

ಜೈಪುರ: ಟೀಮ್ ಇಂಡಿಯಾ ಮಾಜಿ ಆಟಗಾರ,ಕೋಚ್ ವಿಕ್ರಮ್ ರಾಥೋಡ್ ಮುಂಬರುವ ಐಪಿಎಲ್ ಆವೃತ್ತಿಗೆ ರಾಜಸ್ಥಾನ ರಾಯಲ್ಸ್ ತಂಡದ ನೂತನ ಬ್ಯಾಟಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ.
ಮುಖ್ಯ ತರಬೇತುದಾರನಾಗಿ ಕೋಚ್ ರಾಹುಲ್ ದ್ರಾವಿಡ್ ನೇಮಕಗೊಂಡ ಬಳಿಕ ರಾಥೋಡ್ ಸಹ ರಾಜಸ್ಥಾನ ರಾಯಲ್ಸ್‌ನ ತರಬೇತಿ ಬಳಗಕ್ಕೆ ಸೇರಲಿದ್ದಾರೆ ಎನ್ನಲಾಗಿತ್ತು. 55 ವರ್ಷದ ರಾಥೋಡ್ ನೇಮಕವನ್ನು ಫ್ರಾಂಚೈಸಿ ಶುಕ್ರವಾರ ಅಧಿಕೃತಗೊಳಿಸಿದ್ದು, ಈ ಮೂಲಕ ಟೀಮ್ ಇಂಡಿಯಾ ಬಳಿಕ ರಾಜಸ್ಥಾನ ತಂಡದಲ್ಲೂ ದ್ರಾವಿಡ್ ಹಾಗೂ ರಾಥೋಡ್ ಜೋಡಿ ಒಟ್ಟಾಗಿ ಕಾರ್ಯನಿರ್ವಹಿಸಲಿದೆ.
ರವಿಶಾಸ್ತ್ರಿ, ದ್ರಾವಿಡ್ ಮುಖ್ಯ ಕೋಚ್ ಆಗಿದ್ದ 2019 ರಿಂದ 2024ರ ಅವಧಿಯಲ್ಲಿ ಟೀಮ್ ಇಂಡಿಯಾ ಬ್ಯಾಟಿಂಗ್ ಕೋಚ್ ಆಗಿದ್ದ ವಿಕ್ರಮ್ ರಾಥೋಡ್, ಟಿ20 ವಿಶ್ವಕಪ್ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಜತೆಗೆ ಯಶಸ್ವಿ ಜೈಸ್ವಾಲ್, ಶುಭಮಾನ್ ಗಿಲ್, ರಿಷಭ್ ಪಂತ್ ಹಾಗೂ ಕೆಎಲ್ ರಾಹುಲ್ ಅವರ ಬ್ಯಾಟಿಂಗ್ ಸುಧಾರಣೆಗೂ ಪ್ರಮುಖ ಮಾರ್ಗದರ್ಶಕರಾಗಿದ್ದರು. ಇದಕ್ಕೂ ಮುನ್ನ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್‌ನ ತರಬೇತಿ ಬಳಗದಲ್ಲಿದ್ದ ರಾಥೋಡ್, ದೇಶೀಯ ಕ್ರಿಕೆಟ್‌ನಲ್ಲಿ ಪಂಜಾಬ್ ಪರ 11,473 ರನ್‌ಗಳಿಸಿದ್ದಾರೆ. ಟೀಮ್ ಇಂಡಿಯಾ ಪರ 6 ಟೆಸ್ಟ್, 7 ಏಕದಿನ ಪಂದ್ಯಗಳನ್ನಾಡಿದ್ದು, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 33 ಶತಕದ ಸಾಧನೆ ರಾಥೋಡ್ ಅವರದಾಗಿದೆ.
ಹಲವು ವರ್ಷಗಳಿಂದ ವಿಕ್ರಮ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದು, ಅವರ ತಾಂತ್ರಿಕ ಪರಿಣಿತಿ, ಶಾಂತ ಸ್ವಭಾವದ ಜತೆಗೆ ಭಾರತೀಯ ಪಿಚ್ ಪರಿಸ್ಥಿತಿಗಳ ತಿಳುವಳಿಕೆ ರಾಯಲ್ಸ್‌ಗೆ ನೆರವಾಗಲಿದೆ. ಯುವ ಪ್ರತಿಭೆಗಳನ್ನು ಪೋಷಿಸುವ ಮತ್ತು ಆಟಗಾರರ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ಗುರಿ ಹೊಂದಿರುವ ಅವರ ಸಾಮರ್ಥ್ಯವು ಅಮೂಲ್ಯವಾಗಿದೆ’ ಎಂದು ಕೋಚ್ ದ್ರಾವಿಡ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.