ಇಂದು ರಾಜಸ್ಥಾನ ರಾಯಲ್ಸ್-ಕೋಲ್ಕತ ನೈಟ್ ರೈಡರ್ಸ್‌ ಹಣಾಹಣಿ

KKR AND ROYALS FOR WEB
Published on

ಮುಂಬೈ: ಸತತ ಸೋಲುಗಳಿಂದ ಕಂಗೆಟ್ಟಿರುವ ರಾಜಸ್ಥಾನ ರಾಯಲ್ಸ್ ಹಾಗೂ ಕೋಲ್ಕತ ನೈಟ್ ರೈಡರ್ಸ್‌ ತಂಡಗಳು ಐಪಿಎಲ್-14ರ ತಮ್ಮ 5ನೇ ಪಂದ್ಯದಲ್ಲಿ ಎದುರಾಗಲಿವೆ. ಎರಡು ಬಾರಿ ಚಾಂಪಿಯನ್ ಕೆಕೆಆರ್ ತಂಡ ಹ್ಯಾಟ್ರಿಕ್ ಸೋಲುಗಳಿಂದ ಕಂಗೆಟ್ಟಿದ್ದರೆ, ರಾಜಸ್ಥಾನ ರಾಯಲ್ಸ್ ತಂಡ ಕೂಡ ಸತತ 2 ಸೋಲನುಭವಿಸಿವೆ. ಇದುವರೆಗೂ ಬ್ಯಾಟಿಂಗ್ ವೈಫಲ್ಯವೇ ಉಭಯ ತಂಡಗಳಿಗೆ ಪ್ರಮುಖವಾಗಿ ಹಿನ್ನಡೆಯಾಗುತ್ತಿದೆ. ಕಡೇ ಕ್ಷಣದಲ್ಲಿ ಪ್ಯಾಟ್ ಕಮ್ಮಿನ್ಸ್ ಹೋರಾಟದ ನಡುವೆಯೂ ಕೆಕೆಆರ್ ಕೆಳೆದ ಪಂದ್ಯದಲ್ಲಿ ಸಿಎಸ್‌ಕೆ ಎದುರು ವೀರೋಚಿತ ಸೋಲು ಕಂಡಿದ್ದರೆ, ರಾಜಸ್ಥಾನ ರಾಯಲ್ಸ್ ತಂಡ ಆರ್‌ಸಿಬಿ ಎದುರು ದೇವದತ್ ಪಡಿಕಲ್ ಶತಕದ ಅಬ್ಬರ ಹಾಗೂ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್‌ಗೆ ತಲೆಭಾಗಿ ಆರ್‌ಸಿಬಿ ಎದುರು 10 ವಿಕೆಟ್‌ಗಳಿಂದ ಶರಣಾಗಿತ್ತು.

ಗೆಲುವಿನ ಒತ್ತಡದಲ್ಲಿ ಕೆಕೆಆರ್

ಅಗ್ರಕ್ರಮಾಂಕದ ಹಾಗೂ ಭರವಸೆಯ ಬ್ಯಾಟ್ಸ್‌ಮನ್‌ಗಳು ಕೈಕೊಡುತ್ತಿರುವುದು ತಂಡಕ್ಕೆ ದೊಡ್ಡ ಹಿನ್ನಡೆಯಾಗುತ್ತಿದೆ. ಲೀಗ್‌ನಲ್ಲಿ ಇದುವರೆಗೂ ಆಡಿರುವ 4 ಪಂದ್ಯಗಳ ಪೈಕಿ 1 ಜಯ, 3 ಸೋಲು ಕಂಡಿದ್ದು 2 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್‌ ಎದುರು ಜಯ ದಾಖಲಿಸಿದ್ದು ಬಿಟ್ಟರೆ ಬಳಿಕ ಆಡಿದ ಮೂರು ಪಂದ್ಯಗಳಲ್ಲೂ ಸೋಲನುಭವಿಸಿದೆ. ಸಿಎಸ್‌ಕೆ ನೀಡಿದ 221 ರನ್ ಬೆನ್ನಟ್ಟಲು ಯತ್ನಿಸಿದ ಅಗ್ರಕ್ರಮಾಂಕದ ಕೈಕೊಟ್ಟ ಪರಿಣಾಮ, ಆಂಡ್ರೆ ರಸೆಲ್ ಹಾಗೂ ಪ್ಯಾಟ್ ಕಮ್ಮಿನ್ಸ್ ಜೋಡಿಯ ಹೋರಾಟದಿಂದ ವೀರೋಚಿತ ಸೋಲು ಕಂಡಿತ್ತು. ಶುಭಮಾನ್ ಗಿಲ್, ನಿರೀಶ್ ರಾಣಾ, ರಾಹುಲ್ ತ್ರಿಪಾಠಿ, ಇವೊಯಿನ್ ಮಾರ್ಗನ್, ಒಳಗೊಂಡ ಅಗ್ರಕ್ರಮಾಂಕದ ಪಡೆ ನಿರೀಕ್ಷಿತ ನಿರ್ವಹಣೆ ತೋರುತ್ತಿಲ್ಲ. ಬೌಲಿಂಗ್‌ನಲ್ಲಿ ಪ್ಯಾಟ್ ಕಮ್ಮಿನ್ಸ್, ಕನ್ನಡಿಗ ಪ್ರಸಿದ್ಧ ಕೃಷ್ಣ, ದುಬಾರಿಯಾಗುತ್ತಿದ್ದರೆ, ಮಿಸ್ಟ್ರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಇದುವರೆಗೂ ಅಷ್ಟೊಂದು ಪರಿಣಾಮಕಾರಿ ಆಗಿಲ್ಲ.

