ಆಫ್​-ಸ್ಪಿನ್ನರ್‌ಗಳ ಪಟ್ಟಿಯಲ್ಲಿ ಕತ್ರೀನಾ ಕೈಫ್​ಗೆ ಸ್ಥಾನ ನೀಡಿದ ಅಶ್ವಿನ್!

ashwin kaif web
Published on

ಬೆಂಗಳೂರು: ಮುಂಬರುವ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡಲು ಸಜ್ಜಾಗುತ್ತಿರುವ ತಮಿಳುನಾಡಿನ ಅನುಭವಿ ಆಫ್​-ಸ್ಪಿನ್ನರ್ ಆರ್. ಅಶ್ವಿನ್ ಅವರಿಗೆ ಗುರುವಾರ 34ನೇ ವರ್ಷಕ್ಕೆ ಕಾಲಿಟ್ಟ ಸಂಭ್ರಮ. ಇದೇ ವೇಳೆ ಅವರು ಇನ್‌ಸ್ಟಾಗ್ರಾಂನಲ್ಲಿ ಆಫ್​-ಸ್ಪಿನ್ನರ್‌ಗಳ ವಿವಿಧ ಬೌಲಿಂಗ್ ಶೈಲಿಗಳ ಚಿತ್ರವನ್ನು ಹಂಚಿಕೊಂಡಿದ್ದು, ಇದರಲ್ಲಿ ಬಾಲಿವುಡ್ ನಟಿ ಕತ್ರೀನಾ ಕೈಫ್​ ಚಿತ್ರವೂ ಇದ್ದುದು ಅಚ್ಚರಿ ಹುಟ್ಟಿಸಿತು.

ಅಶ್ವಿನ್ ಜತೆಗೆ ಇಂಗ್ಲೆಂಡ್‌ನ ಸ್ಪಿನ್ನರ್ ಗ್ರೇಮ್ ಸ್ವಾನ್, ಭಾರತದ ರಮೇಶ್ ಪೊವರ್ ಅವರ ಬೌಲಿಂಗ್ ಶೈಲಿಯ ಚಿತ್ರಗಳಿದ್ದರೆ, ಕತ್ರೀನಾ ಕೈಫ್​ ಅವರ ನೃತ್ಯದ ಭಂಗಿಯ ಚಿತ್ರವೊಂದು ಆಫ್​-ಸ್ಪಿನ್ನರ್‌ಗಳ ಬೌಲಿಂಗ್ ಶೈಲಿಯನ್ನೇ ಹೋಲುತ್ತಿದೆ. ಕ್ರಿಕೆಟ್ ಪ್ರೇಮಿಯೊಬ್ಬರು ಈ ಚಿತ್ರಗಳನ್ನು ಬಳಸಿ ಮಾಡಿರುವ ತಮಾಷೆಯ ಕೊಲಾಜ್ ಅನ್ನೇ ಅಶ್ವಿನ್ ಕೂಡ ಹಂಚಿಕೊಂಡಿದ್ದಾರೆ.

‘ಆಫ್​ ಸ್ಪಿನ್ನರ್‌ಗಳ ವಿವಿಧ ಬೌಲಿಂಗ್ ಶೈಲಿ’ ಎಂದು ಅಶ್ವಿನ್ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಈ ಚಿತ್ರಗಳ ಕೊಲಾಜ್ ಕ್ರಿಕೆಟ್ ಪ್ರೇಮಿಗಳಲ್ಲಿ ನಗು ಮೂಡಿಸಿದೆ. ಅವರು ಈ ಇನ್‌ಸ್ಟಾಗ್ರಾಂ ಸ್ಟೋರಿಗೆ ರಮೇಶ್ ಪೊವರ್‌ರನ್ನೂ ಟ್ಯಾಗ್ ಮಾಡಿದ್ದಾರೆ.

ಅಶ್ವಿನ್ ಅವರನ್ನು ಒಳಗೊಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೆಪ್ಟೆಂಬರ್ 20ರಂದು ನಡೆಯಲಿರುವ ಐಪಿಎಲ್ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಅವರ ಕಳೆದ ವರ್ಷದ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್ ಅನ್ನು ಎದುರಿಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net