ಡಿವೋರ್ಸ್​ ವದಂತಿಗೆ ಬ್ರೇಕ್​: 1 ತಿಂಗಳು ತವರಿಗೆ ಹೋಗ್ತೀನೆಂದು ಹೆಂಡ್ತಿ ಹೇಳಿದ್ದಕ್ಕೆ ಕುಣಿದು ಕುಪ್ಪಳಿಸಿದ ಚಹಾಲ್​

Dhanashree
Published on

ನವದೆಹಲಿ: ಕೆಲ ದಿನಗಳ ಹಿಂದೆ ತಾರಾ ದಂಪತಿಯಾದ ಕ್ರಿಕೆಟಿಗ ಯಜುವೇಂದ್ರ ಚಾಹಲ್​ ಮತ್ತು ಸೋಶಿಯಲ್​ ಮೀಡಿಯಾ ಸೆನ್ಷೆಷನಲ್​ ಸ್ಟಾರ್ ಧನಶ್ರೀ ವರ್ಮ ಅವರ ದಾಂಪತ್ಯ ಜೀವನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆ ಆಯಿತು. ಇಬ್ಬರ ಸಂಬಂಧದಲ್ಲಿ ಬಿರುಕು ಮೂಡಿದ್ದು, ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂಬ ವದಂತಿ ಜಾಲತಾಣದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿತು. ಇದೀಗ ಚಾಹಲ್​ ಮತ್ತು ಧನಶ್ರೀ ಅವರು ವಿಡಿಯೋ ಪೋಸ್ಟ್​ ಮಾಡುವ ಮೂಲಕ ವದಂತಿ ಹಬ್ಬಿಸಿದವರಿಗೆ ತಿರುಗೇಟು ನೀಡಿದ್ದಾರೆ.

ವಿಚ್ಛೇದನದ ವದಂತಿ ಹಬ್ಬಲು ಕಾರಣವೂ ಇದೆ. ಧನಶ್ರಿ ಅವರು ತಮ್ಮ ಇನ್​​ಸ್ಟಾಗ್ರಾಂ ಪ್ರೊಫೈಲ್​ನಲ್ಲಿದ್ದ ಚಾಹಲ್​ ಸರ್​ನೇಮ್​ ಅನ್ನು ತೆಗೆದುಹಾಕಿದ್ದಾರೆ. ಇಷ್ಟೇಅಲ್ಲದೆ, ಕೆಲ ದಿನಗಳ ಹಿಂದೆ ಚಾಹಲ್​, "ಹೊಸ ಜೀವನ ಆರಂಭ" ಎಂದು ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದರು. ಈ ಎರಡು ಸಂಗತಿಯಿಂದ ಡಿವೋರ್ಸ್​ ವದಂತಿ ಹಬ್ಬಿ, ಟ್ವಿಟರ್​ನಲ್ಲಿ ಟ್ರೆಂಡಿಂಗ್​ ಕೂಡ ಸೃಷ್ಟಿಯಾಗಿತ್ತು.

ವಿಡಿಯೋ ಮೂಲಕ ಸ್ಪಷ್ಟ ಸಂದೇಶ ರವಾನೆ

ಈಗಾಗಲೇ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡುವ ಮೂಲಕ ಇಬ್ಬರು ವದಂತಿಗೆ ತೆರೆ ಎಳೆದಿದ್ದಾರೆ. ನಮ್ಮ ಸಂಬಂಧ ಕುರಿತಾದ ಯಾವುದೇ ವದಂತಿಗಳನ್ನು ನಂಬಬೇಡಿ ಎಂದು ನಾನು ನಿಮ್ಮಲ್ಲಿ ವಿನಮ್ರವಾಗಿ ಮನವಿ ಮಾಡಿಕೊಳ್ಳುತ್ತೇನೆ. ದಯವಿಟ್ಟು ಇದನ್ನು ಇಲ್ಲಿಗೆ ನಿಲ್ಲಸಿ ಎಂದು ಇಬ್ಬರು ಕೇಳಿಕೊಂಡಿದ್ದರು. ಆದರೆ, ಇಬ್ಬರು ಈವರೆಗೂ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಇದೀಗ ಇಬ್ಬರು ಒಟ್ಟಿಗೆ ವಿಡಿಯೋ ಮಾಡುವ ಮೂಲಕ ನೀವು ಅಂದುಕೊಂಡಂತೆ ನಮ್ಮ ನಡುವೆ ಏನೂ ಇಲ್ಲ ಎಂಬ ಸ್ಪಷ್ಟ ಸಂದೇಶವನ್ನು ಇಬ್ಬರು ರವಾನಿಸಿದ್ದಾರೆ.

