ಅರ್ಹತಾ ಕೂಟಗಳು ಅಸ್ತವ್ಯಸ್ತ!: ಒಲಿಂಪಿಕ್ಸ್​ಗೆ ಹೊಡೆತ | ಕ್ರೀಡಾಪಟುಗಳು, ಆಯೋಜಕರಿಗೆ ನಿಲ್ಲದ ಚಿಂತೆ

sports 22 mar 20
Published on

ಜಾಗತಿಕ ಕ್ರೀಡಾಲೋಕವನ್ನೇ ಸ್ತಬ್ಧ ಮಾಡಿರುವ ಕರೊನಾ ವೈರಸ್ ದಿನದಿಂದ ದಿನಕ್ಕೆ ಕ್ರೀಡೆಗೆ ಮಾರಕವಾಗುತ್ತಿದೆ. ಗಲ್ಲಿ ಕ್ರಿಕೆಟ್​ನಿಂದ ಹಿಡಿದು ಐಪಿಎಲ್​ವರೆಗೂ ಮುಂದೂಡಿಕೆಯಾಗಿದ್ದರೆ, ನಾಲ್ಕು ವರ್ಷಕ್ಕೊಮ್ಮೆ ಬರುವ ಯುರೋಕಪ್ ಈಗಾಗಲೆ ಮುಂದೂಡಿಕೆಯಾಗಿದೆ. ಈ ನಡುವೆ ಪ್ರತಿಷ್ಠಿತ ಟೋಕಿಯೊ ಒಲಿಂಪಿಕ್ ಕ್ರೀಡಾಕೂಟ ಕೂಡ ನಡೆಯುವುದೇ ಅನುಮಾನವಾಗಿದೆ. ಈ ಮಹಾಸಮರದಲ್ಲಿ ಪಾಲ್ಗೊಂಡು ಪದಕ ಜಯಿಸುವ ಸಲುವಾಗಿ ವರ್ಷಾನುಗಟ್ಟಲೇ ಜಪ ಮಾಡುವ ಕ್ರೀಡಾಪಟುಗಳ ಪಾಲಿಗಂತೂ ವಿಲನ್ ಆಗಿದೆ. ಒಲಿಂಪಿಕ್ಸ್​ಗೂ ಮುನ್ನ ನಡೆಯುವ ಅರ್ಹತಾ ಕೂಟಗಳೇ ಮುಂದೂಡಿಕೆಯಾಗುತ್ತಿವೆ. ಪ್ರತಿಷ್ಠಿತ ಒಲಿಂಪಿಕ್ಸ್​ಗೆ ಅರ್ಹತೆ ಗಿಟ್ಟಿಸಿಕೊಳ್ಳಲು ಕ್ರೀಡಾಪಟುಗಳಿಗಿರುವ ಕಡೇ ಅವಕಾಶ ಇದಾಗಿರುತ್ತದೆ. ವಿವಿಧ ಕ್ರೀಡೆಗಳ ಅರ್ಹತಾ ಕೂಟಗಳ ಸಂಕ್ಷಿಪ್ತ ನೋಟ ಇಲ್ಲಿದೆ.

