

ಪ್ಯಾರಿಸ್: ಅಭೂತಪೂರ್ವ ಹೋರಾಟದೊಂದಿಗೆ ಪೋಡಿಯಂ ಏರಿದ ಭಾರತದ ಶೂಟರ್ ಸ್ವಪ್ನಿಲ್ ಕುಸಾಲೆ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ 3ನೇ ಪದಕ ಗೆದ್ದುಕೊಟ್ಟಿದ್ದಾರೆ. ಪುರುಷರ 50 ಮೀ. ರೈಫಲ್ 3 ಪೊಸಿಷನ್ ಶೂಟಿಂಗ್ನಲ್ಲಿ ಮಹಾರಾಷ್ಟ್ರದ 28 ವರ್ಷದ ಸ್ವಪ್ನಿಲ್ ಕುಸಾಲೆ ಕಂಚಿನ ಪದಕಕ್ಕೆ ಗುರಿ ಇಟ್ಟರು. ಇದರೊಂದಿಗೆ ಒಲಿಂಪಿಕ್ಸ್ನಲ್ಲಿ ಈ ವಿಭಾಗದಲ್ಲಿ ಪದಕ ಗೆದ್ದ ಮೊದಲ ಭಾರತೀಯರೆನಿಸಿದರು ಮತ್ತು ಒಲಿಂಪಿಕ್ಸ್ ಪದಕ ವಿಜೇತ ಭಾರತದ 3ನೇ ರೈಫಲ್ ಶೂಟರ್ ಎಂಬ ಇತಿಹಾಸ ಬರೆದರು. ಸ್ವಪ್ನಿಲ್ ಕುಸಾಲೆ 2015ರಿಂದ ಪುಣೆಯಲ್ಲಿ ಭಾರತೀಯ ರೈಲ್ವೇಸ್ನ ಟಿಕೆಟ್ ಕಲೆಕ್ಟರ್ ಆಗಿದ್ದಾರೆ. ಇದರ ದುಡಿಮೆಯಿಂದಲೇ ಅವರು ತನ್ನ ಮೊದಲ ರೈಲ್ ಖರೀದಿಸಿದ್ದರು. ರೈಲ್ವೇ ಟಿಕೆಟ್ ಕಲೆಕ್ಟರ್ ಆಗಿದ್ದ ಕ್ರಿಕೆಟ್ ತಾರೆ ಎಂಎಸ್ ಧೋನಿ ಅವರೇ ಸ್ವಪ್ನಿಲ್ಗೆ ಸ್ಫೂರ್ತಿ.
"ನಾನು ಶೂಟಿಂಗ್ ಕ್ರೀಡೆಯಲ್ಲಿ ಯಾರನ್ನೂ ಆದರ್ಶವಾಗಿಟ್ಟುಕೊಂಡಿಲ್ಲ. ನನಗೆ ಧೋನಿ ಮೇಲೆ ಅಪಾರ ಗೌರವ. ಧೋನಿ ಅವರಂತೆ ತಾಳ್ಮೆಯಿಂದಿರಲು ಪ್ರಯತ್ನಿಸುವೆ. ಧೋನಿ ಅವರಂತೆ ಟಿಕೆಟ್ ಕಲೆಕ್ಟರ್ ಆಗಿ ಸಾಧನೆ ಮಾಡುವ ಕನಸು ಇಟ್ಟುಕೊಂಡಿದ್ದೆ' ಎಂದಿದ್ದಾರೆ ಸ್ವಪ್ನಿಲ್. ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಕಂಬಲವಾಡಿಯವರಾದ ಸ್ವಪ್ನಿಲ್, 2009ರಲ್ಲಿ ಮಹಾರಾಷ್ಟ್ರ ಸರ್ಕಾರದ ಕ್ರೀಡಾ ಪ್ರಭೋದಿನಿ ಯೋಜನೆಯಡಿ ಕ್ರೀಡಾ ತರಬೇತಿಗೆ ಆಯ್ಕೆಯಾಗಿದ್ದರು. 14ನೇ ವಯಸ್ಸಿನಲ್ಲೇ ಕಠಿಣ ದೈಹಿಕ ತರಬೇತಿ ಪಡೆದ ಬಳಿಕ ಶೂಟಿಂಗ್ ಕ್ರೀಡೆಯನ್ನು ಆಯ್ದುಕೊಂಡಿದ್ದರು. ಅವರ ತಂದೆ ಮತ್ತು ಸಹೋದರ ಇಬ್ಬರೂ ಅಧ್ಯಾಪಕರಾಗಿದ್ದರೆ, ತಾಯಿ ಕಂಬಲವಾಡಿ ಹಳ್ಳಿಯ ಸರಪಂಚ್ ಆಗಿದ್ದಾರೆ.
