VIDEO: ನೆಟ್ಸ್‌ನಲ್ಲಿ ಆಟಗಾರರಿಗೆ ರಾಹುಲ್ ದ್ರಾವಿಡ್ ನೀಡುವ ತರಬೇತಿ ಹೇಗಿದೆ ಗೊತ್ತೇ?

rahul dravid for web
Published on

ಜೈಪುರ: ಭಾರತ ತಂಡದ ನೂತನ ಕೋಚ್ ರಾಹುಲ್ ದ್ರಾವಿಡ್ ಹಾಗೂ ಟಿ20 ತಂಡದ ನೂತನ ನಾಯಕ ರೋಹಿತ್ ಶರ್ಮ ಜೋಡಿ ಮೋಡಿ ಮಾರಲು ರೆಡಿಯಾಗಿದೆ. ಈ ಜೋಡಿಗೆ ಬುಧವಾರದಿಂದ ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯೇ ಮೊದಲ ಸವಾಲಾಗಿದೆ. ಟಿ20 ವಿಶ್ವಕಪ್‌ನಲ್ಲಿ ನಿರಾಸೆ ಅನುಭವಿಸಿದ ಟೀಮ್ ಇಂಡಿಯಾ, ಇದೀಗ ಹೊಸ ಹುಮ್ಮಸ್ಸಿನಿಂದ ಮತ್ತೊಂದು ಸರಣಿಗೆ ಸಿದ್ಧಗೊಳ್ಳುತ್ತಿದೆ. ನೂತನ ಕೋಚ್ ರಾಹುಲ್ ಎಲ್ಲ ಆಟಗಾರರಿಗೆ ಪ್ರತ್ಯೇಕವಾಗಿ ಅಗತ್ಯ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಮಂಗಳವಾರ ನೆಟ್ಸ್‌ನಲ್ಲಿ ಖುದ್ದು ರಾಹುಲ್ ದ್ರಾವಿಡ್ ಬ್ಯಾಟರ್‌ಗಳಿಗೆ ಥ್ರೋ ಎಸೆಯುವ ಮೂಲಕ ಗಮನಸೆಳೆದಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದ್ರಾವಿಡ್ ಆಟಗಾರರಿಗೆ ಥ್ರೋ ಎಸೆಯುತ್ತಿರುವ ವಿಡಿಯೋವೊಂದರನ್ನು ಬಿಸಿಸಿಐ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ.

ದ್ರಾವಿಡ್ ಮಾರ್ಗದರ್ಶನದಲ್ಲಿ ಟೀಮ್ ಇಂಡಿಯಾ ಯಾವ ರೀತಿ ನಿರ್ವಹಣೆ ತೋರಲಿದೆ ಎಂಬುದನ್ನು ನೋಡಲು ಇಡೀ ಭಾರತೀಯ ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಮುಂದಿನ ವರ್ಷದ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಗೆ ಸಿದ್ಧತೆ ಕೈಗೊಳ್ಳುವ ದೃಷ್ಟಿಯಿಂದ ಈ ಸರಣಿ ಮಹತ್ವ ಪಡೆದಿದೆ. ತಂಡದ ಹೊಸ ಕಾಂಬೀನೇಷನ್‌ನಲ್ಲಿ ಬಲಿಷ್ಠ ತಂಡವಾಗಿ ರೂಪುಗೊಳ್ಳಬೇಕಿದೆ.

ಭಾರತ ಹಾಗೂ ನ್ಯೂಜಿಲೆಂಡ್ ನಡುವೆ 3 ಟಿ20 ಪಂದ್ಯಗಳ ಸರಣಿ, 2 ಟೆಸ್ಟ್ ಪಂದ್ಯಗಳ ಸರಣಿ ನಡೆಯಲಿದೆ. ನವೆಂಬರ್ 25 ರಿಂದ 29 ರವರೆಗೆ ಕಾನ್ಪುರದಲ್ಲಿ ಮೊದಲ ಟೆಸ್ಟ್ ಹಾಗೂ ಡಿಸೆಂಬರ್ 3 ರಿಂದ 7 ರವರೆಗೆ ಮುಂಬೈನಲ್ಲಿ ಎರಡನೇ ಪಂದ್ಯ ನಡೆಯಲಿದೆ. ಮತ್ತೊಂದೆಡೆ, ಟೆಸ್ಟ್ ಸರಣಿಗೆ ಸಿದ್ಧತೆ ಕೈಗೊಳ್ಳುವ ಸಲುವಾಗಿ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಟಿ20 ಸರಣಿಯಿಂದ ಹಿಂದೆ ಸರಿದಿದ್ದು, ಟಿಮ್ ಸೌಥಿ ತಂಡ ಮುನ್ನಡೆಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net