ರಾಯಲ್ಸ್‌ಗೆ ಹ್ಯಾಟ್ರಿಕ್ ಸೋಲಿನ ಭಯ

ಆರ್‌ಸಿಬಿ ಎದುರು 10 ವಿಕೆಟ್‌ಗಳಿಂದ ಸೋತು ಮುಖಭಂಗಕ್ಕೀಡಾಗಿರುವ ರಾಜಸ್ಥಾನ ರಾಯಲ್ಸ್ ತಂಡ ಇದುವರೆಗೂ ಆಡಿರುವ 4 ಪಂದ್ಯಗಳಿಂದ ಏಕೈಕ ಗೆಲುವಷ್ಟೇ ಸಾಧಿಸಿದೆ. ತನ್ನ 2ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿತ್ತು. ಜೋಸ್ ಬಟ್ಲರ್, ಮನನ್ ವೋಹ್ರಾ ಡೇವಿಡ್ ಮಿಲ್ಲರ್, ಕ್ರೀಸ್ ಮಾರಿಸ್ ಒಳಗೊಂಡ ಬ್ಯಾಟಿಂಗ್ ಪಡೆ ಗಣನೀಯ ವೈಲ್ಯ ಅನುಭವಿಸಿದೆ. ಇಂಗ್ಲೆಂಡ್ ಆಟಗಾರರಾದ ಆರ್ಚರ್, ಬೆನ್ ಸ್ಟೋಕ್ಸ್ ಅಲಭ್ಯತೆ ತಂಡವನ್ನು ಕಾಡುತ್ತಿದೆ. ತಂಡದಿಂದ ಸಂಘಟಿತ ನಿರ್ವಹಣೆ ಬರಬೇಕಿದೆ. ಜೋಸ್ ಬಟ್ಲರ್‌ಗೆ ಸೂಕ್ತ ಆರಂಭಿಕನ ಕೊರತೆ ಕಾಡುತ್ತಿದೆ. ಮನನ್ ವೋಹ್ರಾ ಬದಲಿಗೆ ಯುವ ಆಟಗಾರ ಯಶಸ್ವಿ ಜೈಸ್ವಾಲ್‌ಗೆ ಅವಕಾಶ ನೀಡಬಹುದು.

ಟೀಮ್ ನ್ಯೂಸ್:

ರಾಜಸ್ಥಾನ: ಸತತವಾಗಿ ವೈಫಲ್ಯ ಅನುಭವಿಸುತ್ತಿರುವ ಮನನ್ ವೋಹ್ರಾ ಬದಲಿಗೆ ಯಶಸ್ವಿ ಜೈಸ್ವಾನ್‌ಗೆ ಅವಕಾಶ ನೀಡಬಹುದು. ಬೌಲಿಂಗ್‌ನಲ್ಲಿ ಶ್ರೇಯಸ್ ಗೋಪಾಲ್ ಬದಲಿಗೆ ವೇಗಿ ಜೈದೇವ್ ಉನಾದ್ಕತ್ ಅಥವಾ ಕಾರ್ತಿಕ್ ತ್ಯಾಗಿ ಸ್ಥಾನ ಪಡೆಯಬಹುದು. ಉಳಿದಂತೆ ಹೆಚ್ಚಿನ ಬದಲಾವಣೆ ನಿರೀಕ್ಷಿಸುವಂತಿಲ್ಲ.

ಕಳೆದ ಪಂದ್ಯ: ಆರ್‌ಸಿಬಿ ಎದುರು 10 ವಿಕೆಟ್ ಸೋಲು

-----------

ಕೆಕೆಆರ್: ತಂಡದಲ್ಲಿ ಕೆಲವೊಂದು ಬದಲಾವಣೆ ಕಂಡರೂ ಅಚ್ಚರಿಯಿಲ್ಲ. ಕಮಲೇಶ್ ನಾಗರಕೋಟಿ ಬದಲಿಗೆ ಶಿವಂ ಮಾವಿ, ವರುಣ್ ಚಕ್ರವರ್ತಿ ಬದಲಿಗೆ ಕುಲದೀಪ್ ಯಾದವ್‌ಗೆ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗಬಹುದು.

ಕಳೆದ ಪಂದ್ಯ: ಸಿಎಸ್‌ಕೆ ಎದುರು 18 ರನ್ ಸೋಲು

-----------

ಮುಖಾಮುಖಿ: 22, ಕೆಕೆಆರ್: 12, ರಾಜಸ್ಥಾನ: 10

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ಆರಂಭ: ರಾತ್ರಿ 7.30ಕ್ಕೆ

ಕೆಕೆಆರ್, ರಾಜಸ್ಥಾನ ರಾಯಲ್ಸ್, ಐಪಿಎಲ್-14, ಕ್ರಿಕೆಟ್, ಟಿ20

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net