

BCCI President: ಏಷ್ಯಾ ಕಪ್ 2025ರ ಟಿ20 ಟೂರ್ನಿಗೆ ಭಾರತ ತಂಡ ಪ್ರಕಟಗೊಂಡ ಕೆಲವೇ ದಿನಗಳಲ್ಲಿ ಬಿಸಿಸಿಐನಲ್ಲಿ ಪ್ರಮುಖ ಬೆಳವಣಿಗೆಯೊಂದು ನಡೆದಿದೆ. ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರೋಜರ್ ಬಿನ್ನಿ ರಾಜೀನಾಮೆ ನೀಡಿದ್ದು, ಅವರ ಸ್ಥಾನಕ್ಕೆ ಮಧ್ಯಂತರ ಅಧ್ಯಕ್ಷರಾಗಿ ಮಂಡಳಿಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ರಾಜೀವ್ ಶುಕ್ಲಾ ಅಧಿಕಾರ ವಹಿಸಿಕೊಂಡಿದ್ದಾರೆ.
ಅಧ್ಯಕ್ಷೀಯ ಚುನಾವಣೆ ನಡೆಯುವವರೆಗೆ ಶುಕ್ಲಾ ಅವರೇ ಜವಾಬ್ದಾರಿಗಳನ್ನು ವಹಿಸಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ನಂತರ ರೋಜರ್ ಬಿನ್ನಿ ಅಕ್ಟೋಬರ್ 2022ರಲ್ಲಿ ಬಿಸಿಸಿಐ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಈ ವರ್ಷದ ಜುಲೈ 19ಕ್ಕೆ ಅವರಿಗೆ 70 ವರ್ಷ ತುಂಬಿತು. ಆದಾಗ್ಯೂ, ಬಿಸಿಸಿಐ ಸಂವಿಧಾನದ ಪ್ರಕಾರ, 70 ವರ್ಷಕ್ಕಿಂತ ಮೇಲ್ಪಟ್ಟ ಯಾವುದೇ ಪದಾಧಿಕಾರಿಯು ಈ ಸ್ಥಾನದಲ್ಲಿ ಮುಂದುವರಿಯಲು ಸಾಧ್ಯವಿಲ್ಲ. ನಿಯಮಗಳ ಪ್ರಕಾರ ಅವರು ಸ್ಥಾನಕ್ಕೆ ಅನರ್ಹರು.
ಪ್ರಸ್ತುತ, ಮಧ್ಯಂತರ ಅಧ್ಯಕ್ಷರಾಗಿ ಶುಕ್ಲಾ ಅವರೇ ಎಲ್ಲ ಕೆಲಸಗಳನ್ನು ನೋಡಿಕೊಳ್ಳಲಿದ್ದು, ಅಧ್ಯಕ್ಷೀಯ ಚುನಾವಣೆಯವರೆಗೂ ಮಧ್ಯಂತರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. ಸೆಪ್ಟೆಂಬರ್‌ನಲ್ಲಿ ಮುಂದಿನ ವಾರ್ಷಿಕ ಸಾಮಾನ್ಯ ಸಭೆವರೆಗೆ (ಎಜಿಎಂ) ಅವರು ಮಂಡಳಿಯ ದಿನನಿತ್ಯದ ವ್ಯವಹಾರಗಳನ್ನು ನಿರ್ವಹಿಸಲಿದ್ದಾರೆ. ರಾಜ್ಯ ಘಟಕಗಳ ನಡುವಿನ ಒಮ್ಮತದ ಆಧಾರದ ಮೇರೆಗೆ ಮುಂದಿನ ಪೂರ್ಣಾವಧಿ ಅಧ್ಯಕ್ಷರ ಬಗ್ಗೆ ವಾರ್ಷಿಕ ಮಹಾಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮೂಲಗಳು ಸೂಚಿಸಿವೆ,(ಏಜೆನ್ಸೀಸ್).