ನಾರ್ವೆ ಚೆಸ್ ಇತಿಹಾಸದಲ್ಲಿ ದಾಖಲೆ ಬರೆದ ಪ್ರಜ್ಞಾನಂದ: ಪ್ರತಿಷ್ಠಿತ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ!

 R Praggnanandhaa Norway Chess 2026
R Praggnanandhaa Norway Chess 2026
Published on

ಪ್ರಮುಖ ಮುಖ್ಯಾಂಶಗಳು

  • ಪ್ರತಿಷ್ಠಿತ ನಾರ್ವೆ ಚೆಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಮೊದಲ ಭಾರತೀಯ ಪ್ರಜ್ಞಾನಂದ
  • ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧ ಎರಡು ಬಾರಿ ಕ್ಲಾಸಿಕಲ್ ಚೆಸ್‌ನಲ್ಲಿ ಜಯಭೇರಿ ಸಾಧಿಸಿದ ಪ್ರಜ್ಞಾನಂದ
  • ಜರ್ಮನಿಯ ವಿನ್ಸೆಂಟ್ ಕೀಮರ್ ವಿರುದ್ಧ ಜಯ ಸಾಧಿಸಿ ಪ್ರಶಸ್ತಿ ತನ್ನದಾಗಿಸಿಕೊಂಡ ಪ್ರಜ್ಞಾನಂದ
R Praggnanandhaa Norway Chess 2026 ನಾರ್ವೆ ಓಸ್ಲೋದಲ್ಲಿ ನಡೆದ ನಾರ್ವೆ ಚೆಸ್​​​​ ಟೂರ್ನಿಯ ಕೊನೆಯ ಹಂತದಲ್ಲಿ ಆರ್. ಪ್ರಜ್ಞಾನಂದ ಅದ್ಭುತ ಪ್ರದರ್ಶನ ನೀಡಿ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆ ಮೂಲಕ ಸುವರ್ಣ ಅಧ್ಯಾಯವೊಂದನ್ನು ಬರೆದಿದ್ದಾರೆ.

ಚಾಂಪಿಯನ್​ ಆಗಿ ಹೊರಹೊಮ್ಮಿದ ತಮಿಳಿಗ

ಜರ್ಮನಿಯ ಬಲಿಷ್ಠ ಆಟಗಾರರಾದ ವಿನೆಂಟ್ಸ್​​ ಕೀಮರ್​​​ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ 20 ವರ್ಷದ ಪ್ರಜ್ಞಾನಂದ ಚಾಂಪಿಯನ್​ ಆಗಿ ಹೊರಹೊಮ್ಮಿದ್ದಾರೆ. ಭಾರತದ ಚೆಸ್​ ದಂತಕೆ ವಿಶ್ವನಾಥನ್​ ಆನಂದ್ ಹಾಗೂ ಹಾಲಿ ವಿಶ್ವ ಚಾಂಪಿಯನ್​​ ಡಿ ಗುಕೇಶ್​ ಸೇರಿದಂತೆ ಯಾರಿಗೂ ಸಾಧ್ಯವಾಗದ ಅಪರೂಪದ ಸಾಧನೆಯನ್ನು ಪ್ರಜ್ಞಾನಂದ ಮಾಡಿದ್ದಾರೆ.
ದಿನದ ಆರಂಭದಲ್ಲಿ 15 ಅಂಕದೊಂದಿಗೆ ಮೂರನೇ ಸ್ಥಾನದಲ್ಲಿದ್ದ ಅವರು ನಿರ್ಣಾಯಕ ಹಂತದಲ್ಲಿ ಅದ್ಭುತ ಪ್ರದರ್ಶನ ನೀಡುವಲ್ಲಿ ಯಶಸ್ವಿ ಕಂಡುಕೊಂಡರು ಒಟ್ಟು 18 ಅಂಕ ಗಳಿಸುವ ಮೂಲಕ ಅಗ್ರಸ್ಥಾನಕ್ಕೆ ಏರಿದ್ದಾರೆ. ಟೂರ್ನಿಯ ಆರಂಭದಲ್ಲಿ ನಿಧಾನಗತಿಯಲ್ಲಿ ಮುನ್ನಡೆ ಕಾಯ್ದುಕೊಂಡ ಅವರು, ದ್ವೀತೀಯಾರ್ಧದಲ್ಲಿ ಭರ್ಜರಿ ಗೆಲುವು ಸಾಧಿಸಿದರು.