"ನಾನೀಗ ರೈಲ್ವೇಸ್ ಕೆಲಸಕ್ಕೆ ಹೋಗುತ್ತಿಲ್ಲ. ಭಾರತೀಯ ರೈಲ್ವೇಸ್ ನನಗೆ 365 ದಿನಗಳ ರಜೆ ನೀಡಿದೆ. ನನ್ನ ವೈಯಕ್ತಿಕ ಕೋಚ್ ದೀಪಾಲಿ ದೇಶಪಾಂಡೆ ತಾಯಿ ಇದ್ದಂತೆ. ನನಗೆ ಬೇಷರತ್ ಬೆಂಬಲ ನೀಡುತ್ತಾರೆ' ಎಂದು ಸ್ವಪ್ನಿಲ್ ತಿಳಿಸಿದ್ದಾರೆ. ಗುರುವಾರ ನಡೆದ ಫೈನಲ್ ಸ್ಪರ್ಧೆಯಲ್ಲಿ ಸ್ವಪ್ನಿಲ್ ಒಟ್ಟು 451.4 ಅಂಕ ಗಳಿಸುವ ಮೂಲಕ ಕಂಚಿನ ಪದಕಕ್ಕೆ ಕೊರಳೊಡ್ಡಿದರು. ಅಗ್ರ 8 ಶೂಟರ್ಗಳ ಫೈನಲ್ನಲ್ಲಿ ಸ್ವಪ್ನಿಲ್ ಅಂತಿಮ ಸುತ್ತಿಗೆ ಮುನ್ನ 5ನೇ ಸ್ಥಾನದಲ್ಲಿದ್ದರು. ಬಳಿಕ ಅಂತಿಮ ಹಂತದಲ್ಲಿ ಭರ್ಜರಿ ನಿರ್ವಹಣೆ ತೋರುವ ಮೂಲಕ 3ನೇ ಸ್ಥಾನಕ್ಕೇರಿ ಪದಕ ಗೆದ್ದುಕೊಂಡರು.
ಇದು ಭಾರತಕ್ಕೆ ಅಚ್ಚರಿಯ ಪದಕವಾಗಿದೆ. ಯಾಕೆಂದರೆ ಈ ಸ್ಪರ್ಧೆಯಲ್ಲಿ ಸ್ವಪ್ನಿಲ್ ಕರಿಗುದುರೆಯಾಗಿದ್ದರು. ಈ ಸ್ಪರ್ಧೆಯಲ್ಲಿದ್ದ ಮತ್ತೋರ್ವ ಶೂಟರ್ ಐಶ್ವರಿ ಪ್ರತಾಪ್ ತೋಮರ್ ಅವರೇ ಭಾರತದ ಪದಕ ಫೇವರಿಟ್ ಎನಿಸಿದ್ದರು. ಆದರೆ ಐಶ್ವರಿ ಅರ್ಹತಾ ಸುತ್ತಿನಲ್ಲಿ 11ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರೆ, ಸ್ವಪ್ನಿಲ್ 7ನೇ ಸ್ಥಾನದೊಂದಿಗೆ ಫೈನಲ್ಗೇರಿದ್ದರು.
