

ನವದೆಹಲಿ: ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಹಾಗೂ ಆಮ್ ಆದ್ಮಿ ಪಕ್ಷದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಹರ್ಭಜನ್ ಸಿಂಗ್ ಸಮಾಜಮುಖಿ ಚಿಂತನೆಯುಳ್ಳ ಮಹತ್ವದ ನಿರ್ಧಾರವೊಂದನ್ನು ಘೋಷಣೆ ಮಾಡಿದ್ದಾರೆ.
ತಮ್ಮ ರಾಜ್ಯಸಭಾ ಸ್ಥಾನದಿಂದ ಬರುವ ಸಂಬಳವನ್ನು ರೈತರ ಮಕ್ಕಳ ಕಲ್ಯಾಣ ಮತ್ತು ಶಿಕ್ಷಣಕ್ಕಾಗಿ ಕೊಡುಗೆ ನೀಡಲು ನಿರ್ಧರಿಸಿದ್ದಾರೆ.
ಟ್ವೀಟ್ ಮೂಲಕ ತಿಳಿಸಿರುವ ಅವರು ರಾಜ್ಯಸಭಾ ಸದಸ್ಯನಾಗಿ ನಾನು ನನ್ನ ಸಂಬಳವನ್ನು ರೈತರ ಮಕ್ಕಳ ಕಲ್ಯಾಣ ಮತ್ತು ಶಿಕ್ಷಣಕ್ಕೆ ನೀಡಲು ಬಯಸಿದ್ದೇನೆ. ದೇಶದ ಒಳಿತಿಗಾಗಿ ನಾನು ಈ ನಿರ್ಧಾರ ಮಾಡಿದ್ದು, ದೇಶಕ್ಕಾಗಿ ಏನೇನು ಮಾಡಲು ಸಾಧ್ಯವೋ ಅದೆಲ್ಲವನ್ನು ನಾನು ಮಾಡುತ್ತೇನೆ. ಜೈ ಹಿಂದ್ ಎಂದಿದ್ದಾರೆ.
ಆಮ್ ಆದ್ಮಿ ಪಕ್ಷ ಇತ್ತೀಚೆಗೆ ಪಂಜಾಬ್ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಈ ಹಿಂದಿನ ಆಡಳಿತಾರೂಢ ಕಾಂಗ್ರೆಸ್ ಸರ್ಕಾರವನ್ನು ಮಣಿಸಿ ಮೊದಲ ಬಾರಿಗೆ ಪಂಜಾಬ್ನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಎಎಪಿ ಸರ್ಕಾರ ರಚಿಸಿದ ಬೆನ್ನಲ್ಲೇ ಹರ್ಭಜನ್ ಸಿಂಗ್ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಅವಿರೋಧವಾಗಿ ರಾಜ್ಯಸಭೆಗೂ ಆಯ್ಕೆಯಾಗಿದ್ದಾರೆ. ಹರ್ಭಜನ್ ಅವರು ನಿರ್ಧಾರಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. (ಏಜೆನ್ಸೀಸ್)