ಮಹಾರಾಜ ಟ್ರೋಫಿ ಆಟಗಾರರ ಹರಾಜಿನಲ್ಲಿ ಸೇಲಾಗದ ದಿಗ್ಗಜ ಬ್ಯಾಟರ್‌ನ ಪುತ್ರ!

darvaid
Published on

ಬೆಂಗಳೂರು: ಮುಂಬರುವ 2ನೇ ಆವೃತ್ತಿಯ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಟೂರ್ನಿಗೆ ಪೂರ್ವಭಾವಿಯಾಗಿ ಚಿನ್ನಸ್ವಾಮಿ ಕ್ರೀಡಾಂಗಣದ ಆವರಣದಲ್ಲಿ ನಡೆದ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಸ್ಟಾರ್ ಬ್ಯಾಟರ್‌ಗಳ ಖರೀದಿಗೆ ಭಾರಿ ಪೈಪೋಟಿ ನಡೆಯಿತು. ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ಪರ ಫಿನಿಷರ್ ಪಾತ್ರ ನಿರ್ವಹಿಸಿರುವ ಸ್ಫೋಟಕ ಬ್ಯಾಟರ್ ಅಭಿನವ್ ಮನೋಹರ್ ಟೂರ್ನಿಯ ಅತ್ಯಂತ ದುಬಾರಿ ಆಟಗಾರ ಎನಿಸುವ ಮೂಲಕ ದಾಖಲೆಯ 15 ಲಕ್ಷ ರೂಪಾಯಿಗೆ ನೂತನ ್ರಾಂಚೈಸಿ ಶಿವಮೊಗ್ಗ ಲಯನ್ಸ್ ತಂಡ ಸೇರಿದ್ದಾರೆ.

ಟೀಮ್ ಇಂಡಿಯಾದ ದಿಗ್ಗಜ ಬ್ಯಾಟರ್ ಹಾಗೂ ಹಾಲಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ದ್ರಾವಿಡ್ ಖರೀದಿಗೆ ಬಿಡ್ಡಿಂಗ್‌ನಲ್ಲಿ ಭಾಗವಹಿಸಿದ್ದ ಎಲ್ಲ ಆರು ್ರಾಂಚೈಸಿಗಳು ಆಸಕ್ತಿ ವಹಿಸಲಿಲ್ಲ. ಇದರಿಂದ ಸಮಿತ್ ದ್ರಾವಿಡ್ ನಿರಾಸೆ ಅನುಭವಿಸಿದರು. ಕೆಎಸ್‌ಸಿಎ ಟೂರ್ನಿಗಳಲ್ಲಿ ಮಿಂಚಿರುವ 17 ವರ್ಷದ ಸಮಿತ್ ಕೊನೆಯಲ್ಲಿ ಡಿ ಕೆಟಗರಿಯ ಆಟಗಾರರಾಗಿ ಹರಾಜಿನಲ್ಲಿ ಕಾಣಿಸಿಕೊಂಡರು. ಈ ಕೆಟಗರಿಯಲ್ಲಿ ಕೆಎಸ್‌ಸಿಎಯಲ್ಲಿ ಹೆಸರು ನೋಂದಾಯಿಸಿರುವ ಯುವ ಆಟಗಾರರು ಸ್ಥಾನ ಪಡೆದಿದ್ದರು. ಕೆಎಸ್‌ಸಿಎ ಹರಾಜು ಆಟಗಾರರ ಪಟ್ಟಿಯನ್ನು ಎ,ಬಿ,ಸಿ ಹಾಗೂ ಡಿ ಕೆಟಗರಿಯಲ್ಲಿ ವಿಂಗಡಿಸಿತ್ತು.

ಕಳೆದ ರಣಜಿ ಋತುವಿನಲ್ಲಿ ಕರ್ನಾಟಕ ತಂಡದಲ್ಲಿ ಸ್ಥಾನ ಪಡೆದಿದ್ದ ವಿಶಾಲ್ ಓನತ್‌ಗೂ ಬಿಡ್ ಸಲ್ಲಿಸಲು ಯಾವುದೇ ತಂಡ ಆಸಕ್ತಿ ತೋರಲಿಲ್ಲ. ವಿಶಾಲ್ ಬಿ ಕೆಟಗರಿಯಲ್ಲಿ ಸ್ಥಾನ ಪಡೆದಿದ್ದು, 1 ಲಕ್ಷ ರೂಪಾಯಿ ಮೂಲಬೆಲೆ ಹೊಂದಿದ್ದರು.

ಎಲ್ಲ 6 ತಂಡಗಳು ಗರಿಷ್ಠ 50 ಲಕ್ಷ ರೂ. ಬಜೆಟ್ ಮಿತಿಯೊಳಗೆ ಗರಿಷ್ಠ 18 ಆಟಗಾರರನ್ನು ಖರೀದಿಸಿದವು.ನಿರೂಪಕ ಚಾರು ಶರ್ಮ ಹರಾಜು ಪ್ರಕ್ರಿಯೆ ನಡೆಸಿಕೊಟ್ಟರು. ಟೂರ್ನಿಯು ಆಗಸ್ಟ್ 13ರಿಂದ 29ರವರೆಗೆ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದು, ಎಲ್ಲ ಪಂದ್ಯಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net