

ಮುಂಬೈ: ಪಂಜಾಬ್ ಕಿಂಗ್ಸ್ ತಂಡದ ಬಲಿಷ್ಠ ನಿರ್ವಹಣೆ ಎದುರು ಸಂಪೂರ್ಣ ಮಂಕಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್-15ರ ತನ್ನ ನಿರ್ಣಾಯಕ ಪಂದ್ಯದಲ್ಲಿ 54 ರನ್‌ಗಳಿಂದ ಸೋಲನುಭವಿಸಿತು. ಇದರೊಂದಿಗೆ ಲೀಗ್‌ನಲ್ಲಿ 6ನೇ ಸೋಲು ಕಂಡ ಬೆಂಗಳೂರು ತಂಡದ ಪ್ಲೇಆಫ್ ಹಾದಿ ತೂಗುಯ್ಯಲೆಯಲ್ಲಿ ಸಿಲುಕಿದೆ. ಆರ್‌ಸಿಬಿ ಸೋಲಿನ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಕಪ್ಪು ಬಣ್ಣದ ಬೆಕ್ಕಿನ ಫೋಟೋ ಸಿಕ್ಕಾಪಟ್ಟೆ ಹರಿದಾಡುತ್ತಿದೆ.
ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಪಂಜಾಬ್ ತಂಡದ ಗುರಿ ಬೆನ್ನತ್ತಿದ ಆರ್‌ಸಿಬಿ ಮೊದಲನೇ ಓವರ್ನ 3 ಎಸೆತಗಳಲ್ಲಿ 5 ರನ್ ಕಲೆಹಾಕಿತ್ತು. ಈ ವೇಳೆ ನಾನ್ ಸ್ಟ್ರೈಕರ್ ವಿಭಾಗದಲ್ಲಿ ವಿರಾಟ್ ಕೊಹ್ಲಿ ಮತ್ತು ಸ್ಟ್ರೈಕರ್ ವಿಭಾಗದಲ್ಲಿ ನಾಯಕ ಫಾಪ್ ಡುಪ್ಲೆಸಿಸ್ ಇದ್ದರು. ನಾಲ್ಕನೇ ಎಸೆತವನ್ನು ಡುಪ್ಲೆಸಿಸ್ ಎದುರಿಸುವ ವೇಳೆ ಮೈದಾನದಲ್ಲಿ ಅಡಚಣೆ ಉಂಟಾಗಿ ಕ್ಷಣವೊತ್ತು ಆಟ ಸ್ಥಗಿತಗೊಳಿಸಿದರು. ಕಾರಣ ಕ್ರೀಡಾಂಗಣದ ಸೈಟ್ಸ್ಕ್ರೀನ್ ಬಳಿ ಕಪ್ಪು ಬಣ್ಣದ ಬೆಕ್ಕು ಪ್ರತ್ಯಕ್ಷವಾಗಿ ಆಟಕ್ಕೆ ಅಡಚಣೆ ಉಂಟು ಮಾಡಿತು. ಈ ವೇಳೆ ಮಧ್ಯಪ್ರವೇಶಿಸಿದ ಅಂಪೈರ್ ಬೆಕ್ಕನ್ನು ಆ ಕಡೆ ಓಡಿಸುವಂತೆ ಹೇಳಿದರು. ಬೆಕ್ಕು ಅಲ್ಲಿಂದ ಹೋದ ಬಳಿಕ ಮತ್ತೆ ಆಟ ಮುಂದುವರಿಯಿತು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗಿದೆ.
ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡ, ಆರಂಭಿಕ ಹಂತದಲ್ಲಿ ಜಾನಿ ಬೇರ್‌ಸ್ಟೋ (66 ರನ್, 29 ಎಸೆತ, 4ಬೌಂಡರಿ, 7ಸಿಕ್ಸರ್) ಹಾಗೂ ಮಧ್ಯಮ-ಸ್ಲಾಗ್ ಓವರ್‌ಗಳಲ್ಲಿ ಲಿಯಾಮ್ ಲಿವಿಂಗ್‌ಸ್ಟೋನ್ (70ರನ್, 42ಎಸೆತ, 5ಬೌಂಡರಿ, 4 ಸಿಕ್ಸರ್) ತೋರಿದ ಸ್ಫೋಟಕ ಬ್ಯಾಟಿಂಗ್ ಫಲವಾಗಿ 9 ವಿಕೆಟ್‌ಗೆ 209 ರನ್ ಪೇರಿಸಿತು. ಈ ಬೃಹತ್ ಮೊತ್ತ ಬೆನ್ನಟ್ಟಿದ ಆರ್‌ಸಿಬಿ 9 ವಿಕೆಟ್‌ಗೆ 155 ರನ್‌ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಆರ್‌ಸಿಬಿ ಪ್ರಸಕ್ತ ಲೀಗ್‌ನಲ್ಲಿ ಎರಡೂ ಮುಖಾಮುಖಿಯಲ್ಲೂ ಪಂಜಾಬ್‌ಗೆ ಶರಣಾಯಿತು.