ಬಾಸ್ಕೆಟ್​ಬಾಲ್

ಪುರುಷರ ವಿಭಾಗ: ಅಮೆರಿಕ ಸೇರಿದಂತೆ 8 ತಂಡಗಳು ಈಗಾಗಲೆ ಅರ್ಹತೆ ಗಿಟ್ಟಿಸಿಕೊಂಡಿವೆ. ಉಳಿದ 4 ಸ್ಥಾನಕ್ಕಾಗಿ ಪೈಪೋಟಿ ಏರ್ಪಟ್ಟಿದೆ. ಜೂನ್ 23-28 ರಿಂದ ಸೆರ್ಬಿಯಾ, ಕೆನಡಾ, ಕ್ರೋವೆಷಿಯಾ ಹಾಗೂ ಲಿಥುವಾನಿಯಾದಲ್ಲಿ ಟೂರ್ನಿ ನಡೆಯಲಿದೆ. ್ಞುಹಿಳಾ ವಿಭಾಗ: ನಾಲ್ಕು ಟೂರ್ನಿಗಳ ಮೂಲಕ 12 ತಂಡಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಅಮೆರಿಕ ಹಾಗೂ ಆತಿಥೇಯ ಜಪಾನ್ ತಂಡಗಳು ಅರ್ಹತೆ ಗಿಟ್ಟಿಸಿಕೊಂಡಿವೆ. ್ಞ/3 : ಮಾರ್ಚ್ 18 ರಿಂದ 22 ರವರೆಗೆ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಏಷ್ಯನ್ ಫಿಬಾ 3/3 ಅರ್ಹತಾ ಟೂರ್ನಿಯನ್ನು ಮುಂದೂಡಲಾಗಿದೆ. ಇದೇ ಟೂರ್ನಿಯೂ ಹಂಗೆರಿಯ ಲಿಂಬೊವಿನಲ್ಲಿ ಮುಂದಿನ ಏಪ್ರಿಲ್​ನಲ್ಲಿ ನಡೆಯಬೇಕಿದೆ. ಪುರುಷರ ಹಾಗೂ ಮಹಿಳಾ ವಿಭಾಗದಿಂದ ತಲಾ 8 ತಂಡಗಳು ಸ್ಪರ್ಧಿಸುತ್ತಿದ್ದು, ಈಗಾಗಲೇ ತಲಾ 4 ತಂಡಗಳು ಅರ್ಹತೆ ಗಿಟ್ಟಿಸಿಕೊಂಡಿವೆ.

ಫೀಲ್ಡ್ ಹಾಕಿ

2019ರಲ್ಲೇ ಪುರುಷರ ಹಾಗೂ ಮಹಿಳಾ ವಿಭಾಗದಿಂದ ತಲಾ 12 ತಂಡಗಳು ಅರ್ಹತೆ ಗಿಟ್ಟಿಸಿಕೊಂಡಿವೆ. ಆಸ್ಟ್ರೇಲಿಯಾ, ಅರ್ಜೆಂಟೀನಾ, ಜರ್ಮನಿ, ಭಾರತ, ಜಪಾನ್, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಸ್ಟೇನ್, ನೆದರ್ಲೆಂಡ್ಸ್ ಹಾಗೂ ಬ್ರಿಟನ್ ತಂಡಗಳು ಪುರುಷರ ಹಾಗೂ ಮಹಿಳಾ ವಿಭಾಗದಿಂದ ಅರ್ಹತೆ ಪಡೆದಿವೆ.

ಟೇಬಲ್ ಟೆನಿಸ್

ಅಮೆರಿಕ ತಂಡ ಸೇರಿದಂತೆ 3 ತಂಡಗಳು ಈಗಾಗಲೇ ಪುರುಷರ, ಮಹಿಳಾ ವಿಭಾಗದಿಂದ ಅರ್ಹತೆ ಗಿಟ್ಟಿಸಿಕೊಂಡಿದೆ. ಅರ್ಹತಾ ಟೂರ್ನಿಗಳು ಇನ್ನು ನಡೆಯಬೇಕಿದ್ದು, ಕರೊನಾ ಭೀತಿಯಿಂದ ಮುಂದೂಡಲಾಗಿದೆ. ಅಂತಾರಾಷ್ಟ್ರೀಯ ಟೇಬಲ್ ಟೆನಿಸ್ ಫೆಡರೇಷನ್ ಎಲ್ಲ ಚಟುವಟಿಕೆಗಳನ್ನು ರದ್ದುಗೊಳಿಸಿದೆ.

