

ನವದೆಹಲಿ: ರಾಜಸ್ಥಾನ ರಾಯಲ್ಸ್ ತಂಡ ಚೊಚ್ಚಲ ಆವೃತ್ತಿಯ ಟೇಕ್ವಾಂಡೊ ಪ್ರೀಮಿಯರ್ ಲೀಗ್ನಲ್ಲಿ (ಟಿಪಿಎಲ್) ಚಾಂಪಿಯನ್ ಪಟ್ಟವೇರಿದೆ. ಭಾನುವಾರ ರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ರಾಜಸ್ಥಾನ ತಂಡ ಡೆಲ್ಲಿ ವಾರಿಯರ್ಸ್ ವಿರುದ್ಧ 2-1ರಿಂದ ಗೆಲುವು ದಾಖಲಿಸಿತು.
ಕೋಚ್ ಅಬ್ರಾರ್ ಖಾನ್ ಮಾರ್ಗದರ್ಶನದ ರಾಜಸ್ಥಾನ ತಂಡವನ್ನು ಹರಿಯಾಣದ ಸೌರವ್ ಮುನ್ನಡೆಸಿದರು. ಸೆಮಿಫೈನಲ್ನಲ್ಲಿ ರಾಜಸ್ಥಾನ ಗುಜರಾತ್ ಥಂಡರ್ಸ್ ಎದುರು 2-1ರಿಂದ ಗೆದ್ದರೆ, ಡೆಲ್ಲಿ ತಂಡ ಪಂಜಾಬ್ ರಾಯಲ್ಸ್ ವಿರುದ್ಧ 2-1ರಿಂದ ಜಯಿಸಿತು.
ಒಟ್ಟು 12 ತಂಡಗಳು ಭಾಗವಹಿಸಿದ್ದ ಟೂರ್ನಿಯಲ್ಲಿ ಬೆಂಗಳೂರು ನಿಂಜಾಸ್ ತಂಡ ಕ್ವಾರ್ಟರ್ಫೈನಲ್ನಲ್ಲಿ ನಿರಾಸೆ ಅನುಭವಿಸಿತು. ಗುಂಪು ಹಂತದಲ್ಲಿ ಉತ್ತಮ ನಿರ್ವಹಣೆ ತೋರಿದ ಬೆಂಗಳೂರು ತಂಡ ನಾಕೌಟ್ ಪಂದ್ಯದಲ್ಲಿ ಪಂಜಾಬ್ ರಾಯಲ್ಸ್ ಎದುರು 1-2ರಿಂದ ಪರಾಭವಗೊಂಡಿತು.
ಐಪಿಎಲ್ ಮಾದರಿಯ ಟೂರ್ನಿಯಲ್ಲಿ ಸೆಲೆಬ್ರಿಟಿಗಳು ಮತ್ತು ಉದ್ಯಮಿಗಳು ತಂಡಗಳ ಮಾಲೀಕತ್ವ ಹೊಂದಿದ್ದಾರೆ. ಸದ್ಯದಲ್ಲೇ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಪ್ರತ್ಯೇಕ ಟಿಪಿಎಲ್ ಆರಂಭಗೊಳ್ಳಲಿದೆ. ಅದಕ್ಕೆ ಮುನ್ನ ಅಂತಾರಾಷ್ಟ್ರೀಯ ಆವೃತ್ತಿಯೂ ಆಯೋಜನೆಗೊಳ್ಳಲಿದೆ.