ಎಂದಿನಂತೆ ಫನ್​ ವಿಡಿಯೋ ಧನಶ್ರೀ ವರ್ಮ ಅವರು ವಿಡಿಯೋ ಪೋಸ್ಟ್​ ಮಾಡಿದ್ದು, ಅದರಲ್ಲಿ ಎಂದಿನಂತೆ ಇಬ್ಬರು ತಮ್ಮ ಹಾಸ್ಯ ಚಟಾಕಿಯನ್ನು ಹಾರಿಸಿದ್ದಾರೆ. ಕೇಳು ನಾನು ಒಂದು ತಿಂಗಳು ತವರು ಮನೆಗೆ ಹೋಗುತ್ತಿದ್ದೇನೆ ಎಂದು ಧನಶ್ರೀ ಹೇಳುತ್ತಾರೆ. ಅದನ್ನು ಕೇಳುತ್ತಿದ್ದಂತೆ ತುಂಬಾ ಖುಷಿಯಾಗುವ ಚಾಹಲ್, ಡಾನ್ಸ್​ ಮಾಡುವುದು ವಿಡಿಯೋದಲ್ಲಿದೆ. ವಿಡಿಯೋದಲ್ಲಿ ಇಬ್ಬರನ್ನು ಒಟ್ಟಿಗೆ ನೋಡಿದ ಅವರ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷ್​ ಆಗಿದ್ದಾರೆ. ಎಂದಿನಂತೆಯೇ ಈ ಜೋಡಿ ಫನ್​ ಮಾಡುತ್ತಾ, ತಾವು ನಗುತ್ತಾ, ಎಲ್ಲರನ್ನು ನಗಿಸುತ್ತಿದೆ. ಇಬ್ಬರ ನಡುವಿನ ಡಿವೋರ್ಸ್​ ವದಂತಿ ಸುಳ್ಳು ಎಂಬುದು ವಿಡಿಯೋ ಮೂಲಕ ಖಚಿತಪಡಿಸಿಕೊಂಡಿದ್ದಾರೆ. ​

ಅಂದಹಾಗೆ ಚಾಹಲ್​ ಮತ್ತು ಧನಶ್ರೀ 2020ರಲ್ಲಿ ವಿವಾಹವಾಗಿದ್ದಾರೆ. ಪರಸ್ಪರ ಪ್ರೀತಿಸಿ, ಮನೆಯವರ ಒಪ್ಪಿಗೆ ಪಡೆದು, ಮದುವೆಯಾಗುವ ಮೂಲಕ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಧನಶ್ರೀ ಅವರೇನು ಸಾಮಾನ್ಯ ಮಹಿಳೆಯಲ್ಲ. ಅವರ ಬಗ್ಗೆ ಬಹುತೇಕರಿಗೆ ತಿಳಿದಿದೆ. ಏಕೆಂದರೆ, ಅವರು ಸೋಶಿಯಲ್​ ಮೀಡಿಯಾ ಸೆನ್ಷೆಷನಲ್​ ಸ್ಟಾರ್​. ನೃತ್ಯ ಸಂಯೋಜಕಿ ಮತ್ತು ಓರ್ವ ಯೂಟ್ಯೂಬರ್​ ಕೂಡ ಹೌದು. ಮತ್ತೊಂದೆಡೆ ಚಹಾಲ್ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಭಾರತದ ಪ್ರಮುಖ ಸ್ಪಿನ್ ಬೌಲರ್‌ಗಳಲ್ಲಿ ಒಬ್ಬರು ಮತ್ತು ಐಪಿಎಲ್‌ನಲ್ಲಿ ಸ್ಟಾರ್ ಪರ್ಫಾರ್ಮರ್ ಆಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net