ಕುಸ್ತಿ

ಬಹುತೇಕ ಆಯ್ಕೆ ಟ್ರಯಲ್ಸ್ ಟೂರ್ನಿಗಳು ರದ್ದುಗೊಂಡಿವೆ. ಏಪ್ರಿಲ್ 4-5 ರಂದು ನಿಗದಿಯಾಗಿದ್ದ ಯುಎಸ್ ಟ್ರಯಲ್ಸ್ ರದ್ದುಗೊಂಡಿದ್ದರೆ, ಇದೇ ಮಾದರಿಯಲ್ಲಿ ಪಾನ್ ಅಮೆರಿಕ, ಆಫ್ರಿಕಾ, ಓಶಿಯಾನಿಯಾ, ಯೂರೋಪಿಯನ್, ಏಷ್ಯ ಹಾಗೂ ವಿಶ್ವ ಅರ್ಹತಾ ಟೂರ್ನಿಗಳು ರದ್ದುಗೊಂಡಿವೆ.

ಫುಟ್​ಬಾಲ್

್ಞುರುಷರ ವಿಭಾಗ: 16 ತಂಡಗಳ ಪೈಕಿ ಈಗಾಗಲೇ 14 ತಂಡಗಳು ಅರ್ಹತೆ ಪಡೆದಿವೆ. ನಾರ್ಥ್, ಸೆಂಟ್ರಲ್ ಅಮೆರಿಕ ಹಾಗೂ ಕೆರಿಬಿಯನ್ ವಲಯಗಳಿಂದ ಎರಡು ತಂಡಗಳಿಗೆ ಅವಕಾಶವಿದೆ. ಮೆಕ್ಸಿಕೊದಲ್ಲಿ ಮಾರ್ಚ್ 20 ರಿಂದ ಏಪ್ರಿಲ್ 1ರವರೆಗೆ ನಡೆಯಬೇಕಿದ್ದ ಅರ್ಹತಾ ಕೂಟ ರದ್ದುಗೊಂಡಿದೆ. ್ಞುಹಿಳಾ ವಿಭಾಗ: 12 ತಂಡಗಳ ಪೈಕಿ ಈಗಾಗಲೇ ವಿಶ್ವಕಪ್ ಚಾಂಪಿಯನ್ ಅಮೆರಿಕೆ ಸೇರಿದಂತೆ, 10 ತಂಡಗಳು ಅರ್ಹತೆ ಪಡೆದಿವೆ. ಚೀನಾ ಹಾಗೂ ದಕ್ಷಿಣ ಕೊರಿಯಾ ತಂಡಗಳು ಎರಡು ಚರಣದ ಪ್ಲೇಆಫ್ ಟೂರ್ನಿ ಆಡಬೇಕಿದ್ದು, ಜೂನ್​ವರೆಗೂ ಮುಂದೂಡಿಕೆಯಾಗಿದೆ. ಕ್ಯಾಮರೂನ್ ಹಾಗೂ ಚಿಲಿ ಮತ್ತೊಂದು ಹಣಾಹಣಿಯಲ್ಲಿ ಹೋರಾಟಬೇಕಿದೆ.

ವೇಟ್​ಲಿಫ್ಟಿಂಗ್

ವಿಶ್ವ ರ‍್ಯಾಂಕಿಂಗ್ ಮೂಲಕವೇ ಅರ್ಹತೆ ನಿಗದಿಪಡಿಸಲಾಗುತ್ತದೆ. ಮುಂದಿನ ತಿಂಗಳು ನಡೆಯಬೇಕಿದ್ದ ವಿವಿಧ ಕಾಂಟಿನೆಂಟಲ್ ಚಾಂಪಿಯನ್​ಷಿಪ್​ಗಳು ರದ್ದುಗೊಂಡಿವೆ. ಯೂರೋಪಿಯನ್, ಏಷ್ಯಾ, ಆಫ್ರಿಕಾ ಚಾಂಪಿಯನ್​ಷಿಪ್​ಗಳನ್ನು ಮುಂದೂಡಲಾಗಿದೆ.

