ಕೋಟಿ ಕೋಟಿ ಹಣ ಸಂಪಾದಿಸಲು ರಿಷಭ್​ ಪಂತ್​ಗೆ ಹೀಗೊಂದು ಸಲಹೆ ಕೊಟ್ಟ ಶೋಯೆಬ್​ ಅಖ್ತರ್!

Rishabh
Published on

ನವದೆಹಲಿ: ಪಾಕಿಸ್ತಾನದ ಮಾಜಿ ಆಟಗಾರ ಶೋಯೆಬ್​ ಅಖ್ತರ್​, ಟೀಮ್​ ಇಂಡಿಯಾದ ವಿಕೆಟ್​ ಕೀಪರ್​-ಬ್ಯಾಟರ್ ರಿಷಭ್​ ಪಂತ್​ ಅವರನ್ನು ಕೊಂಡಾಡಿದ್ದಾರೆ. ಪಂತ್​​ ಅವರನ್ನು ನಿರ್ಭೀತ ಕ್ರಿಕೆಟಿಗ ಎಂದು ಕರೆದಿದ್ದಾರೆ.

ಕಳೆದ ಭಾನುವಾರ ಇಂಗ್ಲೆಂಡ್​ ವಿರುದ್ಧ ನಡೆದ ಕೊನೆಯ ಹಾಗೂ 3ನೇ ಏಕದಿನ ಪಂದ್ಯದಲ್ಲಿ ಅಮೋಘ ಆಟವಾಡಿದ ಪಂತ್​ ಅವ​ರನ್ನು ಮಾಜಿ ಕ್ರಿಕೆಟಿಗರು ಹೊಗಳುತ್ತಿದ್ದಾರೆ. ಅಜೇಯ 125 ರನ್​ ಗಳಿಸುವ ಮೂಲಕ ಇಂಗ್ಲೆಂಡ್​ ವಿರುದ್ಧದ ಗೆಲುವಿನಲ್ಲಿ ಪಂತ್​ ಪ್ರಮುಖ ಪಾತ್ರವಹಿಸಿದರು. ಅವರ ಆಟವನ್ನು ವಿಶ್ಲೇಷಿಸಿರುವ ಅಖ್ತರ್​, ಪಂತ್ ಏಕಾಂಗಿಯಾಗಿ ಭಾರತಕ್ಕೆ ಸರಣಿಯನ್ನು ಗೆಲ್ಲಿಸಿಕೊಟ್ಟರು ಎಂದಿದ್ದಾರೆ.

ಪಂತ್​ ಓರ್ವ ನಿರ್ಭೀತ ಕ್ರಿಕೆಟಿಗ. ಅವರು ಕಟ್​ ಶಾಟ್​, ಪುಲ್​ ಶಾಟ್​, ರಿವರ್ಸ್​ ಸ್ವೀಪ್​, ಸ್ಲಾಗ್​ ಸ್ವೀಪ್​ ಮತ್ತು ಪ್ಯಾಡಲ್​ ಸ್ವೀಪ್​ ಸೇರಿದಂತೆ ವಿವಿಧ ರೀತಿ ಹೊಡೆತಗಳನ್ನು ಹೊಂದಿದ್ದಾರೆ. ಆಸ್ಟ್ರೇಲಿಯಾದಲ್ಲಿ ಟೆಸ್ಟ್​ ಪಂದ್ಯವನ್ನು ಗೆದ್ದರು ಮತ್ತು ಇದೀಗ ಇಂಗ್ಲೆಂಡ್​ನಲ್ಲಿ ಏಕಾಂಗಿಯಾಗಿ ಸರಣಿ ಜಯಿಸಿಕೊಟ್ಟಿದ್ದಾರೆ ಎಂದು ತಮ್ಮದೇ ಯೂಟ್ಯೂಬ್​ ಚಾನೆಲ್​ನಲ್ಲಿ ಅಖ್ತರ್​ ಅವರು ಪಂತ್​ರನ್ನು ಕೊಂಡಾಡಿದ್ದಾರೆ.

ಇದೇ ವಿಡಿಯೋದಲ್ಲಿ ಪಂತ್​ಗೆ ಫಿಟ್​ನೆಸ್​ ಮೇಲೆ ಗಮನ ಹರಿಸಲು ಅಖ್ತರ್​ ಸಲಹೆ ನೀಡಿದ್ದಾರೆ. ಕೊಂಚ ತೂಕ ಕಳೆದುಕೊಳ್ಳುವಂತೆ ಹೇಳಿದ್ದಾರೆ. ಒಳ್ಳೆಯ ಫಿಟ್​ನೆಸ್​ ಸಾಧಿಸಿದರೆ, ಕ್ರಿಕೆಟಿಗ ಜೊತೆಗೆ ಮಾಡೆಲ್​ ಆಗಿ ಒಳ್ಳೆಯ ಹಣವನ್ನೂ ಸಂಪಾದಿಸಬಹುದು ಎಂದಿದ್ದಾರೆ.

ಕೊಂಚ ದಪ್ಪವಾಗಿರುವಂತೆ ಪಂತ್​ ಕಾಣಿಸುತ್ತಾರೆ. ಅದರ ಬಗ್ಗೆ ಕಾಳಜಿ ವಹಿಸುತ್ತಾರೆ ಎಂಬ ಭರವಸೆ ಇದೆ. ಪಂತ್​ ನೋಡಲು ತುಂಬಾ ಚೆನ್ನಾಗಿದ್ದಾರೆ. ಫಿಟ್​ನೆಸ್​ ಕಾಪಾಡಿಕೊಂಡರೆ, ಮಾಡೆಲ್​ ಆಗಿ ಕೋಟ್ಯಂತರ ರೂಪಾಯಿ ಸಂಪಾದಿಸಬಹುದು. ಭಾರತೀಯ ಮಾರುಕಟ್ಟೆ ದೊಡ್ಡದು. ಒಬ್ಬ ವ್ಯಕ್ತಿಯು ಭಾರತದಲ್ಲಿ ಸೂಪರ್‌ಸ್ಟಾರ್ ಆಗುವಾಗ, ಅವರ ಮೇಲೆ ಸಾಕಷ್ಟು ಹೂಡಿಕೆ ಮಾಡಲಾಗುತ್ತದೆ ಎಂದು ಪಾಕಿಸ್ತಾನದ ದಂತಕಥೆ ವೇಗಿ ಹೇಳಿದರು.

ಇನ್ನು ಪಂದ್ಯದ ವಿಚಾರಕ್ಕೆ ಬಂದರೆ, ಭಾರತ ಇಂಗ್ಲೆಂಡ್​ ವಿರುದ್ಧ ಏಕದಿನ ಸರಣಿಯಲ್ಲಿ 2-1 ಅಂತರದಿಂದ ಸರಣಿ ಜಯಿಸಿದೆ. ಟೆಸ್ಟ್​ ಪಂದ್ಯದನ್ನು 2-2 ರೊಂದಿಗೆ ಸಮಬಲ ಸಾಧಿಸಿದೆ. ಇದೀಗ ವಿಂಡೀಸ್​ ಪ್ರವಾಸದಲ್ಲಿರುವ ಟೀಮ್​ ಇಂಡಿಯಾ ಮೂರು ಏಕದಿನ ಮತ್ತು ಐದು ಟಿ20 ಪಂದ್ಯಗಳನ್ನು ಆಡಲಿದೆ. ಜುಲೈ 27ರಿಂದ ಪಂದ್ಯಗಳು ಆರಂಭವಾಗಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net