ವಿಶ್ವದ ಘಟಾನುಘಟಿಗಳಿದ್ದ ಟೂರ್ನಿ

ವಿಶ್ವದ ನಂ.1 ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್, ಹಾಲಿ ವಿಶ್ವ ಚಾಂಪಿಯನ್ ಡಿ. ಗುಕೇಶ್, ಅಲಿರೆಜಾ ಫಿರೌಜ್ಜಾ, ವೆಸ್ಲಿ ಸೋ ಮತ್ತು ವಿನ್ಸೆಂಟ್ ಕೀಮರ್ ಅವರಂತಹ ವಿಶ್ವದ ಅತ್ಯುನ್ನತ ಮತ್ತು ಶ್ರೇಷ್ಠ ಆಟಗಾರರು ಈ ಟೂರ್ನಿಯಲ್ಲಿ ಭಾಗವಹಿಸಿದ್ದರು. ಹೀಗಾಗಿ ಈ ಬಾರಿಯ ಟೂರ್ನಿ ಕಠಿಣ ಸ್ಪರ್ಧೆ ಎಂದು ಪರಿಗಣಿಸಲಾಗಿತ್ತು.

ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧ ಸೆಣಸು, ಗೆಲುವು

ಈ ಟೂರ್ನಿಯಲ್ಲಿ ಪ್ರಜ್ಞಾನಂದ ಅವರ ಅಭಿಯಾನದ ಪ್ರಮುಖ ಆಕರ್ಷಣೆಯೆಂದರೆ ವಿಶ್ವದ ಸೂಪರ್‌ಸ್ಟಾರ್ ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧದ ಮೇಲುಗೈ. ಒಂದೇ ಟೂರ್ನಿಯಲ್ಲಿ ಕಾರ್ಲ್‌ಸನ್ ಅವರನ್ನು ಕ್ಲಾಸಿಕಲ್ ಚೆಸ್‌ನಲ್ಲಿ ಎರಡು ಬಾರಿ ಸೋಲಿಸಿದ ವಿಶ್ವದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪ್ರಜ್ಞಾನಂದ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಭಾರತದ ದಿಗ್ಗಜ ವಿಶ್ವನಾಥನ್ ಆನಂದ್ ಮಾತ್ರ ಈ ಸಾಧನೆ ಮಾಡಿದ್ದರು. ಅಷ್ಟೇ ಅಲ್ಲದೆ, 2026ರ ಸಾಲಿನಲ್ಲಿ ಕಾರ್ಲ್‌ಸನ್ ಅವರನ್ನು ಕ್ಲಾಸಿಕಲ್ ಗೇಮ್ಸ್‌ನಲ್ಲಿ ಎರಡು ಬಾರಿ ಸೋಲಿಸಿದ ಮೊದಲ ಆಟಗಾರ ಎಂಬ ಕೀರ್ತಿಯೂ ಪ್ರಜ್ಞಾನಂದ ಅವರ ಪಾಲಾಗಿದೆ.
ಟೂರ್ನಿಯ ಮಧ್ಯಭಾಗದಲ್ಲಿ ಸರಣಿ ಹಿನ್ನಡೆಗಳನ್ನು ಅನುಭವಿಸಿದ್ದ ಪ್ರಜ್ಞಾನಂದ ಅವರ ಪ್ರಶಸ್ತಿಯ ಕನಸು ಬಹುತೇಕ ಕೈತಪ್ಪುವ ಆತಂಕ ಎದುರಾಗಿತ್ತು. ಆದರೆ ಅತ್ಯಂತ ನಿರ್ಣಾಯಕ ಸಂದರ್ಭದಲ್ಲಿ ಪುಟಿದೆದ್ದ ಅವರು ಸನ್ಸೇಷನಲ್ ಪ್ರದರ್ಶನ ನೀಡಿದರು. ಕ್ಲಾಸಿಕಲ್ ವಿಭಾಗದಲ್ಲಿ ಅಲಿರೆಜಾ ಫಿರೌಜ್ಜಾ, ಮ್ಯಾಗ್ನಸ್ ಕಾರ್ಲ್‌ಸನ್ ಮತ್ತು ಡಿ. ಗುಕೇಶ್ ಅವರ ವಿರುದ್ಧ ಸತತ ಮಹತ್ವದ ಗೆಲುವುಗಳನ್ನು ಸಾಧಿಸುವ ಮೂಲಕ ಪ್ರಶಸ್ತಿಯ ರೇಸ್‌ಗೆ ಮರಳಿದರು. ಕೊನೆಯ ಸುತ್ತಿಗೆ ಪ್ರವೇಶಿಸುವಾಗ ಪ್ರಜ್ಞಾನಂದ, ವೆಸ್ಲಿ ಸೋ ಮತ್ತು ಫಿರೌಜ್ಜಾ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net