ರೋಯಿಂಗ್

ವಿಶ್ವ ರೋಯಿಂಗ್ ಸಂಸ್ಥೆ ಏಪ್ರಿಲ್ 27ರಿಂದ 29ರವರೆಗೆ ಇಟಲಿಯಲ್ಲಿ ನಡೆಯಬೇಕಿದ್ದ ಯುರೋಪಿಯನ್ ಅರ್ಹತಾ ಟೂರ್ನಿಯನ್ನು ರದ್ದುಗೊಳಿಸಿದೆ. ಯುಎಸ್ ರೋಯಿಂಗ್ ಸಂಸ್ಥೆಯ ಫ್ಲೋರಿಡಾದಲ್ಲಿ ಮಾರ್ಚ್ 16 ರಿಂದ 21 ಹಾಗೂ ಏಪ್ರಿಲ್ 13 ರಿಂದ 18 ರವರೆಗೆ ಆಯೋಜಿಸಬೇಕಿದ್ದ ಅರ್ಹತಾ ಟೂರ್ನಿಯನ್ನು ಮುಂದೂಡಿದೆ. ಮುಂದಿನ 30 ದಿನಗಳ ಕಾಲ ಯಾವುದೇ ಟೂರ್ನಿ ನಡೆಸದಿರಲು ನಿರ್ಧರಿಸಿದೆ.

ಬಾಕ್ಸಿಂಗ್

ಒಲಿಂಪಿಕ್ಸ್ ಅರ್ಹತೆಗೆ 4 ಪ್ರಾದೇಶಿಕ ವಲಯಗಳಿದ್ದು, ಇದರಲ್ಲಿ ಈಗಾಗಲೇ ಎರಡು ವಲಯಗಳಲ್ಲಿ ಅರ್ಹತಾ ಟೂರ್ನಿಗಳ ಮುಕ್ತಾಯ ಕಂಡಿವೆ. ಲಂಡನ್​ನಲ್ಲಿ ಕಳೆದ ಸೋಮವಾರ ನಡೆಯಬೇಕಿದ್ದ ಯುರೋಪಿಯನ್ ಫೈಟರ್ಸ್ ಟೂರ್ನಿ ರದ್ದುಗೊಂಡಿದೆ. ಮಾರ್ಚ್ 26ರಿಂದ ಅಮೆರಿಕ ವಲಯದ ಅರ್ಹತಾ ಕೂಟವೂ ರದ್ದುಗೊಳಿಸಲಾಗಿದೆ. ಈ ಎರಡೂ ಕೂಟಗಳು ರದ್ದುಗೊಂಡ ಹಿನ್ನೆಲೆಯಲ್ಲಿ ಮೇ 13ರಂದು ಪ್ಯಾರಿಸ್​ನಲ್ಲಿ ನಡೆಯಲಿರುವ ವಿಶ್ವ ಒಲಿಂಪಿಕ್ ಅರ್ಹತಾ ಟೂರ್ನಿ ಮೂಲಕ ಒಲಿಂಪಿಕ್ಸ್​ಗೆ ಪ್ರವೇಶ ಪಡೆಯ ಬಹುದು. ಭಾರತದಿಂದ ಈಗಾಗಲೆ ದಾಖಲೆಯ 9 ಬಾಕ್ಸರ್​ಗಳು ಒಲಿಂಪಿಕ್ಸ್ ಅರ್ಹತೆ ಸಂಪಾದಿಸಿದ್ದಾರೆ.

ಅಥ್ಲೆಟಿಕ್ಸ್

ಜೂನ್ 19ರಿಂದ 28ರವರೆಗೆ ಒರೆಗಾನ್​ನಲ್ಲಿ ಯುಎಸ್ ಒಲಿಂಪಿಕ್ ಟ್ರಾ್ಯಕ್ ಹಾಗೂ ಫೀಲ್ಡ್ ಆಯ್ಕೆ ಟ್ರಯಲ್ಸ್ ನಡೆಯಲಿದೆ. ಇತರ ದೇಶಗಳು ಟ್ರೖೆಯಲ್ಸ್, ವಿಶ್ವ ರ‍್ಯಾಂಕಿಂಗ್ ಹಾಗೂ ಇನ್ನಿತರ ಫಲಿತಾಂಶಗಳ ಮೇಲೆ ಅಥ್ಲೀಟ್​ಗಳಿಗೆ ಒಲಿಂಪಿಕ್ಸ್​ಗೆ ಅರ್ಹತೆ ನೀಡುತ್ತವೆ.

