

ನವದೆಹಲಿ: ನಿನ್ನೆ (ಅ.24) ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತ ರೋಚಕ ಗೆಲುವು ದಾಖಲಿಸಿದ್ದು, ಹಲವು ಭಾವುಕ ಕ್ಷಣಗಳಿಗೆ ಸಾಕ್ಷಿಯಾಯಿತು. ಅದ್ಭುತ ಆಟವಾಡಿದ ವಿರಾಟ್ ಕೊಹ್ಲಿ ಜಯದ ಬೆನ್ನಲ್ಲೇ ಮೈದಾನದಲ್ಲೇ ಭಾವುಕರಾದ ಕ್ಷಣ ಕ್ರೀಡಾಭಿಮಾನಿಗಳ ಹೃದಯ ತಟ್ಟಿತು. ಇನ್ನೊಂದೆಡೆ ಟೀಮ್ ಇಂಡಿಯಾದ ಮುಖ್ಯ ತರಬೇತುದಾರ ರಾಹುಲ್ ಡ್ರಾವಿಡ್ ಅವರು ಗೆಲುವನ್ನು ಸಂಭ್ರಮಿಸಿದ ವಿಡಿಯೋ ಇದೀಗ ನೆಟ್ಟಿಗರ ಗಮನ ಸೆಳೆದಿದೆ.
ಕೊನೆಯ ಎಸೆತದಲ್ಲಿ ರವಿಚಂದ್ರನ್ ಅಶ್ವಿನ್ ಅವರು ಬಾಲನ್ನು ಬೌಂಡರಿಗೆ ಅಟ್ಟುವ ಮೂಲಕ ಗೆಲುವನ್ನು ಖಾತರಿ ಪಡಿಸುತ್ತಿದ್ದಂತೆ ಡಗ್ಔಟ್ನಲ್ಲಿದ್ದ ರಾಹುಲ್ ಡ್ರಾವಿಡ್ ಅವರು ಎದ್ದುನಿಂತು ಸಂಭ್ರಮಿಸಿದ್ದು, ವಿಶೇಷವಾಗಿತ್ತು. ಏಕೆಂದರೆ, ಶಾಂತ ಸ್ವಭಾವದ ರಾಹುಲ್, ತುಂಬಾ ಆಕ್ರೋಶಭರಿತರಾಗಿ ಸಂಭ್ರಮಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರ ಮನ ಗೆದ್ದಿದೆ.
ನಿನ್ನೆ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ರೋಹಿತ್ ಶರ್ಮಾ ಪಡೆ, ಎದುರಾಳಿ ಪಾಕಿಸ್ತಾನ ತಂಡದ 8 ವಿಕೆಟ್ ಕಬಳಿಸಿ 159 ರನ್ಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. ಬಳಿಕ 160ರನ್ಗಳ ಗುರಿ ಬೆನ್ನು ಹತ್ತಿದ ಭಾರತ, ಕೇವಲ 31 ರನ್ಗೆ ಪ್ರಮುಖ 4 ವಿಕೆಟ್ ಕಳೆದುಕೊಳ್ಳುವ ಮೂಲಕ ಸೋಲಿನ ದವಡೆಗೆ ಸಿಲುಕಿತು. ಆದರೆ, ಈ ಹಂತದಲ್ಲಿ ವಿರಾಟ್ ಕೊಹ್ಲಿ ಜೊತೆಯಾದ ಹಾರ್ದಿಕ್ ಪಾಂಡ್ಯ ನೂರು ರನ್ಗಳ ಜೊತೆಯಾಟ ಮೂಲಕ ಪಂದ್ಯವನ್ನು ಮತ್ತೆ ಭಾರತ ಕಡೆಗೆ ತಿರುಗಿಸಿದರು.
ವಿರಾಟ್ ಕೊಹ್ಲಿ (53 ಎಸೆತಗಳಲ್ಲಿ ಅಜೇಯ 82) ಮತ್ತು ಹಾರ್ದಿಕ್ ಪಾಂಡ್ಯ (40) ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಟೀಮ್ ಇಂಡಿಯಾ ಅದ್ಭುತ ಗೆಲುವು ದಾಖಲಿಸಿತು. ಈ ಮೂಲಕ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಕಂಡಿದೆ. (ಏಜೆನ್ಸೀಸ್)