ಕರ್ನಾಟಕ-ರೈಲ್ವೇಸ್ ಪಂದ್ಯಕ್ಕೆ ಮಳೆ ಕಾಟ; ಎರಡನೇ ದಿನ ಬರೀ 23 ಓವರ್​ ಆಟ

Railwas 28 Jan 20
Published on

ನವದೆಹಲಿ: ಎಂಟು ಬಾರಿಯ ಚಾಂಪಿಯನ್ ಕರ್ನಾಟಕ ಹಾಗೂ ರೈಲ್ವೇಸ್ ನಡುವಿನ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯ ಪಂದ್ಯದ ಎರಡನೇ ದಿನದಾಟಕ್ಕೆ ಮಳೆ ಅಡ್ಡಿಯುಂಟು ಮಾಡಿತು. ಸೋಮವಾರ ರಾತ್ರಿ ಬಿದ್ದ ಮಳೆಯಿಂದಾಗಿ ಔಟ್​ಫೀಲ್ಡ್ ಸಂಪೂರ್ಣ ತೇವಾಂಶದಿಂದ ಕೂಡಿತ್ತು. ಜತೆಗೆ ಮಂದ ಬೆಳಕು ಕೂಡ ದಿನದಾಟ ಆರಂಭಿಸಲು ಅಡ್ಡಿಯಾಯಿತು. ಎರಡನೇ ದಿನದಾಟದ ಮೊದಲ ಎರಡು ಅವಧಿಯ ಆಟ ರದ್ದುಗೊಂಡಿತು.

ದಿನದಾಟದಲ್ಲಿ 23 ಓವರ್​ಗಳ ಆಟವಷ್ಟೇ ನಡೆಯಿತು. ಕಾರ್ನೆಲ್ ಸಿಂಗ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯ ಅಂತಿಮ ಅವಧಿಯಲ್ಲಿ ಆರಂಭಗೊಂಡಿತು. 6 ವಿಕೆಟ್​ಗೆ 98 ರನ್​ಗಳಿಂದ ಇನಿಂಗ್ಸ್ ಆರಂಭಿಸಿದ ರೈಲ್ವೇಸ್ ತಂಡ ದಿನದಾಟದ ಅಂತ್ಯಕ್ಕೆ 7 ವಿಕೆಟ್​ಗೆ 160 ರನ್​ಗಳಿಸಿತು. ಕ್ರಮವಾಗಿ 32, 29 ರನ್​ಗಳಿಂದ ದಿನದಾಟ ಆರಂಭಿಸಿದ ನಾಯಕ ಅರಿಂಧಮ್ ಘೋಷ್ ಹಾಗೂ ಅವಿನಾಶ್ ಯಾದವ್ ಜೋಡಿ ಮತ್ತೆ 44 ರನ್ ಪೇರಿಸಿತು. ಅವಿನಾಶ್ ಯಾದವ್ (62) ರೋನಿತ್ ಮೋರೆಗೆ ವಿಕೆಟ್ ಒಪ್ಪಿಸಿದರು. ಈ ಜೋಡಿ 7ನೇ ವಿಕೆಟ್​ಗೆ ಒಟ್ಟಾರೆ 97 ರನ್ ಕಲೆಹಾಕಿತು. ಮಂದಬೆಳಕಿನಿಂದಾಗಿ ದಿನದಾಟವನ್ನು ಬೇಗನೆ ಸ್ಥಗಿತಗೊಳಿಸಲಾಯಿತು.

ರೈಲ್ವೇಸ್ ಪ್ರಥಮ ಇನಿಂಗ್ಸ್:

72 ಓವರ್​ಗಳಲ್ಲಿ 7 ವಿಕೆಟ್​ಗೆ 160 (ಸೋಮವಾರ 6 ವಿಕೆಟ್​ಗೆ 98) ಅರಿಂದಮ್ ಘೋಷ್ ಬ್ಯಾಟಿಂಗ್ 50 ಅವಿನಾಶ್ ಯಾದವ್ ಸಿ ದೇವದತ್ ಬಿ ರೋನಿತ್ 62 ಅಮಿತ್ ಮಿಶ್ರಾ ಬ್ಯಾಟಿಂಗ್ 10 ಇತರ: 6. ವಿಕೆಟ್ ಪತನ: 6-45, 7-142. ಬೌಲಿಂಗ್: ಅಭಿಮನ್ಯು ಮಿಥುನ್ 13-5-38-2, ಪ್ರತೀಕ್ ಜೈನ್ 19-8-29-4, ರೋನಿತ್ ಮೋರೆ 11-4-21-1, ಕೆ. ಗೌತಮ್ 20-7-39-0, ಶ್ರೇಯಸ್ ಗೋಪಾಲ್ 9-0-30-0.

ಕೆಬಿ ಪವನ್, ಅಮಿತ್ ವರ್ಮ ಶತಕ ಸಾಧನೆ

ಮಿಜೋರಾಂ ತಂಡದ ನಾಯಕ ಕನ್ನಡಿಗ ಕೆಬಿ ಪವನ್ (129*) ನಾಗಾಲ್ಯಾಂಡ್ ಎದುರು ಹಾಗೂ ಕರ್ನಾಟಕದ ಮತ್ತೋರ್ವ ಮಾಜಿ ಆಟಗಾರ ಹಾಗೂ ಗೋವಾ ತಂಡದ ನಾಯಕ ಅಮಿತ್ ವರ್ಮ (122ರನ್, 118 ಎಸೆತ, 4 ಬೌಂಡರಿ, 4 ಸಿಕ್ಸರ್) ಅರುಣಾಚಲ ಪ್ರದೇಶ ಎದುರು ಶತಕ ಸಿಡಿಸಿ ಸಂಭ್ರಮಿಸಿದರು. ಧರ್ಮಶಾಲಾದಲ್ಲಿ ನಡೆಯುತ್ತಿರುವ ಮುಂಬೈ ಹಾಗೂ ಹಿಮಾಚಲ ಪ್ರದೇಶ ನಡುವಿನ ಪಂದ್ಯದ ಎರಡನೇ ದಿನದಾಟ ಮಳೆಗೆ ಆಹುತಿಯಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net