

ಸಿಡ್ನಿ: ಇಲ್ಲಿನ ನಡೆಯುತ್ತಿರುವ ಮಾರ್ಷ್ ಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ನ್ಯೂ ಸೌಥ್ ವೇಲ್ಸ್ (ಎನ್ಎಸ್ಡಬ್ಲ್ಯು) ತಂಡವನ್ನು ಮಣಿಸಿದ ವೆಸ್ಟರ್ನ್ ಆಸ್ಟ್ರೇಲಿಯಾ 18 ರನ್ಗಳ ಅಂತರದಿಂದ ಅಮೋಘ ಜಯ ದಾಖಲಿಸಿದೆ.
ಮೆಲ್ಬೋರ್ನ್ನ ಓವಲ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಆ್ಯಂಡ್ರಿವ್ ಟೈ ಮತ್ತು ಜೆ ರಿಚರ್ಡ್ಸನ್ ಉತ್ತಮ ಆಟವಾಡುವ ಮೂಲಕ ವೆಸ್ಟರ್ನ್ ಆಸ್ಟ್ರೇಲಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಆದರೆ, ಇಡೀ ಆಟಕ್ಕೆ ಉತ್ತಮ ತಿರುವು ನೀಡಿದ್ದು ಮಾತ್ರ ಒಂದು ಅದ್ಧುತ ಕ್ಯಾಚ್. ನ್ಯೂ ಸೌಥ್ ವೇಲ್ಸ್ ತಂಡ ಗುರಿಯನ್ನು ಬೆನ್ನತ್ತಿದ್ದಾಗ 44ನೇ ಓವರ್ನಲ್ಲಿ ವೆಸ್ಟರ್ನ್ ಆಸ್ಟ್ರೇಲಿಯಾದ ಹಿಲ್ಟನ್ ಕಾರ್ಟ್ರೈಟ್ ಹಿಡಿದ ಕ್ಯಾಚ್ ಪಂದ್ಯದ ದಿಕ್ಕನ್ನೇ ಬದಲಿಸಿತು.
226 ರನ್ ಗುರಿ ಬೆನ್ನತ್ತಿದ ಎನ್ಎಸ್ಡಬ್ಲ್ಯು ತಂಡ ಉತ್ತಮ ಲಯದಲ್ಲೇ ಇತ್ತು. ಮೋಸೆಸ್ ಹೆನ್ರಿಕ್ಸ್ ಅವರು ರಕ್ಷಣಾತ್ಮಕ ಆಟವನ್ನು ಆಡುತ್ತಿದ್ದರು. ಇನ್ನೊಂದೆಡೆ ಬೆನ್ ದ್ವಾರ್ಶುಯಿಸ್ ಕೂಡ ಉತ್ತಮವಾಗಿ ಆಡುತ್ತಿದ್ದರು. ತಂಡದ ಗೆಲುವಿಗೆ 36 ಬಾಲ್ಗಳಲ್ಲಿ 22 ರನ್ ಬೇಕಿತ್ತು. ಇನ್ನು ಮೂರು ವಿಕೆಟ್ ಎನ್ಎಸ್ಡಬ್ಲ್ಯ ಕೈಯಲ್ಲಿತ್ತು.
44ನೇ ಓವರ್ನ ಮೊದಲ ಎಸೆತದಲ್ಲಿ ಹೆನ್ರಿಕ್ಸ್ ಮುಂದೆ ಬಂದು ಬಾರಿಸಿದಾಗ ಚೆಂಡು ಬೌಂಡರಿ ಬಳಿಯತ್ತ ಹಾರಿತು. ಈ ವೇಳೆ ಬೌಂಡರಿಯಲ್ಲಿದ್ದ ಹಿಲ್ಟನ್ ಅವರು ಓಡಿಬಂದು ಮಾರು ಉದ್ದಕ್ಕೆ ಜಿಗಿದು ಅದ್ಭುತವಾಗಿ ಕ್ಯಾಚ್ ಹಿಡಿದರು. ಪಂದ್ಯದ ವೀಕ್ಷಕ ವಿವರಣೆಗಾರರು ಕೂಡ ಹಿಲ್ಟನ್ ಕ್ಯಾಚ್ ಹಿಡಿದ ರೀತಿಯನ್ನು ಒಂದು ಕ್ಷಣ ನಂಬಲೇ ಇಲ್ಲ. ಅಷ್ಟು ಅದ್ಭುತವಾಗಿತ್ತು ಅವರ ಕ್ಯಾಚ್.
ಹೆನ್ರಿಕ್ಸ್ ಓರ್ವ ಅದ್ಭುತ ಆಟಗಾರ. ಔಟ್ ಆಗಿರದಿದ್ದರೆ ಪಂದ್ಯವು ಸುಲಭವಾಗಿ ಎನ್ಎಸ್ಡಬ್ಲ್ಯು ಪಾಲಾಗುತ್ತಿತ್ತು. ಆದರೆ, ಕ್ಯಾಚ್ ಹಿಡಿದಿದ್ದೆ ಪಂದ್ಯಕ್ಕೆ ಮಹತ್ವದ ತಿರುವು ನೀಡಿತು. ಅಂತಿಮವಾಗಿ ಎನ್ಎಸ್ಡಬ್ಲ್ಯು ತಂಡ 46.3 ಓವರ್ಗಳಲ್ಲಿ 207 ರನ್ ಗಳಿಸಲಷ್ಟೇ ಶಕ್ತವಾಯಿತು. ವೆಸ್ಟರ್ನ್ ಆಸ್ಟ್ರೇಲಿಯಾ 18 ರನ್ಗಳ ಅಂತರದಿಂದ ಗೆಲುವಿನ ನಗೆ ಬೀರಿತು. ಹಿಲ್ಟನ್ ಕ್ಯಾಚ್ ಹಿಡಿದ ವಿಡಿಯೋ ವೈರಲ್ ಆಗಿದ್ದು, ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. (ಏಜೆನ್ಸೀಸ್)