ಟೆನಿಸ್

ಡಬ್ಲ್ಯುಟಿಎ ಹಾಗೂ ಎಟಿಪಿ ರ‍್ಯಾಂಕಿಂಗ್ ಆಧಾರದಲ್ಲಿ ಒಲಿಂಪಿಕ್ಸ್​ಗೆ ಅರ್ಹತೆ ನೀಡಲಾಗುತ್ತದೆ. ಜೂನ್ 8ರ ವೇಳೆಗೆ ಉತ್ತಮ ರ‍್ಯಾಂಕಿಂಗ್ ಹೊಂದಿರುವ ಆಟಗಾರರು ಟೋಕಿಯೊಗೆ ಪ್ರವೇಶ ಪಡೆಯಲಿದ್ದಾರೆ. ಮಾರ್ಚ್, ಏಪ್ರಿಲ್​ನಲ್ಲಿ ನಡೆಯಬೇಕಿದ್ದ ಬಹುತೇಕ ಟೂರ್ನಿಗಳು ರದ್ದುಗೊಂಡಿವೆ. ಜೂನ್ 7ರವರೆಗೆ ಟೆನಿಸ್ ಚಟುವಟಿಕೆ ನಿಂತಿದ್ದು, ಆಟಗಾರರ ರ‍್ಯಾಂಕಿಂಗ್ ಕೂಡ ಸದ್ಯ ನಿಷ್ಕ್ರಿಯಗೊಂಡಿದೆ. ಇದು ರ್ಯಾಂಕಿಂಗ್​ನಲ್ಲಿ ಮೇಲೇರುವ ಅವಕಾಶ ಹೊಂದಿದ್ದ ಆಟಗಾರರಿಗೆ ಹಿನ್ನಡೆಯಾದಂತಾಗಿದೆ.

ಜುಡೋ

ಅಂತಾರಾಷ್ಟ್ರೀಯ ಜುಡೋ ಫೆಡರೇಷನ್, ಒಲಿಂಪಿಕ್​ನ ಎಲ್ಲ ಅರ್ಹತಾ ಟೂರ್ನಿಗಳನ್ನು ಏಪ್ರಿಲ್ 30ರವರೆಗೆ ರದ್ದು ಗೊಳಿಸಿದೆ. ಗ್ರಾ್ಯಂಡ್ ಸ್ಲಾಂ, ಎರಡು ಗ್ರಾ್ಯನ್ ಪ್ರಿ ಸೇರಿದಂತೆ ಬಹುತೇಕ ಅರ್ಹತಾ ಟೂರ್ನಿಗಳು ರದ್ದುಗೊಂಡಿವೆ. ಟೋಕಿಯೊಗೆ ಅರ್ಹತೆ ಗಿಟ್ಟಿಸಲು ಮೇ25 ಕಡೇ ದಿನವಾಗಿದೆ.

ಜಿಮ್ನಾಸ್ಟಿಕ್ಸ್

ಕಳೆದ ವರ್ಷದ ವಿಶ್ವ ಚಾಂಪಿಯನ್​ಷಿಪ್​ನ ನಿರ್ವಹಣೆ ಮಾನದಂಡದ ಆಧಾರದ ಮೇಲೆ ಪುರುಷರ ಹಾಗೂ ಮಹಿಳಾ ತಂಡದ ವಿಭಾಗದಲ್ಲಿ ಅರ್ಹತೆ ನೀಡಲಾಗಿದೆ. ಆಲ್ರೌಂಡ್ ವಿಭಾಗದಲ್ಲಿ ಜರ್ಮನಿಯಲ್ಲಿ ನಡೆಯಬೇಕಿದ್ದ ವಿಶ್ವಕಪ್ ಟೂರ್ನಿಯನ್ನು ಸ್ಥಗಿತಗೊಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net