ಕ್ರಿಕೆಟ್​ ವಿಶ್ವದ ಬೌಲರ್​ಗಳ ಪಾಲಿನ ಸಿಂಹಸ್ವಪ್ನ ವೀರೇಂದ್ರ ಸೆಹ್ವಾಗ್​ಗೆ ರಾಮಾಯಣದ ಈ ಪಾತ್ರವೇ ಸ್ಫೂರ್ತಿಯಂತೆ!

sehwag
Published on

ನವದೆಹಲಿ: ವೀರೇಂದ್ರ ಸೆಹ್ವಾಗ್​ ಎನ್ನುತ್ತಲೇ ಎದುರಾಳಿ ಬೌಲರ್​ಗಳ ಕೆನ್ನೆಗೆ ಹೊಡದಂತೆ ಚೆಂಡನ್ನು ಹೊಡೆದು, ರೋಮಾಂಚನಗೊಳಿಸುತ್ತಿದ್ದ ಭಾರತ ಕ್ರಿಕೆಟ್​ ತಂಡದ ಆರಂಭಿಕ ಬ್ಯಾಟ್ಸ್​ಮನ್​ ಒಬ್ಬರ ಚಿತ್ರ ಕಣ್ಮುಂದೆ ನಿಲ್ಲುತ್ತದೆ. ಕ್ರಿಕೆಟ್​ ವಿಶ್ವದ ಬೌಲರ್​ಗಳ ಪಾಲಿಗೆ ಸಿಂಹಸ್ವಪ್ನ ಎನಿಸಿದ್ದ ಇಂಥ ಸೆಹ್ವಾಗ್​ ಪಾಲಿಗೆ ರಾಮಾಯಣದ ಈ ಪಾತ್ರ ಸ್ಫೂರ್ತಿಯಂತೆ.

ಪ್ರತಿಯೊಬ್ಬರ ಜೀವನದಲ್ಲೂ ಒಬ್ಬೊಬ್ಬರು ಸ್ಫೂರ್ತಿದಾಯಕ ವ್ಯಕ್ತಿ ಇದ್ದೇ ಇರುತ್ತಾರೆ. ಸೆಹ್ವಾಗ್​ ಅವರೆಲ್ಲರಿಗಿಂತ ಭಿನ್ನರೇನಲ್ಲ ಎಂಬ ಕುಹಕದ ರಾಗ ಹಾಡುವವರು ಇದ್ದಾರೆ. ಆದರೆ, ಸೆಹ್ವಾಗ್​ ಪಾಲಿಗೆ ಯಾವುದೇ ಸಿನಿಮಾ ಹೀರೋ ಆಗಲಿ, ಯಾವುದೇ ಕಥೆಗಳ ನಾಯಕರಾಗಲಿ ಸ್ಫೂರ್ತಿಯಾಗಿಲ್ಲ. ಬದಲಿಗೆ ರಾಮಾಯಣದಲ್ಲಿ ಬರುವ ಕಿಷ್ಕಿಂದ ರಾಜ್ಯದ ಯುವರಾಜನಾಗಿದ್ದ ಸುಗ್ರೀವನ ಪುತ್ರ ಅಂಗದ ಇವರಿಗೆ ಸ್ಫೂರ್ತಿಯಾಗಿರುವುದು ವಿಶೇಷ.

ದೂರದರ್ಶನದಲ್ಲಿ ಮರುಪ್ರಸಾರವಾಗುತ್ತಿರುವ ರಾಮಾಯಣ ಧಾರವಾಹಿಯ ಭಾನುವಾರದ ಸಂಚಿಕೆಯಲ್ಲಿ ರಾಮ ಮತ್ತು ರಾವಣನ ನಡುವಿನ ಯುದ್ಧಕ್ಕೂ ಮುನ್ನ ರಾಮನ ಶಾಂತಿ ಸಂದೇಶದೊಂದಿಗೆ ಅಂಗದ ರಾವಣನ ಆಸ್ಥಾನಕ್ಕೆ ತೆರಳಿರುತ್ತಾನೆ. ಆ ಸಂದರ್ಭದಲ್ಲಿ ತಮ್ಮ ಕಪಿಸೈನ್ಯದ ಬಲಪ್ರದರ್ಶಿಸಲು ತನ್ನ ಬಾಲಗಳನ್ನು ಮುಂದಕ್ಕೆ ಇಟ್ಟು ಬಲವಾಗಿ ಹೆಜ್ಜೆ ಊರುವ ಅಂಗದ, ಈ ಕಾಲನ್ನು ಎತ್ತಿ ಇಡುವುದು ಇರಲಿ, ಅಲ್ಲಾಡಿಸಿದರೂ ಸೋಲು ಒಪ್ಪಿಕೊಳ್ಳುವುದಾಗಿ ಹೇಳಿ ರಾವಣನ ಆಸ್ಥಾನದಲ್ಲಿದ್ದ ವೀರರೆಲ್ಲರಿಗೂ ಸವಾಲು ಹಾಕುತ್ತಾನೆ. ಅವರೆಲ್ಲರೂ ಎಷ್ಟೇ ಪ್ರಯತ್ನಿಸಿದರೂ ಅಂಗದನ ಕಾಲನ್ನು ಅಲ್ಲಾಡಿಸಲು ಸಾಧ್ಯವಾಗುವುದಿಲ್ಲ.

ಸ್ವತಃ ರಾವಣ ಅಂಗದನ ಕಾಲು ಎತ್ತಿ ಇಡಲು ಮುಂದಾಗುತ್ತಾನೆ. ಆಗ ಮುಂದಿಟ್ಟಿದ್ದ ತನ್ನ ಕಾಲನ್ನು ಹಿಂದಕ್ಕೆ ತೆಗೆದುಕೊಳ್ಳುವ ಅಂಗದ, ನಾನು ಸವಾಲು ಹಾಕಿದ್ದು ನಿನ್ನ ಅಸ್ಥಾನದಲ್ಲಿರುವ ವೀರರಿಗೆ ಹೊರತು ರಾಜನಿಗಲ್ಲ ಎಂದು ಹೇಳುವ ಮೂಲಕ ಶತ್ರು ಪಾಳೆಯದ ರಾಜನ ಗೌರವವನ್ನೂ ಎತ್ತಿ ಹಿಡಿದು, ರಾಜನೀತಿಜ್ಞತೆಯನ್ನು ಪ್ರದರ್ಶಿಸುತ್ತಾನೆ.

ಇಂಥ ಅಂಗದ ನನಗೆ ಸ್ಫೂರ್ತಿಯಾಗಿದ್ದ ಎಂದು ಹೇಳಿ ಭಾನುವಾರ ಪ್ರಸಾರವಾದ ಈ ದೃಶ್ಯದೊಂದಿಗೆ ಸೆಹ್ವಾಗ್​ ಟ್ವೀಟ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net