

ನವದೆಹಲಿ: ಟೀಮ್ ಇಂಡಿಯಾದ ಮಾಜಿ ಆಟಗಾರ ಯುವರಾಜ್ ಸಿಂಗ್ ಅವರ ಪತ್ನಿ ಹಜೆಲ್ ಕೀಚ್ ಗಂಡು ಮಗುವಿಗೆ ಜನ್ಮ ನೀಡಿದ್ದು, ಅಪ್ಪನಾದ ಖುಷಿಯನ್ನು ಯುವಿ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ನಿನ್ನೆ (ಜ.25) ಹಂಚಿಕೊಂಡಿದ್ದಾರೆ.
ಎಲ್ಲ ನನ್ನ ಅಭಿಮಾನಿಗಳು, ಕುಟುಂಬದ ಸದಸ್ಯರು ಮತ್ತು ಫ್ರೆಂಡ್ಸ್ ಜತೆಗೆ ಹಂಚಿಕೊಳ್ಳುವ ವಿಚಾರವೇನೆಂದರೆ, ಪತ್ನಿ ಹೆಜೆಲ್ ಮತ್ತು ನನಗೆ ದೇವರು ಗಂಡು ಮಗುವನ್ನು ಕರುಣಿಸಿದ್ದಾನೆ. ಇದಕ್ಕಾಗಿ ದೇವರಿಗೆ ಧನ್ಯವಾದಗಳು. ನಮ್ಮ ಮಗುವನ್ನು ಈ ಜಗತ್ತಿಗೆ ಸ್ವಾಗತಿಸುತ್ತಿದ್ದೇವೆ ಎಂದಿರುವ ಯುವಿ, ಕೊನೆಯಲ್ಲಿ ನಮ್ಮ ಗೌಪ್ಯತೆಯನ್ನು ಗೌರವಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಯುವಿ ಮಾಡಿರುವ ಪೋಸ್ಟ್ಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಮತ್ತು ಕ್ರಿಕೆಟ್ ಬಳಗದ ಅನೇಕ ಸದಸ್ಯರು ಅಭಿನಂದನೆಗಳ ಮಹಾಪೂರವನ್ನೇ ಹರಿಸಿದ್ದಾರೆ.
ಯುವಿ ಪತ್ನಿ ಹೆಜೆಲ್ ಕೂಡ ಪೋಸ್ಟ್ ಶೇರ್ ಮಾಡಿದ್ದು, ಅವರಿಗೂ ಅಭಿನಂದನೆಗಳ ಮಹಾಪೂರ ಹರಿದುಬಂದಿವೆ.
ಅಂದಹಾಗೆ ಯುವಿ ಮತ್ತು ಹೆಜೆಲ್ 2016 ನವೆಂಬರ್ 30ರಂದು ಮದುವೆಯಾದರು. (ಏಜೆನ್ಸೀಸ್)