ಮಹಾರಾಷ್ಟ್ರ ಸರ್ಕಾರದ ಕ್ರೀಡಾ ಪ್ರಭೋದಿನಿ ಯೋಜನೆಯಡಿಯಲ್ಲಿ ಬೆಳಕಿಗೆ ಬಂದಿದ್ದ ಸ್ವಪ್ನಿಲ್ ಕುಸಾಲೆ ಫೈನಲ್ನ ಮೊದಲ ಹಂತದಲ್ಲಿ (ಮಂಡಿಯೂರಿದ ಭಂಗಿ) ಕ್ರಮವಾಗಿ 50.8, 50.9, 51.6 ಅಂಕ ಗಳಿಸಿದರೆ, 2ನೇ ಹಂತದಲ್ಲಿ (ಕೆಳಮುಖವಾಗಿ ಮಲಗಿದ ಭಂಗಿ) ಕ್ರಮವಾಗಿ 52.7, 52.2, 51.9 ಅಂಕ ಗಳಿಸಿದರು. ನಿರ್ಣಾಯಕ ಕೊನೇ ಹಂತದಲ್ಲಿ (ನಿಂತ ಭಂಗಿ) 51.1, 50.4 ಅಂಕ ಗಳಿಸಿದರು. ಬಳಿಕ ನಿರ್ಣಾಯಕ ಎಲಿಮಿನೇಷನ್ ಸುತ್ತಿನಲ್ಲಿ ಕ್ರಮವಾಗಿ 10.5, 9.4, 9.9, 10.0 ಅಂಕ ಗಳಿಸಿ 3ನೇ ಸ್ಥಾನ ಕಾಯ್ದುಕೊಂಡರು. ಚೀನಾದ ಯುಕುನ್ ಲಿಯು (463.6) ಮತ್ತು ಯೂಕ್ರೇನ್ನ ಸೆರ್ಹಿಯ್ ಕುಲಿಶ್ (461.3) ಬೆಳ್ಳಿ ಪದಕ ಜಯಿಸಿದರು. ಮೊದಲ 2 ಸುತ್ತುಗಳಲ್ಲಿ ಅಗ್ರಸ್ಥಾನದಲ್ಲಿದ್ದ ನಾರ್ವೆಯ ಹೆಗ್ ಜಾನ್ ಹೆರ್ಮನ್ (430.2) ಅಂತಿಮವಾಗಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟರೆ, ಮತ್ತೋವ್ ಪ್ರಮುಖ ಸ್ಪರ್ಧಿ ಜೆಕ್ ಗಣರಾಜ್ಯದ ಪ್ರಿರ್ವಟ್ಸ್ಕಿ ಜಿರಿ (440.7) 4ನೇ ಸ್ಥಾನದೊಂದಿಗೆ ನಿರಾಸೆ ಅನುಭವಿಸಿದರು.
ಖಾಲಿ ಹೊಟ್ಟೆಯಲ್ಲಿ ಸ್ಪರ್ಧೆ!
ಗುರುವಾರ ಫೈನಲ್ ಸ್ಪರ್ಧೆಗೆ ಏನನ್ನೂ ತಿನ್ನದೆ ಖಾಲಿ ಹೊಟ್ಟೆಯಲ್ಲಿ ಬಂದಿದ್ದೆ. ನನ್ನ ಹೊಟ್ಟೆಯಲ್ಲಿ ತಳಮಳವಾಗುತ್ತಿತ್ತು. ಹೀಗಾಗಿ ಕೇವಲ ಬ್ಲಾ$್ಯಕ್ ಟೀ ಮಾತ್ರ ಕುಡಿದಿದ್ದೆ ಎಂದು ಸ್ವಪ್ನಿಲ್ ಪದಕ ಗೆಲುವಿನ ಬಳಿಕ ಹೇಳಿದರು. ಪ್ರತಿ ಸ್ಪರ್ಧೆಯ ಹಿಂದಿನ ದಿನ ರಾತ್ರಿ ನಾನು ದೇವರನ್ನು ಪ್ರಾರ್ಥಿಸುತ್ತೇನೆ ಎಂದೂ ಹೇಳಿದರು. "ಇಂದು ನನ್ನ ಎದೆಬಡಿತ ಹೆಚ್ಚಾಗಿತ್ತು. ನಾನು ನನ್ನ ಉಸಿರಾಟವನ್ನು ನಿಯಂತ್ರಿಸಲಷ್ಟೇ ಪ್ರಯತ್ನಿಸಿದೆ. ಬೇರೇನೂ ಭಿನ್ನವಾದ ಪ್ರಯತ್ನಕ್ಕೆ ಕೈಹಾಕಲಿಲ್ಲ' ಎಂದು ಸ್ವಪ್ನಿಲ್ ತಿಳಿಸಿದರು. ನಾನು ಸ್ಕೋರ್ಬೋರ್ಡ್ ನೋಡಲೇ ಇಲ್ಲ. ಶೂಟಿಂಗ್ ಮಾಡುವಾಗ ನನ್ನ ಹಲವು ವರ್ಷಗಳ ಕಠಿಣ ಪರಿಶ್ರಮವನ್ನಷ್ಟೇ ತಲೆಯಲ್ಲಿಟ್ಟುಕೊಂಡಿದ್ದೆ. ಸ್ಕೋರ್ಗಳ ಘೋಷಣೆ ನನ್ನ ಕಿವಿಗೆ ಬೀಳುತ್ತಿದ್ದರೂ, ನಾನದನ್ನು ರ್ನಿಲಸುತ್ತಿದ್ದೆ. ಭಾರತೀಯ ಪ್ರೇಕ್ಷಕರು ನನಗಾಗಿ ಉದ್ಗೋಷ ಹಾಕಬೇಕೆಂದು ಮಾತ್ರ ಬಯಸಿದ್ದೆ ಎಂದು ಸ್ವಪ್ನಿಲ್ ಕುಸಾಲೆ ಹೇಳಿದ್ದಾರೆ.