಗಾಗಲೇ ವಿಜಯ್ ಹಜಾರೆ ಟ್ರೋಫಿ, ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಜಯಿಸಿತ್ತು. 2013-14, 2014-15ರಲ್ಲಿ ರಣಜಿ, ಇರಾನಿ ಕಪ್ ಹಾಗೂ ವಿಜಯ್ ಹಜಾರೆ ಟ್ರೋಫಿ ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡಿತ್ತು.
ಕರ್ನಾಟಕ ದ್ವಿತೀಯ ಇನಿಂಗ್ಸ್: (ಸೋಮವಾರ 3 ವಿಕೆಟ್ಗೆ 98) 55.3 ಓವರ್ಗಳಲ್ಲಿ 177 (ಗುರಿ: 352 ರನ್)
ಇತರ: 4. ವಿಕೆಟ್ ಪತನ: 3-76, 4-99, 5-103, 6-103, 7-118, 8-142, 9-147. ಬೌಲಿಂಗ್: ಇಶಾನ್ ಪೊರೆಲ್ 19-5-58-2, ಮುಕೇಶ್ ಕುಮಾರ್ 21-5-61-6, ಆಕಾಶ್ ದೀಪ್ 11.3-1-44-2, ಅರ್ನಾಬ್ ನಂದಿ 4-0-10-0.