ಇದೀಗ ಆರ್‌ಸಿಬಿ ಸೋಲಿಗೆ ಕಪ್ಪು ಬೆಕ್ಕು ಎದುರಾಗಿದ್ದೇ ಕಾರಣ ಎಂದು ಹೇಳಿ ಸಾಮಾಜಿಕ ಜಾಲತಾಣದಲ್ಲಿ ಮೀಮ್ಸ್ಗಳನ್ನು ಹರಿಬಿಡಲಾಗುತ್ತಿದೆ. ಮೈದಾನದಲ್ಲಿ ಎದುರಾದ ಬೆಕ್ಕು ಮಾಟ ಮಂತ್ರ ಪ್ರಯೋಗಿಸಿದೆ ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ. ಪ್ರೀತಿಯ ಕೊಹ್ಲಿ ಅವರೇ ನೀವು ದುಷ್ಟ ಶಕ್ತಿಯ ಕಣ್ಣುಗಳಿಂದ ತಪ್ಪಿಸಿಕೊಳ್ಳಲು ಬಯಸಿದರೆ, ನೀವು ಟ್ವಿಟರ್‌ನಲ್ಲಿ ವರ್ಕೌಟ್ಗೆ ಸಂಬಂಧಿಸಿದ ಫೋಟೋ ಮತ್ತ ವಿಡಿಯೋಗಳನ್ನು ಪೋಸ್ಟ್ ಮಾಡುವುದನ್ನು ನಿಲ್ಲಿಸಿ ಅಥವಾ ಕಪ್ಪು ಬೆಕ್ಕನ್ನು ದತ್ತು ತೆಗೆದುಕೊಳ್ಳಿ ಎಂದು ಮತ್ತೊಬ್ಬ ನೆಟ್ಟಿಗ ಟ್ವೀಟ್ ಮಾಡಿದ್ದಾರೆ. ಆರ್‌ಸಿಬಿ ನಿಜವಾಗಿಯೂ ಅರ್ಹತಾ ಸುತ್ತಿಗೆ ಹೋಗುತ್ತಿತ್ತು. ಆದರೆ, ಈ ಕಪ್ಪು ಬೆಕ್ಕು ಬಂದು ಎಲ್ಲವನ್ನು ಹಾಳು ಮಾಡಿತು ಇನ್ನೋರ್ವ ನೆಟ್ಟಿಗ ಕಾಮೆಂಟ್ ಮಾಡಿದ್ದಾರೆ. ಹೀಗೆ ಸಾಕಷ್ಟು ಮಂದಿ ಬೆಕ್ಕಿನ ಬಗ್ಗೆ ಟ್ವೀಟ್ ಮಾಡಿ ಮೈದಾನದಲ್ಲಿ ಖಂಡಿತ ಏನೋ ನಡೆದಿದೆ ಎನ್ನುವ ರೀತಿಯಲ್ಲಿ ಮೀಮ್ಸ್ಗಳನ್ನು ಹರಿಬಿಟ್ಟಿದ್ದಾರೆ.
ಇನ್ನು ಕೆಲ ನೆಟ್ಟಿಗರು ಆರ್‌ಸಿಬಿ ಸೋಲಿಗೆ ಬೆಕ್ಕನ್ನು ದೂಷಿಸುವುದನ್ನು ನಿಲ್ಲಿಸಿ ಎಂದಿದ್ದಾರೆ. ಏನೇ ಇರಲಿ ಆದರೆ, ಈ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಪಂಜಾಬ್ಗಿಂತ ಹೆಚ್ಚು ಸದ್ದು ಮಾಡಿದ್ದು ಮಾತ್ರ ಕಪ್ಪು ಬಣ್ಣದ ಬೆಕ್ಕು. (ಏಜೆನ್ಸೀಸ್)