

ಆಂಟಿಗುವಾ: ಅಂಡರ್ 19 ವಿಶ್ವಕಪ್ ಟೂರ್ನಿಯ ಕ್ವಾರ್ಟರ್ ಫೈನಲ್ನಲ್ಲಿ ಎದುರಾಳಿ ಬಾಂಗ್ಲಾದೇಶವನ್ನು ಮಣಿಸುವ ಮೂಲಕ ಟೀಮ್ ಇಂಡಿಯಾ ಸೆಮಿಫೈನಲ್ಗೆ ಲಗ್ಗೆ ಇಟ್ಟಿದೆ. ಈ ಮೂಲಕ ಎರಡು ವರ್ಷಗಳ ಹಿಂದಿನ ಬಾಂಗ್ಲಾ ವರ್ತನೆಗೆ ಬ್ಲೂ ಬಾಯ್ಸ್ ಸೇಡು ತೀರಿಸಿಕೊಂಡಿದೆ.
ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಯಶ್ ಧುಲ್ ಫೀಲ್ಡಿಂಗ್ ಆಯ್ದುಕೊಳ್ಳುವ ಮೂಲಕ ಎದುರಾಳಿ ಬಾಂಗ್ಲಾವನ್ನು ಬ್ಯಾಟಿಂಗ್ ಆಹ್ವಾನಿಸಿದರು. ಆರಂಭದಲ್ಲೇ ರವಿ ಕುಮಾರ್ (14ಕ್ಕೆ 3) ಮತ್ತು ವಿಕ್ಕಿ ಒಟ್ಸ್ವಾಲ್ (25ಕ್ಕೆ 2) ಮಾರಕ ಬೌಲಿಂಗ್ ದಾಳಿಗೆ ನಲುಗಿದ ಬಾಂಗ್ಲಾ 37.1 ಓವರ್ಗಳಲ್ಲಿ 111 ರನ್ಗೆ ಸರ್ವಪತನ ಕಂಡಿತು.
ಗುರಿ ಬೆನ್ನತ್ತಿದ ಭಾರತ 30.5 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 117 ರನ್ ಕಲೆಹಾಕುವ ಮೂಲಕ 5 ವಿಕೆಟ್ ಅಂತರದಿಂದ ಗೆಲುವು ಸಾಧಿಸುವ ಮೂಲಕ ಸೆಮಿಫೈನಲ್ ಹಂತಕ್ಕೇರಿತು. ಭಾರತದ ಪರ ಆಂಗ್ಕ್ರಿಶ್ ರಘುವಂಶಿ (44), ಶೇಕ್ ರಶೀದ್ (26) ಮತ್ತು ಯಶ್ ಧುಲ್ (ಅಜೇಯ 20) ಉತ್ತಮ ಪ್ರದರ್ಶನ ನೀಡಿದರು. ಸೆಮಿಫೈನಲ್ನಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.
ಸೇಡು ತೀರಿಸಿಕೊಂಡ ಭಾರತ
2020 ಅಂಡರ್ 19 ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸಿದ ಬಾಂಗ್ಲಾದೇಶ, ಚೊಚ್ಚಲ ಐಸಿಸಿ ಟ್ರೋಫಿ ಗೆದ್ದ ಖುಷಿಯಲ್ಲಿ ಮೈಮರೆತು ಟೀಮ್ ಇಂಡಿಯಾ ಆಟಗಾರರ ಜತೆ ಕೆಟ್ಟದಾಗಿ ನಡೆದುಕೊಂಡಿದ್ದರು. ಕ್ರೀಡಾಸ್ಫೂರ್ತಿಯನ್ನು ಮೆರೆಯದೇ ಟೀಂ ಇಂಡಿಯಾವನ್ನು ಅಣುಕಿಸಿದ್ದರು. ಈ ವೇಳೆ ಮೈದಾನದಲ್ಲೇ ಉಭಯ ತಂಡಗಳ ಆಟಗಾರರ ನಡುವೆ ಮಾತಿನ ಚಕಮಕಿಯು ನಡೆದಿತ್ತು. ಈ ಘಟನೆ ಭಾರೀ ವಿವಾದವನ್ನು ಹುಟ್ಟುಹಾಕಿತ್ತು. ಬಾಂಗ್ಲಾ ಆಟಗಾರರ ವರ್ತನೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೀಕೆಗಳು ವ್ಯಕ್ತವಾಗಿದ್ದವು. ಇದೀಗ ಕ್ವಾರ್ಟರ್ ಫೈನಲ್ ಪಂದ್ಯದಲ್ಲೇ ಬಾಂಗ್ಲಾವನ್ನು ಟೀಮ್ ಇಂಡಿಯಾ ಮನೆಗೆ ಕಳುಹಿಸಿದ್ದು, ಎರಡು ವರ್ಷದ ಹಿಂದಿನ ಸೇಡನ್ನು ತೀರಿಸಿಕೊಂಡಿದೆ. (ಏಜೆನ್ಸೀಸ್)